Advertisement

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

11:44 PM Nov 20, 2023 | Team Udayavani |

ಟ್ರ್ಯಾವಿಸ್‌ ಹೆಡ್‌ ಹೆಸರಲ್ಲಿ “ಹೆಡ್‌’ ಇರುವುದ ರಿಂದ ಇದು ವಿಶ್ವಕಪ್‌ ಸಂದರ್ಭದಲ್ಲಿ ಚೆಂದದ ಪಂಚ್‌ ಕೊಟ್ಟಿರುವುದು ಒಂಥರ ಮಜಾ ನೀಡಿದೆ.

Advertisement

ಒಂದು ಜೋಕ್‌ ಹೀಗಿದೆ: ಆಸ್ಟ್ರೇಲಿಯದ ನಾಯಕ ಪ್ಯಾಟ್‌ ಕಮಿನ್ಸ್‌ ಟಾಸ್‌ ವೇಳೆ “ಟೇಲ್‌’ ಎಂದು ಕೂಗಿದರೇಕೆ? ಕಾರಣ, ಅವರ ಬಳಿ “ಹೆಡ್‌’ ಆಗಲೇ ಇದ್ದಿತ್ತು!
ಹೀಗೆ ಶುರುವಾಗುತ್ತದೆ ಹೆಡ್‌ ಪ್ರವರ. ಭಾರತದೆದುರಿನ ಚೇಸಿಂಗ್‌ ವೇಳೆ ಹೆಡ್‌ ಕ್ರೀಸ್‌ ಆಕ್ರಮಿಸಿಕೊಂಡಾಗ ಎಲ್ಲರಿಗೂ ಅನಿಸಿದ್ದಿಷ್ಟು-“ತಲೆ’ ತೆಗೆಯದೆ ಭಾರತಕ್ಕೆ ಉಳಿಗಾಲವಿಲ್ಲ. ಆದರೆ ಟೀಮ್‌ ಇಂಡಿಯಾ “ತಲೆ’ ಉರುಳಿಸುವಾಗ ಆಗಲೇ ಆಸ್ಟ್ರೇಲಿಯದ ಗೆಲುವಿನ ಔಪಚಾರಿಕತೆಯಷ್ಟೇ ಬಾಕಿ ಇತ್ತು. ಹೀಗೆ ಆಸ್ಟ್ರೇಲಿಯದ “ತಲೆ’ ತೆಗೆಯಲಾಗದೆ ಭಾರತ ತಲೆಬಾಗಿತು.
ಆಟಗಾರನೊಬ್ಬ ಕ್ರೀಸ್‌ ಆಕ್ರಮಿಸಿಕೊಂಡಾಗ ಎದುರಾಳಿ ಪಾಲಿಗೆ ಅದು ದೊಡ್ಡ ತಲೆನೋವು. ಫೈನಲ್‌ನಲ್ಲಿ ಹೆಡ್‌ ಅವರಿಂದ ಭಾರತ ಇದೇ ಸಂಕಟ ಅನುಭವಿಸಿತು. ಭಾರತಕ್ಕೆ ಹೆಡ್‌ “ಹೆಡ್‌ ಏಕ್‌’ ಆದರು. ಹೆಡ್‌ “ಹೆಡ್‌ಲೈನ್‌’ನಲ್ಲಿ ಮಿಂಚಿದರು!
ಅಕಸ್ಮಾತ್‌ ಹೆಡ್‌ ಖಾತೆ ತೆರಯದೆ ಬೇಗ ಔಟಾಗಿ ಆಸ್ಟ್ರೇಲಿಯ ಸೋತದ್ದಿದ್ದರೆ? ಹೆಡ್‌ “ತಲೆ’ದಂಡ ಖಾತ್ರಿ?!
ಇನ್ನಷ್ಟು “ಹೆಡ್‌’ ಹೈಲೈಟ್ಸ್‌…
· ಬಲಿಷ್ಠ, ಉತ್ಕೃಷ್ಟ ಕಾಲುಗಳ ಮೇಲೆ ಈ “ಹೆಡ್‌’ ನಿಂತಿದೆ!
· ಬೌಲಿಂಗನ್ನು ಟ್ರ್ಯಾವಿಸ್‌ ಯಾವತ್ತೂ “ಹೆಡ್‌ ಆನ್‌’ ಆಗಿಯೇ ಎದುರಿಸುತ್ತಾರೆ!
· ಬೌಲರ್‌ಗಳು ಟ್ರಾÂವಿಸ್‌ ಅವರಿಗೆ “ಹೆಡ್‌-ಟು- ಹೆಡ್‌’ ಬೌಲಿಂಗ್‌ ಮಾಡಬೇಕು!
· ಈ ಮನುಷ್ಯನಿಗೆ ಬುದ್ಧಿವಂತ “ಹೆಡ್‌’ ಇರುವುದು ಮಾತ್ರವಲ್ಲ; ಅವರ ಸರ್‌ನೇಮ್ ಕೂಡ ಅದೇ ಆಗಿದೆ!
ನಾವೆನೂ “ಹೆಡ್‌’ರಲ್ಲ!
ಕನ್ನಡದಲ್ಲಿ ಹೆಡ್‌ ಅವರನ್ನು ಹೇಗೆ ಬಳಸಿಕೊಳ್ಳಬಹುದು? ಪ್ಯಾಟ್‌ ಕಮಿನ್ಸ್‌ ಡೈಲಾಗ್‌: “241 ರನ್‌ ಬಾರಿಸಲಾಗದೆ ಸೋಲಲು ನಾವೇನೂ “ಹೆಡ್‌’ರಲ್ಲ, ನಮ್ಮಲ್ಲಿ ಹೆಡ್‌ ಇದ್ದಾರೆ!’
ಫೈನಲ್‌ ಪಂದ್ಯದ ಶತಕವೀರ
ಟ್ರ್ಯಾವಿಸ್‌ ಹೆಡ್‌ ವಿಶ್ವಕಪ್‌ ಫೈನಲ್‌ನಲ್ಲಿ ಶತಕ ಬಾರಿಸಿದ 7ನೇ ಹಾಗೂ ಆಸ್ಟ್ರೇಲಿಯದ 3ನೇ ಆಟಗಾರನೆನಿಸಿದರು. ಹಾಗೆಯೇ ವಿಶ್ವಕಪ್‌ ಫೈನಲ್‌ನಲ್ಲಿ ಚೇಸಿಂಗ್‌ ವೇಳೆ ಅತ್ಯಧಿಕ ರನ್‌ ಬಾರಿಸಿದ ದಾಖಲೆಗೂ ಹೆಡ್‌ ಪಾತ್ರರಾದರು (137).

