ಸಿಂಧನೂರು: ನಗರದ ಶ್ರೀ ಕೃಷ್ಣ ದೇವರಾಯ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದ 20 ವಿದ್ಯಾರ್ಥಿಗಳಿಗೆ 2018ರ ಹಳೆ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಿರುವ ಘಟನೆ ನಡೆದಿದೆ. ಒಟ್ಟು 419 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 20 ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಹಳೆ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಕೇವಲ ಶೇ.40ರಷ್ಟು ಮಾತ್ರ ಉತ್ತರ ಬಿಡಿಸಿದ್ದಾರೆ.
ಇನ್ನುಳಿದ ಶೇ.60ಪ್ರಶ್ನೆಗಳಿಗೆ ಉತ್ತರ ತಿಳಿಯದೆ ಗೊಂದಲಕ್ಕೆ ಕಾರಣವಾಗಿದೆ. ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಪ್ರತಿಭಟಿಸಿ, ತಮ್ಮ ಶಿಕ್ಷಕರು ಹಾಗೂ ಪೋಷಕರಿಗೆ ಕರೆಸಿ ವಿಷಯ ತಿಳಿಸಿದರು. ಆಗ ಪೋಷಕರು ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಲು ಬಂದ ವಾಹನ ಬಿಡದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರು.
ಕೊಠಡಿ ನಂಬರ್ 1, 2 ಹಾಗೂ ಮೂರರಲ್ಲಿ ಬರೆಯುತ್ತಿದ್ದ 20 ವಿದ್ಯಾರ್ಥಿಗಳು ಹಳೆ ಪ್ರಶ್ನೆ ಪತ್ರಿಕೆ ನೀಡಿರುವ ಬಗ್ಗೆ ನಿಯೋಜಿತ ಶಿಕ್ಷಕರಿಗೆ ತಿಳಿಸಿದರು. ಎಲ್ಲಾ ಒಂದೇ ಇದೆ.ಬರೆಯಬೇಕು ಎಂದು ಅವರು ಹೇಳಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ ಪಠ್ಯದಲ್ಲಿ ಇಲ್ಲದ ಕೆಲವು ಪ್ರಶ್ನೆಗಳು ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಬರೆಯಲು ಆಗಲಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಧನೂರು ತಾಲೂಕಿನಲ್ಲಿ 14 ಪರೀಕ್ಷಾ ಕೇಂದ್ರಗಳಿದ್ದು ಯಾವ ಪರೀಕ್ಷಾ ಕೇಂದ್ರಗಳಲ್ಲಿಯೂ ಗೊಂದಲವಾಗಿಲ್ಲ. ಆದರೆ ಶ್ರೀ ಕೃಷ್ಣ ದೇವರಾಯ ವಿದ್ಯಾಸಂಸ್ಥೆಯಲ್ಲಿ ಮಾತ್ರ ಈ ಗೊಂದಲ ಕಂಡುಬಂದಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಮರು ಪರೀಕ್ಷೆ ನಡೆಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಆಂಗ್ಲ ಮಾಧ್ಯಮದ 20 ವಿದ್ಯಾರ್ಥಿಗಳಿಗೆ ಹಳೆ ಪಠ್ಯಕ್ರಮದ ಗಣಿತ ಪ್ರಶ್ನೆಪತ್ರಿಕೆ ವಿತರಣೆ ಆಗಿದೆ. ಈ ಗೊಂದಲದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮರು ಪರೀಕ್ಷೆ ಕುರಿತು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ನಿರ್ಣಯಿಸಲಿದೆ.
ಅಮರಪ್ಪಭೋವಿ,
ಬಿಇಒ ಸಿಂಧನೂರು
ಹಳೆಯ ಪ್ರಶ್ನೆ ಪತ್ರಿಕೆ ಕೊಟ್ಟು ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಇದರಿಂದ ನಮ್ಮ ಮಕ್ಕಳಿಗೆ ತೊಂದರೆಯಾಗಿದೆ. ಕೂಡಲೇ ಮರು ಪರೀಕ್ಷೆ ನಡೆಸಲು ಒತ್ತಾಯಿಸುತ್ತೇವೆ.
ಶರಣಪ್ಪ ವಿರೂಪಾಪುರ,
ಪಾಲಕ