Advertisement
ಬೆಚ್ಚನೆಯ ಮನೆಯಿತ್ತು. ವೆಚ್ಚಕ್ಕಾಗಿ ಮಿಗುವಷ್ಟು ಹೊನ್ನೂ ಇತ್ತು. ಇಚ್ಛೆ ಅರಿತು ನಡೆವ ಸತಿಯಿದ್ದಳು. ಇಚ್ಛೆ ಮೀರದ ಸುತರೂ ಕೂಡ. ಸರ್ವಜ್ಞನೆಂದಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥದೇ ಸಂಸಾರ! ಇದ್ದಕ್ಕಿದ್ದಂತೆ ಬೀಸಿದ ಬಿರುಗಾಳಿ, ಸ್ವರ್ಗವನ್ನು ಅಲ್ಲೋಲ ಕಲ್ಲೋಲಗೊಳಿಸವಷ್ಟು ತೀವ್ರ ಥರದ್ದು. ಕುಟುಂಬದ ಯಜಮಾನ ಇನ್ನಿಲ್ಲವಾಗಿದ್ದ. ಇದಕ್ಕಿದ್ದಂತೆ ಬರಸಿಡಿಲು ಬಡಿದು ಆ ಕುಟುಂಬ ತತ್ತರಿಸಿತ್ತು. ಒಂದು ರಸ್ತೆ ಅಪಘಾತ, ಒಂದು ಹೃದಯಾಘಾತ ಅಥವಾ ಇನ್ನಾವುದೋ ಗಂಭೀರ ಕಾಯಿಲೆ ಆತನನ್ನು ಈ ಲೋಕದಿಂದಲೇ ದೂರ ಮಾಡಿತು. ಆ ಕುಟುಂಬಕ್ಕೆ ಅನುಕಂಪದ ಸಹಾಯ ಹಸ್ತಗಳು ಬಹಳ ದೂರವೇನೂ ಜೊತೆಗೆ ಬರಲಿಲ್ಲ. “ಅಯ್ಯೋ ಹೀಗಾಗಬಾರದಿತ್ತು’ ಎಂಬ ಲೊಚಗುಟ್ಟುವಿಕೆಗೆ ಕಡಲಿನಷ್ಟಾದ ಕಣ್ಣೀರನ್ನು ಒರೆಸುವಷ್ಟು ಶಕ್ತಿಯೂ ಇರಲಿಲ್ಲ.
Related Articles
Advertisement
ಮನೆಯಲ್ಲಿ ವಯಸ್ಸಿಗೆ ಬಾರದ ಮಕ್ಕಳು. ಸಹಾಯಕ್ಕಾಗಿ ಯಾರನ್ನು ಕೇಳುವುದು? ಕೊನೆಗೆ ಮೈದುನ, ಅಕ್ಕಪಕ್ಕದ ಮನೆಯವರ ನೆರವನ್ನು ಪಡೆದು ಒಂದೊಂದೇ ಕೆಲಸ ಆರಂಭಗೊಂಡವು. ಆದರೆ ಅದನ್ನು ಪೂರ್ಣಗೊಳಿಸಲು ನಿತ್ಯ ಸಮಯ ಹೊಂದಿಸುವಷ್ಟು ಪುರುಸೊತ್ತು ಅವರ್ಯಾರಲ್ಲೂ ಇರಲಿಲ್ಲ. ಹೀಗಾಗಿ ಅವರ ಅಸಹನೆಯ ಮಾತುಗಳು ಈಕೆಯ ಮನಸ್ಸಿಗೆ ಘಾಸಿ ಮಾಡುತ್ತಿದ್ದವು. ಆದರೆ ಅನಿವಾರ್ಯ. ಮೌನವಾಗಿ ಸೆರಗಿನಲ್ಲಿ ಕಣ್ಣು ಒರೆಸಿಕೊಳ್ಳೋದು ಅಭ್ಯಾಸವಾಯಿತು.
ಈ ಚಿತ್ರಣ ನೋಡಿದಾಗ ಎಲ್ಲರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಹೀಗಾಗಲು ಮನೆಯೊಡತಿಯ ಅಜ್ಞಾನವೇ ಕಾರಣ ಎನ್ನುವುದಕ್ಕಿಂತ, ಮನೆಯೊಡೆಯನ ಕರ್ತವ್ಯ ಪೂರ್ಣವಾಗಿರಲಿಲ್ಲ ಎಂಬ ಸಂಗತಿಯನ್ನು ಮನಗಾಣಬೇಕು. ಆತ ತನ್ನ ಪತ್ನಿಯನ್ನು ಪ್ರೀತಿಸಿದ್ದು, ಪೋಷಿಸಿದ್ದು ಸರಿ. ಒಂಚೂರೂ ಕಷ್ಟ ಬರದಂತೆ ತಾನೇ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದುದೂ ತಪ್ಪಲ್ಲ. ಆದರೆ ಅವಳನ್ನು ಮನೆಯೊಳಕ್ಕೇ ಸೀಮಿತಗೊಳಿಸಿದ್ದು, ಹೊರಗೊಂದು ವ್ಯಾವಹಾರಿಕ ಪ್ರಪಂಚ ಇದೆ ಎಂಬ ಪರಿಚಯ ಮಾಡಿಕೊಡದೇ ಇದ್ದುದು ಖಂಡಿತ ತಪ್ಪು.
