Advertisement

ಸರಳ ದಸರಾಕ್ಕೆ ನಾಗರಿಕರ ಒಲವು: ಮನೆಗಳಲ್ಲಿ ಸರಳ ಆಚರಣೆಗೆ ಆದ್ಯತೆ

12:28 PM Oct 25, 2020 | keerthan |

ಬೆಂಗಳೂರು: ಕೋವಿಡ್‌ ಹಾವಳಿ ನಡುವೆ ನಗರದಾದ್ಯಂತ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ನಾಗರಿಕರು ನಿರ್ಧರಿಸಿದ್ದಾರೆ. ಭಾನುವಾರ ರಜೆ ಇರುವುದರಿಂದ ಬಹುತೇಕ ಕಂಪನಿಗಳು, ಕಚೇರಿಗಳು, ಮಳಿಗೆಗಳಲ್ಲಿ ಶನಿವಾರವೇ ಸಿಬ್ಬಂದಿ ಆಯುಧ ಪೂಜೆ ಪ್ರಯುಕ್ತ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಮುಖಗವಸು ಧರಿಸಿಕೊಂಡು, ಸಾಂಪ್ರದಾಯಿಕ ಆಚರಣೆ ಮೂಲಕ ಹಬ್ಬ ಆಚರಿಸಲಾಯಿತು.

Advertisement

ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ ವರ್ಷದಂತೆ ವಿವಿಧ ಬಡಾವಣೆಗಳಲ್ಲಿ ಸಂಗೀತ ಉತ್ಸವ, ನವರಾತ್ರಿ ಉತ್ಸವ, ದೇವಿಯ ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳು ಕಾಣಲಿಲ್ಲ.

ಮನೆಗಳ ಎದುರು ಬೆಳಗ್ಗೆಯಿಂದಲೇ ರಂಗೋಲಿಗಳು ಕಂಗೊಳಿಸುತ್ತಿದ್ದವು. ಕಚೇರಿಗಳ ಎದುರು ವಾಹನಗಳನ್ನು ನಿಲ್ಲಿಸಿ, ಬೂದಗುಂಬಳಕಾಯಿ ಒಡೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬಂತು. ವಾಹನಗಳಿಗೆ ಹಾರ ಹಾಕಿ ಸಿಂಗರಿಸಲಾಗಿತ್ತು. ಅದೇ ರೀತಿ, ಪ್ರಮುಖ ಮಾರುಕಟ್ಟೆಗಳಲ್ಲಿ ಬೂದುಗುಂಬಳ, ನಿಂಬೆಹಣ್ಣು ಹಾಗೂ ಬಾಳೆಕಂದುಗಳಿಗೆ ಬೇಡಿಕೆ ಹೆಚ್ಚಿತ್ತು. ರಸ್ತೆ ಬದಿಯಲ್ಲಿ 50-100 ರೂ.ವರೆಗೂ ಮಾರಾಟ ಮಾಡಲಾಗುತ್ತಿತ್ತು. ಬಹುತೇಕ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.

ಮುಖಗವಸು ಧರಿಸಿ, ಸಾಮಾಜಿಕ ಅಂತರದಲ್ಲಿ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಅಲ್ಲಲ್ಲಿ ಬಾಳೆಹಣ್ಣು, ಅವಲಕ್ಕಿ ಬೆಲ್ಲದ ಪ್ರಸಾದ ವಿತರಣೆ ಮಾಡಲಾಯಿತು. ಕೆಲವೆಡೆ ವರ್ಚುವಲ್‌ ಪೂಜೆ ಮತ್ತು ಸಂಗೀತೋತ್ಸವಗಳೂ ಗಮನ ಸೆಳೆದವು.

