ಸಿಂಧನೂರು: ಮಾರಕ ಕೋವಿಡ್ ರೋಗದಿಂದ ಕಳೆದೆರಡು ತಿಂಗಳಿಂದ ಬಸ್ ಸಂಚಾರವಿಲ್ಲದೇ ಕಂಗಾಲಾಗಿದ್ದ ಸಾರ್ವಜನಿಕರಿಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಂಧನೂರಿನಿಂದ ಜಿಲ್ಲಾ ಕೇಂದ್ರ ರಾಯಚೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿದೆ.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿಂಧನೂರು ತಾಲೂಕಿನಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಇದುವರೆಗೂ ಅಂದಾಜು 4.5 ಕೋಟಿಯಷ್ಟು ನಷ್ಟ ಅನುಭವಿಸಿದರೂ ಅದರ ಮಧ್ಯದಲ್ಲೂ ಕಳೆದ ವಾರದಿಂದಲೂ ಕೊರೊನಾ ಲಾಕ್ ಡೌನ್ ಸಡಿಲಗೊಳಿಸಿದ ಹಿನ್ನೆಲೆಯಿಂದ ಸಿಂಧನೂರಿನಿಂದ-ರಾಯಚೂರಿಗೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ.
ನಿತ್ಯ ಸಿಂಧನೂರಿನಿಂದ 5 ಬಸ್‌ಗಳನ್ನು ರಾಯಚೂರಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಒಂದು ಬಸ್‌ನಲ್ಲಿ ಕೇವಲ 27 ಪ್ರಯಾಣಿಕರು ಸಂಚರಿಸಲು ಅವಕಾಶವಿದೆ. ಹೀಗಾಗಿ ಒಂದು ಬಸ್ಸಿನಿಂದ ಕೇವಲ 5 ಸಾವಿರ ರೂ. ಮಾತ್ರ ಕಲೆಕ್ಷನ್ ಆಗುತ್ತಿದೆ. ಸಿಂಧನೂರಿನಿಂದ-ರಾಯಚೂರಗೆ ಬೆಳಗ್ಗೆ 8 ಗಂಟೆಗೆ, 8.45ಕ್ಕೆ, 9.30ಕ್ಕೆ, 10.15ಕ್ಕೆ, 11 ಗಂಟೆಗೆ ಹಾಗೂ ರಾಯಚೂರಿನಿಂದ-ಸಿಂಧನೂರಿಗೆ ಬರಲು ಮಧ್ಯಾಹ್ನ 2.30ಕ್ಕೆ ಆಗಮನದ ವೇಳೆ ನಿಗದಿಪಡಿಸಲಾಗಿದೆ.
ಆರೋಗ್ಯ ತಪಾಸಣೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಯಾಣಿಸುವಂತೆ ಅರಿವು ಮೂಡಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ಅಕ್ಕ ಪಕ್ಕದ, ನೆರೆಯ ತಾಲೂಕುಗಳಲ್ಲಿನ ಬಡ ನಿರ್ಗತಿಕ ಕುಟುಂಬಗಳು ಹಾಗೂ ಜನಸಾಮಾನ್ಯರು ನಿತ್ಯದ ಕೆಲಸ ಕಾರ್ಯ ಮಾಡಲು ಅನುಕೂಲಕರವಾಗಿದೆ.
ನಮ್ಮ ಘಟಕದಿಂದ ಜಿಲ್ಲಾ ಕೇಂದ್ರ ರಾಯಚೂರಿಗೆ ಸಂಚರಿಸಲು ಪ್ರಯಾಣಿಕರ ಅನುಕೂಲಕ್ಕಾಗಿ 5 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು ಮುಂಜಾಗ್ರತಾ ಕ್ರಮ ಅನುಸರಿಸಬೇಕು.
ರವಿಶಂಕರ್, ಘಟಕ ವ್ಯವಸ್ಥಾಪಕರು,
ಸಿಂಧನೂರು
ಚಂದ್ರಶೇಖರ್ ಯರದಿಹಾಳ