Advertisement

ಸಿಂಗಾಪುರದಲ್ಲಿ ಸೋಂಕು ಪ್ರಕರಣ ಹೆಚ್ಚಳ ; ಗೆಲುವಿನ ನಗೆ ಬೀರಿದ್ದ ದೇಶ ಎಡವಿದ್ದೆಲ್ಲಿ?

11:35 PM Apr 22, 2020 | Hari Prasad |

ಮಣಿಪಾಲ: ಚೀನ, ಅಮೆರಿಕ, ಭಾರತ, ಇಟಲಿ, ಫ್ರಾನ್ಸ್ ಹೀಗೆ ಜಗತ್ತಿನ ಎಲ್ಲ ಪ್ರಬಲ ರಾಷ್ಟ್ರಗಳೂ ಚೋಟುದ್ದುದ ವೈರಾಣುವಿನಿಂದ ಹೈರಾಣಾಗಿ ತಲೆ ಮೇಲೆ ಕೈಹೊತ್ತು ಕುಳಿತಿವೆ. ಈಗ ಸಿಂಗಾಪುರ ಸಹ ಸೋಂಕಿನ ಅಟ್ಟಹಾಸಕ್ಕೆ ನಲುಗಿದೆ.

Advertisement

ಈ ಹಿಂದೆ ಸೋಂಕು ಹರಡುವಿಕೆ ತಡೆಗಟ್ಟಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಇತರೆ ದೇಶಗಳಿಗೆ ಸಿಂಗಾಪುರ ಎಂಬ ಚಿಕ್ಕ ದೇಶ ಮಾದರಿ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗೆ ಸಿಂಗಾಪುರ ಸಾಕ್ಷಿಯಾಗಿದ್ದು, ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಗೆಲುವಿನ ನಗೆ ಬೀರಿತ್ತು
ಸಿಂಗಾಪುರ ತುಂಬಾ ಪುಟ್ಟ ದೇಶ. ಒಟ್ಟು ಜನಸಂಖ್ಯೆ 5,838,208. ಪ್ರತಿ ಚದರ ಕಿಲೋಮೀಟರ್‌ ಗೆ 8358 ಜನ ಸಾಂದ್ರತೆ ಹೊಂದಿದೆ. ಹಾಗಾಗಿ ಕೋವಿಡ್‌-19 ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಡೀ ದೇಶವನ್ನೇ ವ್ಯಾಪಿಸುವುದರಲ್ಲಿ ಸಂಶಯವೇ ಇಲ್ಲ.

ಈ ದುರಂತವನ್ನು ತಪ್ಪಿಸಲು ಪ್ರಾರಂಭಿಕ ಹಂತದಲ್ಲಿಯೇ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 8,930 ಮಂದಿಯನ್ನು ಸರಕಾರ ಗುರುತಿಸಿ, 2,643 ಮಂದಿಗೆ ದಿಗ್ಬಂಧನ ವಿಧಿಸಿತ್ತು. ಸ್ಟೇ ಹೋಂ ನೋಟಿಸ್‌ನಲ್ಲಿ ಸುಮಾರು 38,000 ಮಂದಿಯನ್ನಿಟ್ಟು, ಕಟ್ಟುನಿಟ್ಟಾಗಿ ವ್ಯವಸ್ಥೆಯನ್ನು ಜಾರಿ ಮಾಡಿ ಗೆಲುವಿನ ನಗೆ ಬೀರಿತ್ತು.

ಆದರೀಗ ಮಾರ್ಚ್‌ 17 ರ ಬಳಿಕ ಸೋಂಕು ಪ್ರಕರಣಗಳ ಸಂಖ್ಯೆ ಏರುತ್ತಿದೆ. ಮಾರ್ಚ್‌ ಮಧ್ಯಂತರದಲ್ಲಿ 266ರಷ್ಟಿದ್ದ ಸೋಂಕಿತರ ಸಂಖ್ಯೆ 15 ದಿನಗಳು ಕಳೆಯುವುದರ ಒಳಗೆ 6 ಸಾವಿರಕ್ಕೇರಿತು. ವಿಶ್ವದಲ್ಲೇ ಉತ್ತಮ ದರ್ಜೆಯ ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆಗಳು, ಸೋಂಕನ್ನು ನಿಯಂತ್ರಿಸಲು ಉಪಯುಕ್ತವಾಗುವ ಸೌಲಭ್ಯಗಳಿದ್ದರೂ ಸಿಂಗಾಪುರ ಎಡವಿತ್ತು.

