ಈ ಜಾದೂ, ಯಕ್ಷಿಣಿಗಾರರಿಗೆ ಅತೀಂದ್ರಿಯ ಶಕ್ತಿ ಇರುತ್ತೆ ಎಂಬುದನ್ನು ಸಾಬೀತುಪಡಿಸುತ್ತದೆ.
ಯಾರಾದರೂ ಹತ್ತು ಮಂದಿ ಪ್ರಸಿದ್ಧ ಪುರುಷರ ಹೆಸರುಗಳನ್ನು ಹೇಳುವಂತೆ ಪ್ರೇಕ್ಷಕರಿಗೆ ಸೂಚಿಸಿ. ಅವರು ಒಂದೊಂದು ಹೆಸರನ್ನು ಹೇಳಿದಂತೆಯೇ ಅದನ್ನು ಪ್ರತ್ಯೇಕ ಚೀಟಿಯಲ್ಲಿ ಬರೆದು ಒಂದು ಟೋಪಿಯಲ್ಲಿ ಹಾಕಿ ಟೋಪಿಯನ್ನು ಕುಲುಕಿರಿ.
ಈಗ ಸ್ಲೇಟಿನ ಮೇಲೆ ಒಂದು ಹೆಸರನ್ನು ಬರೆದು ಯಾರಿಗೂ ಕಾಣದಂತೆ ಅದನ್ನು ಟೇಬಲಿನ ಮೇಲೆ ಕವುಚಿ ಇಡಿ. ನಂತರ ಪ್ರೇಕ್ಷಕರೊಬ್ಬರಿಗೆ ಟೋಪಿಯಲ್ಲಿನ ಹತ್ತು ಚೀಟಿಗಳಲ್ಲಿ ಒಂದನ್ನು ಎತ್ತಲು ಹೇಳಿ. ಆ ಚೀಟಿಯಲ್ಲಿ ಯಾವ ಹೆಸರಿದೆಯೋ ಅದನ್ನು ನೀವು ಮೊದಲೇ ಸ್ಲೇಟ್ ಮೇಲೆ ಬರೆದಿರುವುದನ್ನು ತೋರಿಸಿ. ಈಗ ಪ್ರೇಕ್ಷಕರು ಚಕಿತರಾಗುವುದರಲ್ಲಿ ಆಶ್ಚರ್ಯವೇ ಇಲ್ಲ.
ಇದರ ರಹಸ್ಯ ಇಷ್ಟೆ- ಪ್ರೇಕ್ಷಕರು ಮೊದಲ ಹೆಸರನ್ನು ಹೇಳಿದಾಗ ಅದನ್ನು ಚಾಚೂ ತಪ್ಪದಂತೆ ಚೀಟಿಯಲ್ಲಿ ಬರೆಯಿರಿ. ಆದರೆ ಎರಡನೇ ಹೆಸರು ಹೇಳಿದಾಗ ನೀವು ಚೀಟಿಯಲ್ಲಿ ಬರೆಯುವುದು ಮೊದಲ ಹೆಸರನ್ನೇ. ಹೀಗೆಯೇ ಮೂರನೆಯ ಹಾಗೂ ಅನಂತರದ ಹೆಸರುಗಳಿಗೂ ಅಂದರೆ ಹತ್ತು ಚೀಟಿಗಳಲ್ಲೂ ಮೊದಲ ಹೆಸರನ್ನೇ ಬರೆದಿರುತ್ತೀರಿ.
ಅಂದರೆ ಪ್ರೇಕ್ಷಕರು ಹೇಳಿದ ಹೆಸರನ್ನು ಗಟ್ಟಿಯಾಗಿ ಉತ್ಛರಿಸುತ್ತಾ ನೀವು ಪ್ರತಿಯೊಂದು ಚೀಟಿಯ ಮೇಲೆ ಬರೆಯುವುದು ಮೊದಲ ಹೆಸರನ್ನೇ. ಇದಾದ ಬಳಿಕ ಸ್ಲೇಟಿನ ಮೇಲೂ ಇದೇ ಹೆಸರನ್ನು ಬರೆದು ಕವುಚಿ ಇಡುತ್ತೀರಿ. ಈಗ ಪ್ರೇಕ್ಷಕ ಯಾವ ಚೀಟಿಯನ್ನು ಎತ್ತಿದರೂ ಸ್ಲೇಟಿನ ಮೇಲೆ ಅದೇ ಹೆಸರು ಬರೆದಿರುತ್ತದೆ. ಪ್ರೇಕ್ಷಕರಿಗೆ ಮೊದಲ ಹೆಸರಿನ ನೆನಪು ಅಷ್ಟಾಗಿ ಗಮನದಲ್ಲಿರದಂತೆ ಮಾಡಲು ಕನಿಷ್ಠ ಹತ್ತು ಹೆಸರುಗಳನ್ನಾದರೂ ಬರೆಯಬೇಕು.
— ಉದಯ್ ಜಾದೂಗಾರ್