Advertisement

ಆನಂದ ತೇಲ್ತುಂಬ್ಡೆ ಬಿಡುಗಡೆಗೆ ಆಗ್ರಹ

05:03 PM May 18, 2020 | Naveen |

ಸಿಂಧನೂರು: ಭೀಮಾ ಕೋರೆಗಾಂವ ಪ್ರಕರಣದಲ್ಲಿ ಬಂಧಿತರಾಗಿರುವ ಮಾನವ ಹಕ್ಕುಗಳ ಹೋರಾಟಗಾರ ಆನಂದ್‌ ತೇಲ್ತುಂಬ್ಡೆ
ಮತ್ತಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಎಐಟಿಯುಸಿ ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ರವಿವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಮಹಾರಾಷ್ಟ್ರದ ಭೀಮಾ ಕೋರೆಗಾಂವ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ದುರುದ್ದೇಶಪೂರ್ವಕವಾಗಿ ತಳುಕುಹಾಕಿ ಆನಂದ ತೇಲ್ತುಂಬ್ಡೆ, ಗೌತಮ್‌ ನವಲಖ್‌ ಮತ್ತಿತರರನ್ನು ಬಂಧಿಸಿರುವುದು ಖಂಡನೀಯ. ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಮಹಾರಾಷ್ಟ್ರ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿರುವುದು ಜನವಿರೋಧಿ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ ಎಂದು ದೂರಿದರು.

ಆನಂದ ತೇಲ್ತುಂಬ್ಡೆ ಅವರು ದಲಿತ, ದಮನಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತ ಬಂದವರು. ಖೈರ್ಲಾಂಜಿ ಹತ್ಯಾಕಾಂಡವೂ ಸೇರಿ ದಲಿತ, ದಮನಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯ ಗುರುತಿಸಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಜನವಿರೋಧಿ, ಅಪ್ರಜಾತಾಂತ್ರಿಕ ಆಳುವ ವರ್ಗಗಳ ನಿಜಬಣ್ಣ ಬಯಲು ಮಾಡಿದ್ದಾರೆ. ಅಂಬೇಡ್ಕರ್‌ ಕುಟುಂಬದ ಸದಸ್ಯರು ಆಗಿರುವ ತೇಲ್ತುಂಬ್ಡೆ ಅವರನ್ನು ಅಂಬೇಡ್ಕರ್‌ ಜಯಂತಿ ದಿನವೇ ಬಂಧಿಸಿರುವುದು ಸರ್ಕಾರದ ದುರುದ್ದೇಶ ಏನು ಎನ್ನುವುದು ಸ್ಪಷ್ಟವಾಗಿದೆ ಎಂದು ಆಪಾದಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಎರಡು ವರ್ಷಗಳ ಹಿಂದೆ ಕೋರೆಗಾಂವ ವಿಜಯ ದಿನದಂದು, ದಲಿತರನ್ನು ಸಂಘಟಿಸಿ ಬೃಹತ್‌ ಸಮಾವೇಶವೊಂದನ್ನು ನಡೆಸಿ ಸಂಘ ಪರಿವಾರಕ್ಕೆ ಸವಾಲು ಹಾಕಿರುವುದೇ ಮಾನವ ಹಕ್ಕು ಹೋರಾಟಗಾರರ ಸರಣಿ ಬಂಧನಗಳಿಗೆ ಕಾರಣವಾಗಿದೆ. ವಿಜಯ ದಿವಸ್‌ ತಡೆಯಲು ಸಂಘ ಪರಿವಾರದ ಕಾರ್ಯಕರ್ತರು ಹಿಂಸಾತ್ಮಕ ಪ್ರಯತ್ನ ನಡೆಸಿದರಾದರೂ ಅದನ್ನು ಅಷ್ಟೇ ತೀವ್ರವಾಗಿ ದಲಿತ ಕಾರ್ಯಕರ್ತರು ಪ್ರತಿರೋಧಿಸಿದ್ದಾರೆ. ಈ ಘಟನೆಯನ್ನೇ ನೆಪವಾಗಿಟ್ಟುಕೊಂಡು ಅತ್ಯಂತ ಕಠಿಣ ಕಾನೂನಿನಡಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಆನಂದ ತೇಲ್ತುಂಬ್ಡೆ, ಗೌತಮ ನವಲಕ್‌, ಸುಧೀರ ಧವಳೆ, ಸುರೇಂದ್ರ ಗಾಡ್ಲಿಂಗ, ಮಹೇಶ ರಾವುತ್‌, ಶೋಮಾ ಸೇನ್‌, ವೆರ್ನಾನ್‌ ಗೋನಸಾಲ್ವೇಸ್‌, ವರವರರಾವ್‌, ಸುಧಾ ಭಾರಧ್ವಾಜ್‌, ಅರುಣ ಫೆರೆರಾ, ರೋನಾ ವಿಲ್ಸನ್‌ ಅವರ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿರುವುದು ಇದರ ಉದ್ದೇಶ ಎಲ್ಲ ಮಾನವ ಹಕ್ಕು ಹೋರಾಟಗಾರರು, ದಲಿತ ಚಿಂತಕರನ್ನು ಜೈಲಿಗಟ್ಟಿ ನ್ಯಾಯವನ್ನು ಶಾಶ್ವತವಾಗಿ ಸಮಾಧಿ ಮಾಡುವುದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ಮುಖಂಡರಾದ ಶೇಕ್ಷಾಖಾದ್ರಿ, ಎಸ್‌. ದೇವೇಂದ್ರಗೌಡ, ಡಿ.ಎಚ್‌. ಕಂಬಳಿ, ನಾರಾಯಣ ಬೆಳಗುರ್ಕಿ, ನಾಗರಾಜ ಪೂಜಾರ, ಬಸವರಾಜ ಏಕ್ಕಿ ಮಾತನಾಡಿದರು. ಮುಖಂಡರಾದ ಬಸವರಾಜ ಬಾದರ್ಲಿ, ಬಿ.ಎನ್‌. ಯರದಿಹಾಳ, ಅಮೀನಸಾಬ ನದಾಫ್‌, ವಿರುಪಣ್ಣ, ಮಹಾದೇವ ಅಮರಾಪುರ ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next