Advertisement

ಸಿಂಧು ಲೋಕನಾಥ್‌ ಸಾವಯವ ಸೂತ್ರ

08:58 AM May 23, 2019 | Nagendra Trasi |

ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌, ಏರೋಬಿಕ್ಸ್‌ ಹೀಗೆ ಒಂದಷ್ಟು ಫಿಸಿಕಲ್‌ ವರ್ಕೌಟ್, ತಮ್ಮದೇಯಾದ ಆಹಾರ ಪದ್ದತಿಯನ್ನು ರೂಢಿಸಿಕೊಂಡಿರುತ್ತಾರೆ. ಈಗ ಯಾಕೆ ತಾರೆಯರ ಆರೋಗ್ಯ ಸೂತ್ರದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಇಲ್ಲೊಬ್ಬ ನಟಿ ತಮ್ಮಂತೆಯೇ ಇತರರು ಕೂಡ ಫಿಟ್‌ ಆ್ಯಂಡ್‌ ಫೈನ್‌ ಆಗಿರಬೇಕು, ಅನ್ನೋ ಕಾರಣಕ್ಕಾಗಿ ರಾಸಾಯನಿಕ ಮುಕ್ತ ಸಾಮಯವ ಆಹಾರ ಪದಾರ್ಥಗಳನ್ನು ಪೂರೈಸುವ ಬ್ರ್ಯಾಂಡ್‌ ಅನ್ನು ಶುರು ಮಾಡಿದ್ದಾರೆ.

Advertisement

ಅಂದಹಾಗೆ, ಆ ನಟಿಯ ಹೆಸರು ಸಿಂಧು ಲೋಕನಾಥ್‌.  “ಪರಿಚಯ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಿಂಧು ಲೋಕನಾಥ್‌ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಹತ್ತು ವರ್ಷಗಳ ಸಿನಿ ಪಯಣವನ್ನು ಯಶಸ್ವಿಯಾಗಿ ಪೂರೈಸಿದ ನಟಿ. ಇಲ್ಲಿಯವರೆಗೆ ಸುಮಾರು ಹದಿನೈದಕ್ಕೂ ಹೆಚ್ಚು ಚಿತ್ರಗಳ ವಿವಿಧ ಪಾತ್ರಗಳಿಗೆ, ನಾಯಕಿಯಾಗಿ ಬಣ್ಣ ಹಚ್ಚಿರುವ ಸಿಂಧು ಕಳೆದ ವರ್ಷ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಇದೀಗ ಕೃಷ್ಣ ಅಜೇಯ್‌ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ನಾಯಕಿಯಾಗಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಸದ್ಯ ವೈಯಕ್ತಿಕ ಜೀವನ ಮತ್ತು ಸಿನಿ ಜೀವನ ಎರಡನ್ನೂ ತೂಗಿಸಿಕೊಂಡು ಹೋಗುತ್ತಿರುವ ಸಿಂಧು, ತಮ್ಮ ಬಿಡುವಿನ ವೇಳೆಯಲ್ಲಿ ರಾಸಾಯನಿಕ ಪದಾರ್ಥಗಳ ವಿರುದ್ದ ಜನಜಾಗೃತಿ ಮೂಡಿಸುತ್ತ ಸಾವಯವ ಪದಾರ್ಥಗಳ ಬಗ್ಗೆ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮದೇ ಆದ “ಸಿಂಪೋಲಿ ಮೈನ್‌’ ಎನ್ನುವ ಹೆಸರಿನ ಆರ್ಗ್ಯಾನಿಕ್ ಬ್ರ್ಯಾಂಡ್‌ನ‌ಲ್ಲಿ ಸಾವಯವ ಪದಾರ್ಥಗಳನ್ನು ಮಾರುಕಟ್ಟೆಗೆ ತಂದಿದ್ದಾರೆ.

