Advertisement

ಸಿಂಧನೂರು; ತಂತ್ರ-ಪ್ರತಿತಂತ್ರ ಜೋರು

02:50 PM Apr 07, 2018 | |

ರಾಯಚೂರು: ಜಿಲ್ಲೆಯ ಮಟ್ಟಿಗೆ ವರ್ಣಮಯ ರಾಜಕೀಯಕ್ಕೆ ಹೆಸರಾದ ಮತ್ತೂಂದು ಕ್ಷೇತ್ರ ಸಿಂಧನೂರು. ಹಿಂದೆ ಮೂರು ಬಾರಿ ಗೆಲುವು ಸಾಧಿಸಿದ್ದ ಹಂಪನಗೌಡ ಬಾದರ್ಲಿ ಸೋಲಿನ ನಂತರ ಪುನಃ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಾಕಷ್ಟು ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಮಾದರಿ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಆದರೆ, ಅವರಂದುಕೊಂಡ ಕೆಲಸಗಳು ಮುಗಿಯದಿರುವುದೇ ಪ್ರತಿಪಕ್ಷಗಳಿಗೆ ಅಸ್ತ್ರವಾಗುವ ಸಾಧ್ಯತೆಗಳಿವೆ.

Advertisement

ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಒಬ್ಬರ ನಂತರ ಒಬ್ಬರಂತೆ ಹಂಪನಗೌಡ ಬಾದರ್ಲಿ, ವೆಂಕಟರಾವ್‌ ನಾಡಗೌಡ ಗೆದ್ದಿದ್ದಾರೆ. ಮತ್ತೂಮ್ಮೆ ಇಬ್ಬರು ಅಖಾಡದಲ್ಲಿರುವುದು ಗಮನಾರ್ಹ. ಅಲ್ಲದೇ, ಕಳೆದ ಬಾರಿ ಬಿಎಸ್ಸಾರ್‌ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಕೆ.ಕರಿಯಪ್ಪ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಮತ್ತೂಮ್ಮೆ ಕಣ ಕುತೂಹಲ ಏರ್ಪಟ್ಟಿದೆ.

ಅಭಿವೃದ್ಧಿ ವಿಚಾರಕ್ಕೆ ಬಂದರೆ ಆಡಳಿತ ಪಕ್ಷದಲ್ಲಿರುವ ಶಾಸಕ ಬಾದರ್ಲಿ 1,565 ಕೋಟಿಗೂ ಹೆಚ್ಚು ಅನುದಾನ ತಂದಿದ್ದಾರೆ.
ಮೂರು ಏತ ನೀರಾವರಿ ಯೋಜನೆ ಕಾಮಗಾರಿ ಜಾರಿಯಲ್ಲಿವೆ. 94 ಕೋಟಿ ರೂ. ವೆಚ್ಚದಲ್ಲಿ 24-7 ಕುಡಿಯುವ ನೀರಿನ ಕಾಮಗಾರಿ, 63 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿ ಹಂತದಲ್ಲಿವೆ. ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಶಾಸಕತ್ವದ ಹಿರಿತನಕ್ಕೆ ಸಿಗಬೇಕಾದ ಸಚಿವ ಸ್ಥಾನ ಕೈ ತಪ್ಪಿದರೂ ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಶಾಸಕರು ಆರಂಭಿಸಿದ ಸಾಕಷ್ಟು ಯೋಜನೆಗಳು ಮುಗಿಯದಿರುವುದು ಹಿನ್ನಡೆ. ಇನ್ನು ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರಿಗೆ ನೀರು ಒದಗಿಸುವಲ್ಲಿ ಶಾಸಕರು ನಿಷ್ಕ್ರಿಯರಾಗಿದ್ದಾರೆ ಎಂಬ ಆರೋಪಗಳಿವೆ. ಗ್ರಾಮೀಣ ಭಾಗದಲ್ಲಿ ಶೇ.80ರಷ್ಟು ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗಿದೆ ಎಂದು ಶಾಸಕರೇ ಹೇಳುತ್ತಿದ್ದಾರಾದರೂ ಇನ್ನೂ ಸಾಕಷ್ಟು ಭಾಗದಲ್ಲಿ ಕುಡಿಯುವ ನೀರಿಗೆ ತಾಪತ್ರಯ ತಪ್ಪಿಲ್ಲ.

