ಸಿಂಗಾಪುರ್: ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್, ಎಚ್.ಎಸ್. ಪ್ರಣಯ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿ ಹೊರಬಿದ್ದರು. ಸಿಂಧು ಈ ಕೂಟದಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ತೃತೀಯ ಶ್ರೇಯಾಂಕದ ಸಿಂಧು ಚೀನದ ಹಾನ್ ಯುವೆ ಅವರ ಬಲವಾದ ಸವಾಲನ್ನು ಮೆಟ್ಟಿನಿಂತು 17-21, 21-11, 21-19 ಅಂತರದ ರೋಚಕ ಜಯ ದಾಖಲಿಸಿದರು. ಮೇ ತಿಂಗಳಲ್ಲಿ ನಡೆದ ಥಾಯ್ಲೆಂಡ್ ಓಪನ್ ಬಳಿಕ ಸಿಂಧು ಕಾಣುತ್ತಿರುವ ಮೊದಲ ಸೆಮಿಫೈನಲ್ ಇದಾಗಿದೆ. ಜಪಾನಿನ ಶ್ರೇಯಾಂಕ ರಹಿತ ಆಟಗಾರ್ತಿ ಸಯೇನಾ ಕವಕಾಮಿ ಅವರನ್ನು ಸಿಂಧು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ. ಇವರೆದುರು ಸಿಂಧು 2-0 ಗೆಲುವಿನ ದಾಖಲೆ ಹೊಂದಿದ್ದಾರದೆ.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸಯೇನಾ ಕವಕಾಮಿ 6ನೇ ಶ್ರೇಯಾಂಕದ ನೆಚ್ಚಿನ ಆಟಗಾರ್ತಿ ಪೋರ್ಣಪವೀ ಚೊಚುವಾಂಗ್ ಅವರಿಗೆ 21-17, 21-19 ಅಂತರದ ಆಘಾತವಿಕ್ಕಿದರು.
ಸೈನಾ ನೆಹ್ವಾಲ್ ಜಪಾನಿನ ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ 13-21, 21-15, 20-22 ಅಂತರದ ಆಘಾತಕ್ಕೊಳಗಾದರು. ಇನ್‌ಫಾರ್ಮ್ ಪ್ರಣಯ್ ಅವರನ್ನು ಜಪಾನಿನ ಕೊಡೈ ನರವೋಕ 12-21, 21-14, 21-18ರಿಂದ ಮಣಿಸಿದರು.
ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್-ಹೆಂಡ್ರ ಸೆತಿಯವಾನ್ ವಿರುದ್ಧ ಪರಾಭವಗೊಂಡರು. ಅಂತರ 21-10, 18-21, 17-21.