ಸಿಂಗಾಪುರ : ಭಾರತೀಯರ ಬಾಹುಳ್ಯವಿರುವ ಇಲ್ಲಿನ Little India ಪ್ರದೇಶದಲ್ಲಿ ದೀಪಾವಳಿ ಮುನ್ನಾ ದಿನ ಕಾನೂನು ಬಾಹಿರವಾಗಿ ಪಟಾಕಿ ಸಿಡಿಸಿದ ಕೃತ್ಯಕ್ಕಾಗಿ ಭಾರತೀಯ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು ಅವರ ವಿರುದ್ದ ಕೇಸು ದಾಖಲಿಸಲಾಗಿದೆ; ಇವರಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 2,000 ದಿಂದ 10,000 ಸಿಂಗಾಪುರ ಡಾಲರ್ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸಿಂಗಾಪುರದಲ್ಲಿ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಪಟಾಕಿ, ಸುಡುಮದ್ದು ಸುಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಆರೋಪಿಗಳಾದ ತ್ಯಾಗು ಸೆಲ್ವರಾಜು (29) ಮತ್ತು ಶಿವ ಕುಮಾರ್ ಸುಬ್ರಮಣಿಯನ್ (48) ವಿರುದ್ಧ ಅಪಾಯಕಾರಿ ಸುಡುಮದ್ದು ಸುಟ್ಟ ಮತ್ತು ಇದಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಗಿದೆ ಎಂದು ಸ್ಟ್ರೇಟ್ಸ್ ಟೈಮ್ಸ್ ಇಂದು ಗುರುವಾರ ವರದಿ ಮಾಡಿದೆ.
ಕೋರ್ಟಿಗೆ ಸಲ್ಲಿಸಲಾಗಿರುವ ದಾಖಲೆಗಳ ಪ್ರಕಾರ ಆರೋಪಿ ಶಿವ ಕುಮಾರನು ಸೋಮವಾರ ಮಧ್ಯ ರಾತ್ರಿ ಗ್ಲೌಸೆಸ್ಟರ್ ರೋಡ್‌ನ ಡಿವೈಡರ್ ಮೇಲೆ ಸುಡು ಮದ್ದು ತುಂಬಿದ್ದ ಪೆಟ್ಟಿಗೆಯೊಂದನ್ನು ಇರಿಸಿದ್ದಾನೆ; ಇನ್ನೋರ್ವ ಆರೋಪಿ ತ್ಯಾಗು ಅದಕ್ಕೆ ಬೆಂಕಿ ಹಚ್ಚಿದ್ದಾನೆ.
ಆದರೆ ಇವರಿಬ್ಬರು ಎಲ್ಲಿಂದ ಸುಡುಮದ್ದನ್ನು ಪಡೆದುಕೊಂಡರು ಎಂಬುದನ್ನು ಕೋರ್ಟ್ ದಾಖಲೆಪತ್ರಗಳಲ್ಲಿ ತಿಳಿಸಿಲ್ಲ. ಇವರಿಬ್ಬರನ್ನು ಮಂಗಳವಾರ ಬಂಧಿಸಲಾಗಿದೆ.