ವಿಶ್ವಕಪ್‌ ಫೈನಲ್‌ನಲ್ಲಿ ಸೆಂಚುರಿ ಹೊಡೆದವರು:
· ಕ್ಲೈವ್‌ ಲಾಯ್ಡ, 102 ರನ್‌ (1975, ಆಸ್ಟ್ರೇಲಿಯ ವಿರುದ್ಧ, ಲಾರ್ಡ್ಸ್‌)
· ವಿವಿಯನ್‌ ರಿಚರ್ಡ್ಸ್‌, ಅಜೇಯ 138 ರನ್‌ (1979, ಇಂಗ್ಲೆಂಡ್‌ ವಿರುದ್ಧ, ಲಾರ್ಡ್ಸ್‌)
· ಅರವಿಂದ ಡಿ ಸಿಲ್ವ, ಅಜೇಯ 107 ರನ್‌ (1996, ಆಸ್ಟ್ರೇಲಿಯ ವಿರುದ್ಧ, ಲಾಹೋರ್‌)
· ರಿಕಿ ಪಾಂಟಿಂಗ್‌, ಅಜೇಯ 140 ರನ್‌ (2003, ಭಾರತದ ವಿರುದ್ಧ, ಜೊಹಾನ್ಸ್‌ಬರ್ಗ್‌)
· ಆ್ಯಡಂ ಗಿಲ್‌ಕ್ರಿಸ್ಟ್‌, 149 ರನ್‌ (2007, ಶ್ರೀಲಂಕಾ ವಿರುದ್ಧ, ಬ್ರಿಜ್‌ಟೌನ್‌)
· ಮಾಹೇಲ ಜಯವರ್ಧನೆ, ಅಜೇಯ 103 (2011, ಭಾರತದ ವಿರುದ್ಧ, ಮುಂಬಯಿ)
· ಟ್ರ್ಯಾವಿಸ್‌ ಹೆಡ್‌, 137 (2023, ಭಾರತದ ವಿರುದ್ಧ, ಅಹ್ಮದಾಬಾದ್‌)
· ಇವರಲ್ಲಿ ಮಾಹೇಲ ಜಯವರ್ಧನೆ ಹೊರತುಪಡಿಸಿ ಉಳಿದವರೆಲ್ಲ ಶತಕ ಬಾರಿಸಿದ ವೇಳೆ ಅವರ ತಂಡಗಳು ಚಾಂಪಿಯನ್‌ ಆಗಿ ಮೂಡಿಬಂದಿವೆ.