ತನ್ನ ಆದಾಯ, ಸಾಲ, ನಿತ್ಯದ ಖರ್ಚು, ಭವಿಷ್ಯದ ಉಳಿತಾಯ ಎಲ್ಲವನ್ನೂ ಆಕೆಯ ಜೊತೆಗೆ ಚರ್ಚಿಸಿ ನಿರ್ಧರಿಸಬೇಕಿತ್ತು. ಬ್ಯಾಂಕ್‌ಗಳೊಂದಿಗೆ ವ್ಯವಹರಿಸುವುದನ್ನೂ ಆಕೆಗೆ ಕಲಿಸಬೇಕಿತ್ತು. ಸ್ವತಂತ್ರವಾಗಿ ಸುತ್ತಾಡಿ ಎಲ್ಲವನ್ನೂ ನಿಭಾಯಿಸಲು ಹೇಳಿಕೊಡಬೇಕಿತ್ತು. ವರ್ತಮಾನದ ಕಷ್ಟ ಕಾರ್ಪಣ್ಯಗಳ ಕುರಿತು ಅರಿವು ಮೂಡಿಸಬೇಕಿತ್ತು. ತನ್ನ ಆಸ್ತಿಯ ನಿರ್ವಹಣೆ ಕುರಿತು ತಿಳಿವಳಿಕೆ ನೀಡಬೇಕಿತ್ತು. ತನ್ನ ವ್ಯವಹಾರದ ಲೆಕ್ಕಪತ್ರಗಳನ್ನೆಲ್ಲವನ್ನೂ ಪುಸ್ತಕದಲ್ಲಿ ಸ್ಪಷ್ಟವಾಗಿ ನಮೂದಿಸುವ ಪರಿಪಾಠ ಬೆಳೆಸಿಕೊಳ್ಳಬೇಕಿತ್ತು. ಅದನ್ನು ಪತ್ನಿಯೊಡನೆ ಹಂಚಿಕೊಳ್ಳಬೇಕಿತ್ತು.
ಹೆಂಡತಿಯಾದವಳು ಕೂಡ ಮನೆ, ಗಂಡ, ಮಕ್ಕಳಿಗೆ ಮಾತ್ರ ತನ್ನ ಬದುಕನ್ನು ಸೀಮಿತಗೊಳಿಸದೆ ಹೊರ ಪ್ರಪಂಚದ ಕುರಿತು ಅರಿವು ಮೂಡಿಸಿಕೊಳ್ಳಬೇಕು. ತನ್ನ ಪತಿ ಮಾಡುತ್ತಿರುವ ಕೆಲಸ, ಮನೆಗೆ ಸಂಬಂಧಿಸಿದ ವಿಚಾರಗಳು ಎಲ್ಲವನ್ನೂ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆಂದು ಗಂಡನ ಕೆಲಸದಲ್ಲಿ ಮೂಗು ತೂರಿಸುವುದು ಎಂದಲ್ಲ. ಆದರೆ ಗಂಡನ ಕೆಲಸಗಳ ಕುರಿತು, ವ್ಯವಹಾರಗಳ ಕುರಿತು ತಿಳಿದುಕೊಳ್ಳಬೇಕು. ಸ್ವಂತ ಬ್ಯಾಂಕ್ ಖಾತೆ ಹೊಂದಿರಬೇಕು. ತಾನೇ ಹೋಗಿ ಒಂದಿಷ್ಟು ವ್ಯವಹಾರ ನಡೆಸುವಷ್ಟು ಜ್ಞಾನ ಇರಬೇಕು. ಆಸ್ತಿ ಖಾತೆ, ಇ.ಸಿ ಎಂದರೇನು? ಫಿಕ್ಸಡ್ ಡೆಪಾಸಿಟ್‌ಗೆ ಹಣ ಹೂಡುವುದು ಹೇಗೆ ಎಂಬಂಥ ಪ್ರಾಥಮಿಕ ತಿಳಿವಳಿಕೆ ಖಂಡಿತಾ ಇರಬೇಕು.
ತನ್ನ ಬದುಕನ್ನು ತಾನೇ ನಡೆಸಿಕೊಂಡು ಹೋಗುವಷ್ಟು ಜಾಣ್ಮೆ, ಧೈರ್ಯ ಮಹಿಳೆಗೆ ಇದ್ದರೆ ಎಂಥಾ ಸನ್ನಿವೇಶದಲ್ಲೂ ಬದುಕು ದುಸ್ತರವಾಗುವುದಿಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಕಂಡ ಕಂಡವರ ಎದುರು ಹೋಗಿ ನಿಲ್ಲಬೇಕಾಗುವುದಿಲ್ಲ. ಇನ್ಯಾರಿಂದಲೋ ಮೋಸ ಹೋಗುವ ಸನ್ನಿವೇಶ ಎದುರಾಗುವುದಿಲ್ಲ.
ಲತಾ ಯಡಗೆರೆ