ಸಿಂದಗಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅನೇಕ ಸವಾಲು ಹೊಂದಿದ್ದು ಸರ್ಕಾರದ ನಿರ್ದೇಶನದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪ್ರಸನ್ನಕುಮಾರ ಹೇಳಿದರು.
ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹರಡುವ ಹಿನ್ನೆಲೆಯಲ್ಲಿ ಈ ಬಾರಿಯ ಪರೀಕ್ಷೆ ಒಂದು ದೊಡ್ಡ ಸವಾಲಾಗಿದೆ. ಪರೀಕ್ಷೆಯನ್ನು ಅತ್ಯಂತ ಎಚ್ಚರದಿಂದ ಮಕ್ಕಳ ಆರೋಗ್ಯದ ದೃಷ್ಟಿಯಲ್ಲಿಟ್ಟುಕೊಂಡು ನಟೆಸಬೇಕಿದೆ ಎಂದರು.
ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕೌಂಟರ್ ಮಾಡಲಾಗುತ್ತಿದೆ. ಅಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು ಮಕ್ಕಳ ಆರೋಗ್ಯ ಪರಿಶೀಲನೆ ಮಾಡಲಿದ್ದಾರೆ. ಪಾಲಕರು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ನಮಗೆ ಸಂಪೂರ್ಣ ಸಹಕಾರ ನೀಡಿದ್ದಲ್ಲಿ ಪರೀಕ್ಷೆಯನ್ನು ಯೋಗ್ಯ ರೀತಿಯಲ್ಲಿ ಮುಗಿಸಬಹುದು ಎಂದರು.
ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮೊಬೈಲ್ ಬಳಸುವುದು ಮತ್ತು ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಲ್ಲಿ 3 ಲಕ್ಷ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಎಚ್ಚರದಿಂದ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದರು. ಬಿಇಒ ಎಚ್.ಎಸ್. ನಗನೂರ ಮಾತನಾಡಿ, ಜೂ. 25ರಿಂದ ಪರೀಕ್ಷೆ ಆರಂಭವಾಗಲಿದ್ದು ತಾಲೂಕಿನಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಿವೆ. ಒಟ್ಟು 6,059 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು 1,100 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗುವುದು ಎಂದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಿಪಿಐ ಸತೀಶ ಕಾಂಬಳೆ ಮಾತನಾಡಿ, ಪರೀಕ್ಷೆಗೆ ಎಲ್ಲ ರೀತಿ ಸಿದ್ಧತೆಗಳು ನಡೆಯುತ್ತಿದ್ದು ಪಾಲಕರು ಭಯ ಪಡುವ ಅವಶ್ಯಕತೆ ಇಲ್ಲ ಎಂದರು. ದೇವರಹಿಪ್ಪರಗಿ ತಹಶೀಲ್ದಾರ್ ವೈ.ಡಿ. ನಾಗಠಾಣ, ತಾಪಂ ಅ ಧಿಕಾರಿ ಸುನೀಲ ಮದ್ದಿನ, ಸಂತೋಷ ಬೀಳಗಿ, ದೈಹಿಕ ಶಿಕ್ಷಣಾಧಿಕಾರಿ ಎ.ಎಂ. ಬಿರಾದಾರ ವೇದಿಕೆಯಲ್ಲಿದ್ದರು.