Advertisement

ಗಾಯಕಿಯಾದ ಹಿರಿಯ ಪೊಲೀಸ್‌ ಅಧಿಕಾರಿ

10:01 AM Aug 01, 2019 | Lakshmi GovindaRaj |

ಹಾಡೋಕೆ ಹುದ್ದೆ ಬೇಕಿಲ್ಲ. ಒಳ್ಳೆಯ ಧ್ವನಿ ಇದ್ದರೆ, ಶ್ರುತಿ ಲಯಬದ್ಧವಾಗಿದ್ದರೆ ಸಾಕು ಯಾರು ಬೇಕಾದರೂ ಗಾಯಕರಾಗಬಹುದು. ಅದಕ್ಕೆ ಸಾಕ್ಷಿಯೆಂಬಂತೆ ಈಗಾಗಲೇ ಕಣ್ಣೆದುರೇ ಕುರಿಗಾಹಿ ಹನುಮಂತಪ್ಪ ಬಟ್ಟೂರ, ರೈತ ಮಹಿಳೆ ಗಂಗಮ್ಮ ಗಾಯಕರಾಗಿ ಗಮನಸೆಳೆದಿದ್ದು ಗೊತ್ತೇ ಇದೆ. ಈಗ ಪೊಲೀಸ್‌ ಅಧಿಕಾರಿಯ ಸರದಿ. ಹೌದು, ಐಪಿಎಸ್‌ ಹಿರಿಯ ಅಧಿಕಾರಿ ರೂಪಾ ಅವರು ಇದೇ ಮೊದಲ ಸಲ ಚಿತ್ರವೊಂದಕ್ಕೆ ಹಾಡುವ ಮೂಲಕ ಗಾಯಕಿ ಎನಿಸಿಕೊಂಡಿದ್ದಾರೆ.

Advertisement

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ “ಬಯಲಾಟದ ಭೀಮಣ್ಣ’ ಚಿತ್ರದ ಮೂಲಕ ಪೊಲೀಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಗಾಯಕಿ ಪಟ್ಟ ಅಲಂಕರಿಸಿದ್ದಾರೆ. ಆ ಚಿತ್ರದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ “ಕೆಂಪಾನೆ ಕಂದ…’ ಎಂದು ಶುರುವಾಗು ಹಾಡಿಗೆ ರೂಪಾ ಅವರು ಧ್ವನಿಯಾಗಿದ್ದಾರೆ. ಈ ಕುರಿತು ಹೇಳಿಕೊಳ್ಳುವ ಪೊಲೀಸ್‌ ಅಧಿಕಾರಿ ರೂಪಾ, “ನಾನು ಹಾಡು ಹಾಡಿದ್ದು ಖುಷಿಕೊಟ್ಟಿದೆ.

ಇಷ್ಟು ದಿನ ಕೆಲಸದ ಜಂಜಾಟದಲ್ಲೇ ಇದ್ದ ನನಗೆ, ನಿರ್ದೇಶಕರು ಒಮ್ಮೆ ಕರೆ ಮಾಡಿ, ನೀವು ಹಾಡ್ತೀರಾ ಅಂತ ಕೇಳಿದರು. ನಾನು ಶಾಲೆ ದಿನಗಳಲ್ಲಿ ಹಾಡಿದ್ದು ಬಿಟ್ಟರೆ, ಬೇರೇನೂ ಇರಲಿಲ್ಲ. ಆದರೆ, ರವಿಚಂದ್ರನ್‌ ಅವರ “ಕರುನಾಡ ತಾಯಿ ಸದಾ ಚಿನ್ಮಯಿ…’ ಹಾಡನ್ನು ಹೆಚ್ಚು ಕೇಳುತ್ತಿದ್ದೆ, ಹಾಡುತ್ತಿದ್ದೆ. ಜಿಲ್ಲಾ ಮಟ್ಟದಲ್ಲಿ ಹಾಡುವ ಮೂಲಕ ಬಹುಮಾನ ಪಡೆದಿದ್ದೂ ಇದೆ. ಸಂಗೀತದ ಮೇಲೆ ಆಸಕ್ತಿ ಇತ್ತು. ಆದರೆ, ಎಲ್ಲರೂ ಎಲ್ಲವನ್ನೂ ಮಾಡುವುದಕ್ಕಾಗುವುದಿಲ್ಲ.

ನಾನು ಯಾದಗಿರಿಯಲ್ಲಿ ಎಸ್‌.ಪಿ.ಯಾಗಿ ಕೆಲಸ ಮಾಡುವಾಗ ಹಿಂದೂಸ್ತಾನಿ ಕ್ಲಾಸಿಕಲ್‌ ತರಬೇತಿ ಪಡೆದಿದ್ದೆ. ಹಾಗಾಗಿ, ಈ ಚಿತ್ರದಲ್ಲಿ ಹಾಡಲು ಸಹಾಯವಾಯ್ತು. ಮೊದಲ ಸಲ ನಾನು ಹಾಡಿದ್ದು ಸಂತಸ ತಂದಿದೆ. ಚಿತ್ರದ ವಿಶೇಷವೆಂದರೆ, ಮೊದಲ ಸಲ ಹೊಸಬರಿಂದ ಹಾಡಿಸಿರುವುದು. ಸಂಚಾರಿ ವಿಜಯ್‌, ಹನುಮಂತಪ್ಪ ಬಟ್ಟೂರ, ಸುಂದರ್‌ರಾಜ್‌ ಅವರು ನನ್ನೊಂದಿಗೆ ಹಾಡಿದ್ದಾರೆ. ಈಗಿನ ಮಾಡರ್ನ್ ಹುಡುಗರಿಗೆ ಹಾಡು ರುಚಿಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಇಂಥದ್ದೊಂದು ಅವಕಾಶ ಕೊಟ್ಟ ನಿರ್ದೇಶಕರಿಗೆ ಥ್ಯಾಂಕ್ಸ್‌ ಹೇಳ್ತೀನಿ’ ಎನ್ನುತ್ತಾರೆ ರೂಪಾ.

Advertisement

Udayavani is now on Telegram. Click here to join our channel and stay updated with the latest news.

Next