ಹಾಲಿ ಶಾಸಕರಿಗೆ ಟಿಕೆಟ್‌ ಖಚಿತಗೊಂಡಿದ್ದು, ಈ ಬಾರಿಯೂ ಶಾಸಕ ಬಾದರ್ಲಿ ಗೆಲುವು ಖಚಿತವಾಗಿದೆ. ಆದರೂ ಅವರ ಸಹೋದರನ ಪುತ್ರ ಬಸನಗೌಡ ಬಾದರ್ಲಿ, ಕೆ.ಕರಿಯಪ್ಪ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಳೆದ 2008ರಲ್ಲಿ ಶಾಸಕರಾಗಿದ್ದ ವೆಂಕಟರಾವ್‌ ನಾಡಗೌಡ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಚಿತಗೊಂಡಿದೆ. ಇನ್ನು ಬಿಜೆಪಿಯಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಆಕಾಂಕ್ಷಿ ಯಾಗಿದ್ದು, ಒಂದು ವೇಳೆ ಟಿಕೆಟ್‌ ಖಚಿತ ಗೊಂಡಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ. ಕೊನೆ ಕ್ಷಣದಲ್ಲಿ ಬಾದರ್ಲಿ ಗೆಲುವಿನ ನಗೆ ಬೀರುವರೋ ಅಥವಾ ಎಂದಿನಂತೆ ಮತದಾರ ಬೇರೆಯವರಿಗೆ ಮಣೆ ಹಾಕುವನೋ ಕಾದು ನೋಡಬೇಕು.

Advertisement

ಕ್ಷೇತ್ರದ ದೊಡ್ಡ ಸಮಸ್ಯೆ
ಕಾಲುವೆ ಕೊನೆ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರು ಕೆಲ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಬಹುತೇಕ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. 94 ಕೋಟಿ ರೂ. ವೆಚ್ಚದಲ್ಲಿ ತಿಮ್ಮಾಪುರ ಏತ ನೀರಾವರಿ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಇದರಿಂದ 35 ಸಾವಿರ ಎಕರೆ ಜಮೀನಿಗೆ ನೀರು ಒದಗಿಸಬಹುದು. 27 ಕೋಟಿ ರೂ. ವೆಚ್ಚದಲ್ಲಿ ಸುಮಾರು 6500 ಎಕರೆಗೆ ನೀರು ಒದಗಿಸುವ ಒಳಬಳ್ಳಾರಿ ಏತ ನೀರಾವರಿ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಸುಮಾರು ಎರಡು ಸಾವಿರ ಎಕರೆಗೆ ನೀರುಣಿಸುವ ಗೋಮರ್ಶಿ ಏತ ನೀರಾವರಿ ಯೋಜನೆ ಕೂಡ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಿದಲ್ಲಿ ಸರಿಸುಮಾರು ಅರ್ಧ ಲಕ್ಷ ಎಕರೆಗೆ ನೀರು ಪೂರೈಸಬಹುದು.

ಕ್ಷೇತ್ರದ ದೊಡ್ಡ ಸಮಸ್ಯೆ
ಬೇಸಿಗೆ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಮನೆಗಳಲ್ಲಿ ನಲ್ಲಿ ನೀರು ಬರುವುದಿಲ್ಲ. ಇನ್ನೂ ಕೆಲವು ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲ ಗ್ರಾಮಗಳಲ್ಲಿ ಕೆರೆಗಳಿದ್ದರೂ ನೀರು ತುಂಬಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ರೌಡಕುಂದ, ಮುಕ್ಕುಂದ ಹಾಗೂ ದಡೇಸುಗೂರು ಗ್ರಾಮಗಳಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿವೆ
 
ಶಾಸಕರು ಏನಂತಾರೆ?
ಸಿಂಧನೂರು ಅಭಿವೃದ್ಧಿಗೆ ನಿರೀಕ್ಷೆ ಮೀರಿ ಅನುದಾನ ತಂದಿದ್ದೇನೆ. ಮುಖ್ಯಮಂತ್ರಿಗಳು ಏಳು ಬಾರಿ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದಾರೆ. 24-7 ಕುಡಿಯುವ ನೀರಿನ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಒಳಚರಂಡಿ, ಮೂರು ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಅಂದಾಜು 130 ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಕೆಲವರು ವಿನಾಕಾರಣ ಟೀಕೆ ಮಾಡುತ್ತಿದ್ದು, ಕ್ಷೇತ್ರದಲ್ಲಿನ ಅಭಿವೃದ್ಧಿಯನ್ನು ನೋಡಿ ಟೀಕಿಸಬೇಕು.  
 ಹಂಪನಗೌಡ ಬಾದರ್ಲಿ ಕಾಂಗ್ರೆಸ್‌ ಶಾಸಕರು