Advertisement

ವಲಸೆ ಕಾರ್ಮಿಕರನ್ನು ಮರೆತ ದೇಶ
ಇಷ್ಟೆಲ್ಲ ಸವಲತ್ತುಗಳಿದ್ದರೂ ಎಲ್ಲಿ ತಪ್ಪಾಯಿತು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಅದಕ್ಕೆ ಉತ್ತರ ಎಂದರೆ ಸರಕಾರವು ವಲಸೆ ಕಾರ್ಮಿಕರನ್ನು ಮರೆತೇ ಬಿಟ್ಟಿತ್ತು. ನಗರಗಳಿಂದಾಚೆಗೆ ವಾಸಿಸುವ ವಲಸೆ ಕಾರ್ಮಿಕರಿಗೆ ಪರೀಕ್ಷೆ ಮಾಡದೇ ಇರುವುದೇ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ಅಂದಾಜು ಮಾಡಲಾಗಿದೆ. ಹೊರ ದೇಶಗಳಿಂದ ಬಂದ ಸಾವಿರಾರು ಕಾರ್ಮಿಕರನ್ನು ತಪಾಸಣೆ ಮಾಡದೇ ದೇಶದೊಳಗೆ ಬಿಡಲಾಗಿತ್ತು ಎನ್ನಲಾಗಿದೆ.

ಸಾಮಾಜಿಕ ಅಂತರ ಅವಗಣನೆ
ಈ ಕಾರ್ಮಿಕರು ಇರುವ ಪ್ರದೇಶಗಳಲ್ಲಿ ಜನ ಸಾಂದ್ರತೆಯೂ ಹೆಚ್ಚಿದ್ದು, ಇಕ್ಕಟ್ಟಿನ ಪ್ರದೇಶದಲ್ಲಿ ಸಹಸ್ರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಜತೆಗೆ ಇಲ್ಲಿ ಯಾವುದೇ ಲಾಕ್‌ಡೌನ್‌ ನಿಯಮಗಳು ಜಾರಿ ಇಲ್ಲ ಎಂಬ ಮಾಹಿತಿ ದೃಢಪಟ್ಟಿದ್ದು, ಸಾಮಾಜಿಕ ಅಂತರವನ್ನು ಅವಗಣಿಸಲಾಗಿದೆ. ಇವೆಲ್ಲವೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈಗ ಹೊರ ದೇಶಗಳಿಂದ ಬಂದ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚುವ ಕೆಲಸ ಆರಂಭಿಸಲಾಗಿದೆ.

ನ್ಯೂಜಿಲೆಂಡ್‌: ಲಾಕ್‌ಡೌನ್‌ ಮುಂದುವರಿಕೆ
ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್‌ಡೌನ್‌ ನಿಯಮ ಇನ್ನೂ ಒಂದುವಾರ ಮುಂದುವರೆಯಲಿದೆ ಎಂದು ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಆರ್ಡೆರ್ನ್ ಘೋಷಿಸಿದ್ದಾರೆ. ನಾಲ್ಕು ವಾರಗಳಿಂದ ಅಗತ್ಯ ವಸ್ತುಗಳ ಖರೀದಿಗೆ ಹೊರತು ಜನರು ಮನೆಯಿಂದ ಹೊರ ಬರುವುದನ್ನು ನಿರ್ಬಂಧಿಸಲಾಗಿತ್ತು. ಆದರೆ, ಇನ್ನೊಂದು ವಾರದ ಬಳಿಕ ನಿರ್ಮಾಣ ಕಾರ್ಮಿಕರು, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಮತ್ತಿತರ ಪ್ರಮುಖ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನ‌ ಸಾರ್ವಜನಿಕ ಪ್ರಸಾರ ಕೇಂದ್ರದ ಮಾಹಿತಿ ಪ್ರಕಾರ, ‘ಸೋಂಕು ಪ್ರಸರಣ ಶೇ.0.48 ರಷ್ಟಿದ್ದು, ಇತರೆ ದೇಶಗಳಲ್ಲಿ ಶೇ.2.5 ರಷ್ಟಿದೆ. ಹಾಗಾಗಿ ನಾವು ಸೋಂಕು ನಿಯಂತ್ರಣದಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಸಾಧಿಸಲಾಗಿದೆ’ ಎಂದು ತಿಳಿಸಿದೆ. ಮುಂದಿನ ವಾರದಿಂದ ಕೆಲ ಶಾಲಾ, ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಆದರೆ, ಪೋಷಕರು ತಮ್ಮ ಮಕ್ಕಳು ಮನೆಯಲ್ಲೇ ಕೂತು ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next