ತಮ್ಮ ಹೊಸ ಕೆಲಸದ ಬಗ್ಗೆ ಮಾತನಾಡುವ ಸಿಂಧೂ, “ನಾನು ಸಿನಿಮಾದಲ್ಲಿದ್ದರೂ, ಅದರ ಜೊತೆ ನನ್ನ ಇಷ್ಟದ ಬೇರೆ ಬೇರೆ ಕೆಲಸಗಳನ್ನು ಮಾಡಲು ಬಯಸುತ್ತೇನೆ. ಹೆಲ್ತ್‌ ಆ್ಯಂಡ್‌ ವೆಲ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುವ ಸಲುವಾಗಿ ಇಂಥದ್ದೊಂದು ಹೊಸ ಉದ್ಯಮವನ್ನು ಆರಂಭಿಸುವ ಐಡಿಯಾ ಬಂದಿತು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇನೆ. ಗುಡ್‌ ಹೆಲ್ತ್‌ ಫಾರ್‌ ಆಲ್‌ ಎಂಬ ಆಶಯದ ಇದರ ಹಿಂದಿದೆ’ ಎನ್ನುತ್ತಾರೆ.

ತಮ್ಮ ಹೊಸ ಉದ್ಯಮದ ಶುರುವಾಗಿದ್ದು ಹೇಗೆ ಎನ್ನುವುದರ ಬಗ್ಗೆ ಮಾತನಾಡುವ ಸಿಂಧು, “ನಮ್ಮ ಮನೆಯಲ್ಲಿ ಮೊದಲಿನಿಂದಲೂ ಮನೆಯಲ್ಲೇ ಗಿಡ-ಮೂಲಿಕೆಗಳನ್ನು ಬಳಸಿ ಹೇರ್‌ ಆಯಿಲ್‌ ಮಾಡುತ್ತಿದ್ದರು. ನಾನು ಕೂಡ ಅದನ್ನೇ ಬಳಸುತ್ತೇನೆ. ಒಮ್ಮೆ ಬಿಡುವಿನ ವೇಳೆಯಲ್ಲಿ, ಇಂಥದ್ದೇ ಕೆಮಿಕಲ್ಸ್‌ ಫ್ರೀ ಇರುವ ಪದಾರ್ಥಗಳನ್ನು ಏಕೆ ತಯಾರಿಸಬಾರದು ಎಂಬ ಐಡಿಯಾ ಬಂತು. ಅದಕ್ಕಾಗಿ ಮನೆಯಲ್ಲೇ, ಗಿಡ-ಮೂಲಿಕೆಗಳು, ಸಾವಯವ ಪದಾರ್ಥಗಳನ್ನು ಬಳಸಿ ಸಣ್ಣದಾಗಿ ಪ್ರೊಡಕ್ಟ್ಗಳನ್ನು ತಯಾರಿಸಿ ಕೊಡುವ ಕೆಲಸ ಶುರು ಮಾಡಿದೆ.

Advertisement

ಆನಂತರ ಅದಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ರೆಸ್ಪಾನ್ಸ್‌ ಸಿಗೋದಕ್ಕೆ ಶುರುವಾಯ್ತು. ಆನಂತರ ಅದಕ್ಕಾಗಿ ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್‌ ಸಮೀಪ ಶಾಪ್‌ ಕೂಡ ತೆರೆಯಲಾಯಿತು. ಈಗ ನಾನು ಆರಂಭಿಸಿರುವ ಆರ್ಗ್ಯಾನಿಕ್ ಪ್ರೊಡಕ್ಟ್ ಉದ್ಯಮ ಸಾಕಷ್ಟು ಬೆಳೆದಿದ್ದು ಅದನ್ನು ಇನ್ನಷ್ಟು ವಿಸ್ತರಿಸುವ ಯೋಚನೆಯಿದೆ. ಸದ್ಯ ನಮ್ಮ ಬ್ರ್ಯಾಂಡ್‌ನ‌ ಪ್ರೊಡಕ್ಟ್ಗಳು ಆನ್‌ಲೈನ್‌ನಲ್ಲೂ ಸಿಗುತ್ತಿದ್ದು, ಗ್ರಾಹಕರಿಂದಲೂ ಒಳ್ಳೆಯ ಸಪೋರ್ಟ್‌ ಸಿಗುತ್ತಿದೆ’ ಎನ್ನುತ್ತಾರೆ.

ಒಟ್ಟಾರೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸಿಂಧು ಮಾಡಲು ಹೊರಟಿರುವ ಸಾಮಯವ ಕೆಲಸ ಯಶಸ್ವಿಯಾಗಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next