ಬಸವನಬಾಗೇವಾಡಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿರ್ಮಾಣಗೊಂಡಿರುವ ಸುಮಾರು 15 ಲಕ್ಷ ರೂ. ವೆಚ್ಚದ ಮೂಲ ನಂದೀಶ್ವರ (ಬಸವೇಶ್ವರ) ನೂತನ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಕುಂಭಮೇಳ, ಸಕಲ ವಾದ್ಯಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ರವಿವಾರ ಬೆಳಗ್ಗೆ ನೂತನ ಬೆಳ್ಳಿ ಪಲ್ಲಕ್ಕಿಗೆ ವಿರಕ್ತಮಠದಲ್ಲಿ ಮುಂಡರಗಿ ತೋಂಟದಾರ್ಯ, ಬೈಲೂರಿನ ನಿಜಗುಣಾನಂದ ಶ್ರೀ, ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಭಾಗ್ಯಶ್ರೀ ಪಾಟೀಲ, ಸಂಯುಕ್ತಾ ಪಾಟೀಲ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ವಿರಕ್ತ ಮಠದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ, ವೈಭವಗಳೊಂದಿಗೆ ಬಸವ ಸ್ಮಾರಕ, ಪತ್ತಾರ ಗಲ್ಲಿ ಮೂಲಕ ಅಗಸಿ ಮಾರ್ಗವಾಗಿ ಬಸವೇಶ್ವರ ವೃತ್ತದ ಮೂಲಕ ಮೂಲ ನಂದೀಶ್ವರನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಕೂಡಲಸಂಗಮ ಪ್ರಾಧಿಕಾರ ಮಂಡಳಿಯವರಿಗೆ ಬೆಳ್ಳಿ ಪಲ್ಲಕ್ಕಿ ನೀಡಲಾಯಿತು. ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭ ಹೊತ್ತು ಗಮನ ಸೆಳೆದರು.
ರವಿವಾರ ಪಟ್ಟಣದಲ್ಲಿ ವಿರಕ್ತಮಠದಿಂದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ತರಲಾಯಿತು. ಮೂಲನಂದೀಶ್ವರ ಪಲ್ಲಕ್ಕಿಯನ್ನು ಬೆಳ್ಳಿ ಪಲ್ಲಕ್ಕಿಯನ್ನಾಗಿ ಮಾಡಬೇಕೆಂದು ವರ್ಷಗಳ ಹಿಂದೆ ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳ ಸಂಕಲ್ಪವಾಗಿತ್ತು. ಈ ಸಂಕಲ್ಪ ಇಂದು ಈಡೇರಿದೆ. ಶ್ರಾವಣ ಮಾಸದ ಮೂರನೇ
ಸೋಮವಾರ (ಆ. 27) ಮೂಲ ನಂದೀಶ್ವರ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ.