Advertisement

ಸಿಂಧುಗೆ ಮತ್ತೆ ಸೋಲು

10:07 AM Dec 18, 2017 | |

ದುಬೈ: ಭಾರತದ ಭರವಸೆಯ ಶಟ್ಲರ್‌ ಪಿವಿ ಸಿಂಧು ಪ್ರತಿಷ್ಠಿತ ವರ್ಷಾಂತ್ಯದ ದುಬೈ ವಿಶ್ವ ಸೂಪರ್‌ ಸೀರೀಸ್‌ ಫೈನಲ್‌ ಕೂಟದ ಪ್ರಶಸ್ತಿ ಸುತ್ತಿನಲ್ಲಿ ಸೋತು ನಿರಾಶೆಗೊಳಗಾಗಿದ್ದಾರೆ. 

Advertisement

ರವಿವಾರ ನಡೆದ ಸಂಘರ್ಷ ಪೂರ್ಣ ಫೈನಲ್‌ ಹೋರಾಟದಲ್ಲಿ ಸಿಂಧು ಅವರು ವಿಶ್ವದ ಎರಡನೇ ರ್‍ಯಾಂಕಿನ ಜಪಾನಿನ ಅಕಾನೆ ಯಮಗುಚಿ ಅವರೆದುರು 21-15, 12-21, 19-21 ಗೇಮ್‌ಗಳಿಂದ ಶರಣಾದರು. ಪ್ರಶಸ್ತಿ ಗೆಲುವಿಗಾಗಿ ಸಿಂಧು ಶಕ್ತಿಮೀರಿ ಪ್ರಯತ್ನಿಸಿದರೂ ಯಶಸ್ಸು ಸಾಧಿಸಲು ವಿಫ‌ಲರಾದರು. ಪ್ರತಿಯೊಂದು ಅಂಕ ಗಳಿಸಲು ಇಬ್ಬರೂ ಪ್ರಬಲ ಪೈಪೋಟಿ ನಡೆಸಿದ್ದರು. ಈ ಗೆಲುವಿನಿಂದ ಯಮಗುಚಿ ಅವರು ಲೀಗ್‌ ಹಂತದಲ್ಲಿ ಸಿಂಧು ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು.

ಒಂದು ತಾಸು ಮತ್ತು 31 ನಿಮಿಷಗಳವರೆಗೆ ಸಾಗಿದ ಈ ಸೆಣಸಾಟದಲ್ಲಿ 22ರ ಹರೆಯದ ಸಿಂಧು ಮತ್ತೆ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟರು. ಪ್ರಮುಖ ಕೂಟದಲ್ಲಿ ಅವರು ಫೈನಲ್‌ನಲ್ಲಿ ಸೋತಿರುವುದು ಇದು ಮೂರನೇ ಸಲವಾಗಿದೆ. ಈ ಹಿಂದೆ ರಿಯೋ ಒಲಿಂಪಿಕ್ಸ್‌ ಮತ್ತು ಗ್ಲಾಸ್ಕೋ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನ ಫೈನಲ್‌ನಲ್ಲಿ ಸಿಂಧು ಸೋತಿದ್ದರು.

ಈ ಋತುವಿನಲ್ಲಿ ನಾಲ್ಕನೇ ಫೈನಲ್‌ ಪಂದ್ಯದಲ್ಲಿ ಆಡಿದ ಸಿಂಧು ಭರ್ಜರಿ ಹೊಡೆತದ ಮೂಲಕ ಅಂಕ ಖಾತೆ ತೆರೆದಿದ್ದರು. ಉತ್ತಮವಾಗಿ ಆಡಿ ಮೊದಲ ಗೇಮ್‌ ಗೆದ್ದ ಸಿಂಧು ಪ್ರಶಸ್ತಿ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು. ಆದರೆ ದ್ವಿತೀಯ ಗೇಮ್‌ನಲ್ಲಿ ಯಮಗುಚಿ ವೀರೋಚಿತವಾಗಿ ಹೋರಾಡಿದರು. ಅವರ ಅಮೋಘ ಆಟಕ್ಕೆ ಸಿಂಧು ಶರಣಾದರು.

Advertisement

Udayavani is now on Telegram. Click here to join our channel and stay updated with the latest news.

Next