ಕಳೆದ ಬಾರಿ ಏನಾಗಿತ್ತು?
2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಎಸ್‌ಆರ್‌ ಮಧ್ಯ ನೇರ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ, ಬಿಎಸ್ಸಾರ್‌ ಪಕ್ಷದಿಂದ ಕೆ. ಕರಿಯಪ್ಪ, ಜೆಡಿಎಸ್‌ನಿಂದ ವೆಂಕಟರಾವ್‌ ನಾಡಗೌಡ, ಬಿಜೆಪಿಯಿಂದ ಕೊಲ್ಲಾ ಶೇಷಗಿರಿರಾವ್‌, ಕೆಜೆಪಿಯಿಂದ ರಾಜಶೇಖರ ಪಾಟೀಲ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಗೆಲುವು
ಸಾಧಿಸಿದ್ದರೆ, ಬಿಎಸ್‌ಆರ್‌ ಅಭ್ಯರ್ಥಿ ಕೆ.ಕರಿಯಪ್ಪ 2ನೇ ಸ್ಥಾನ ಪಡೆದಿದ್ದರು.  ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಕ್ಷೇತ್ರ ವಿಶೇಷತೆ
ತಾಲೂಕಿನ ಸೋಮಲಾಪುರ ಹತ್ತಿರ ಇರುವ ಅಂಬಾಮಠದ ಶ್ರೀ ಬಗಳಾಮುಖೀ ಅಂಬಾದೇವಿ ಜಾತ್ರೆಯು ಪ್ರತಿ ವರ್ಷ ಬನದ ಹುಣ್ಣಿಮೆಯಂದು ಜರುಗುತ್ತದೆ. ಈ ಭಾಗದಲ್ಲಿ ಅಂಬಾಮಠದ ಜಾತ್ರೆ ತುಂಬಾ ಪ್ರಸಿದ್ಧಿ. ಸಾಧು ಸಂತರು ಇಲ್ಲಿಗೆ ಬಂದು ದೇವಿ ಆರಾಧನೆ ಮಾಡಿ ಕೃಪೆಗೆ ಪಾತ್ರರಾಗುತ್ತಾರೆ. ವಿವಿಧ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಇದೊಂದು ಪವಾಡ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ.

ಸಿಂಧನೂರು ತಾಲೂಕಿಗೆ ಕಳೆದ 30 ವರ್ಷಗಳಿಗಿಂತ ಈ ಬಾರಿ ಬಹಳಷ್ಟು ಅನುದಾನ ತರುವ ಮೂಲಕ ಶಾಸಕರು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇನ್ನಷ್ಟು ಒತ್ತು ಕೊಡಬೇಕಿತ್ತು.  
 ಎಂ. ಸುರೇಶ, ಸಿಂಧನೂರು

ಕ್ಷೇತ್ರದಲ್ಲಿ ಕೃಷಿಗೆ ನೀರಿನದ್ದೇ ಸಮಸ್ಯೆಯಾಗಿದೆ. ಕಳೆದ ಐದು ವರ್ಷದಿಂದ ಎರಡನೇ ಬೆಳೆಗೆ ನೀರು ಸಿಕ್ಕಿಲ್ಲ. ಕಳೆದ ವರ್ಷ ಮೊದಲ ಬೆಳಗೆ ಸಕಾಲಕ್ಕೆ ನೀರು ಸಿಗದೆ ನಾಟಿ ಮಾಡಲಿಲ್ಲ. ಎರಡನೇ ಬೆಳೆಗೆ ತೆಲಂಗಾಣ, ಆಂಧ್ರಕ್ಕೆ ಮನವಿ ಮಾಡಿ ನೀರು ಬಿಡಿಸುವುದಾಗಿ ಶಾಸಕರು ತಿಳಿಸಿದ್ದರು. ಅದನ್ನು ನಂಬಿ ನಾಟಿ ಮಾಡಿದ ರೈತರಿಗೆ ನೀರು ಸಿಗದೆ ನಷ್ಟ ಎದುರಿಸುವಂತಾಯಿತು.ರೈತರ ವಿಚಾರದಲ್ಲಿ ಗಂಭೀರವಾಗಬೇಕಿತ್ತು. 
 ರಮೇಶ, ಸಿಂಧನೂರು

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಗಾಂಧಿನಗರ, ದಡೇಸುಗೂರು, ಸಾಲಗುಂದ ಗ್ರಾಮಗಳಲ್ಲಿ ಹೈಟೆಕ್‌ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ.
 ಶರಣಬಸವ ವಕೀಲ, ಸಾಲಗುಂದ

 ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next