ಎರಡರಲ್ಲೂ ಪಂದ್ಯಶ್ರೇಷ್ಠ
ಟ್ರ್ಯಾವಿಸ್‌ ಹೆಡ್‌ ವಿಶ್ವಕಪ್‌ ಸೆಮಿಫೈನಲ್‌ ಮತ್ತು ಫೈನಲ್‌ಗ‌ಳೆರಡರಲ್ಲೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ 4ನೇ ಆಟಗಾರ. ಉಳಿದ ಮೂವರೆಂದರೆ ಮೊಹಿಂದರ್‌ ಅಮರನಾಥ್‌ (1983), ಅರವಿಂದ ಡಿ ಸಿಲ್ವ (1996) ಮತ್ತು ಶೇನ್‌ ವಾರ್ನ್ (1999). ಟ್ರ್ಯಾವಿಸ್‌ ಹೆಡ್‌ ದಕ್ಷಿಣ ಆಫ್ರಿಕಾ ಎದುರಿನ ಸೆಮಿಫೈನಲ್‌ನಲ್ಲಿ 48 ಎಸೆತಗಳಿಂದ 62 ರನ್‌ ಮಾಡಿದ್ದರು.

ಇದು ಟ್ರ್ಯಾವಿಸ್‌ ಹೆಡ್‌ ಅವರ ಮೊದಲ ವಿಶ್ವಕಪ್‌. ಪ್ರಥಮ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ಹೆಡ್‌ ಅಪಾಯಕಾರಿಯಾಗಿ ಗೋಚ ರಿಸಿದ್ದರು. ಅದು ನ್ಯೂಜಿಲ್ಯಾಂಡ್‌ ಎದುರಿನ ಧರ್ಮಶಾಲಾ ಪಂದ್ಯವಾಗಿತ್ತು. ಹೆಡ್‌ ಗಳಿಕೆ 109 ರನ್‌. ಅಂದಹಾಗೆ ಅಫ್ಘಾನ್‌ ವಿರುದ್ಧ ಅವರು ಖಾತೆಯನ್ನೇ ತೆರೆದಿರಲಿಲ್ಲ.

Advertisement

ಅಂಗಾಂಗಗಳ ಹೆಸರಿನವರ ತಂಡ!
“ಹೆಡ್‌’ ಹೆಸರನ್ನೇ ಮೂಲವಾಗಿರಿಸಿಕೊಂಡು ಮಾನವನ ದೇಹದ ಅಂಗಗಳ ಹೆಸರುಳ್ಳ ಕ್ರಿಕೆಟ್‌ ಆಟಗಾರರ ಹನ್ನೊಂದರ ಬಳಗದ ಯಾದಿ ಹೇಗಿದ್ದೀತು? ನೋಡಿ: ಮೈಕಲ್‌ ಚಿನ್‌ (ವೆಸ್ಟ್‌ ಇಂಡೀಸ್‌), ಸಲ್ಮಾನ್‌ ಬಟ್‌ (ಪಾಕಿಸ್ಥಾನ), ಟ್ರ್ಯಾವಿಸ್‌ ಹೆಡ್‌ (ಆಸ್ಟ್ರೇಲಿಯ), ಡಗ್‌ ಇನ್ಸೋಲ್‌ (ಇಂಗ್ಲೆಂಡ್‌), ಗ್ರೇಮ್‌ ಬಿಯರ್ಡ್‌ (ಆಸ್ಟ್ರೇಲಿಯ), ಮಿರಿಯಂ ನೀ (ಆಸ್ಟ್ರೇಲಿಯ), ಡೇವಿಡ್‌ ಬ್ರೇನ್‌ (ಜಿಂಬಾಬ್ವೆ), ಚಾರ್ಲ್ಸ್‌ ಫ‌ೂಟ್‌ (ಆಸ್ಟ್ರೇಲಿಯ), ಜೋಶ್‌ ಟಂಗ್‌ (ಇಂಗ್ಲೆಂಡ್‌), ಫಿಯೋನ್‌ ಹ್ಯಾಂಡ್‌ (ಐರ್ಲೆಂಡ್‌), ವಿಲಿಯಂ ಬ್ಯಾಕ್‌ (ಆಸ್ಟ್ರೇಲಿಯ).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next