ಇದನ್ನೂ ಓದಿ:ನಾಳೆ ಜಂಬೂ ಸವಾರಿ: ಮುಖ್ಯಮಂತ್ರಿ ಚಾಲನೆ, ಅರಮನೆ ಆವರಣಕ್ಕಷ್ಟೇ ಸೀಮಿತ

Advertisement

ದುರ್ಗಾಪೂಜೆ: ನಗರದಲ್ಲಿ ಲಕ್ಷಾಂತರ ಬಂಗಾಳಿ ಜನ ಇದ್ದು, ಅವರೆಲ್ಲರೂ ಆರ್‌.ಟಿ. ನಗರ, ಸಂಜಯನಗರ, ಹಲಸೂರು, ಹೆಬ್ಟಾಳ ಸೇರಿದಂತೆ ಅಲ್ಲಲ್ಲಿ ಹರಿದು ಹಂಚಿ ಹೋಗಿದ್ದಾರೆ. ಹಬ್ಬದ ಅಂಗವಾಗಿ ಒಟ್ಟಾಗಿ ಮಾನ್ಯತಾ ಟೆಕ್‌ ಪಾರ್ಕ್‌ ಸಮೀಪದ ಮ್ಯಾನ್ಫೊ ಕನ್ವೆನ್ಶನ್‌ ಸೆಂಟರ್‌ ನಲ್ಲಿ ದುರ್ಗಾ ಪೂಜೆಯನ್ನು ಬೃಹತ್‌ ಮಟ್ಟದಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ಶನಿವಾರ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ಇನ್ನು ಮನೆಗಳಲ್ಲಿ ಆಯುಧ ಪೂಜೆ ಮುನ್ನಾದಿನ ಅಂಗಡಿ-ಮುಂಗಟ್ಟು, ವಾಹನಗಳು, ಯಂತ್ರಗಳ ಸ್ವತ್ಛತಾ ಕಾರ್ಯ ನಡೆಯಿತು.

ಮತ್ತೂಂದೆಡೆ ಸೋಮವಾರದ ವಿಜಯ ದಶಮಿ ಪೂಜೆಗೆ ಪೂರ್ವಸಿದ್ಧತೆಗಳು ಜೋರಾಗಿದ್ದವು. ಬನಶಂಕರಿ, ದುರ್ಗಾ ಪರಮೇಶ್ವರಿ ಸೇರಿ ವಿವಿಧ ದೇಗುಲಗಳಲ್ಲಿ ಮುಂದಿನ 2 ದಿನ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಲಿದೆ. ವಿಧಾನ ಸೌಧದಲ್ಲಿ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಶುಕ್ರವಾರವೇ ಆಯುಧ ಪೂಜೆ ನೆರವೇರಿಸಲಾಯಿತು. ಬಿಎಂಟಿಸಿ, ಕೆಎಸ್‌ಆರ್‌ ಟಿಸಿ, ಬಿಡಿಎ, ಜಲ ಮಂಡಳಿಗಳಲ್ಲೂ ಹಬ್ಬ ಕಳೆಗಟ್ಟಿತು.

ಪಲ್ಲಕ್ಕಿ ಮೆರವಣಿಗೆ ಇಲ್ಲ?

ಜೆ.ಸಿ. ನಗರದಲ್ಲಿ ಅಲ್ಲಿನ ದಸರಾ ಉತ್ಸವ ಸಮಿತಿಯು ಮೈಸೂರು ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ದಸರಾ ಆಚರಿಸುತ್ತಿತ್ತು. ನೂರಾರು ಹೂವಿನ ಪಲ್ಲಕ್ಕಿಗಳ ಮೆರವಣಿಗೆ ನಡೆಯುತ್ತಿತ್ತು. ಆದರೆ, ಈ ಬಾರಿ ಸರಳವಾಗಿ ದಸರಾ ಆಚರಿಸುತ್ತಿದ್ದು, ಸೋಮವಾರ ಬನ್ನಿ ಮುಡಿದು, ಸೊಪ್ಪು ಅನ್ನು ಮನೆ-ಮನೆಗೆ ಹಂಚುವ ಮೂಲಕ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದೆ. ಜತೆಗೆ ಆಯಾ ಬಡಾವಣೆಗಳಲ್ಲೇ ದಸರಾ ಆಚರಣೆ ಸೀಮಿತವಾಗಿದೆ. ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್‌ನಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವ ಒಂದೂವರೆ ದಶಕದಿಂದ ನಡೆಯುತ್ತಿದೆ. ಈ ಬಾರಿ ಸಾಂಪ್ರದಾಯಿಕ ಆಚರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next