Advertisement

ಕೆಎಸ್ಸಾರ್ಟಿಸಿ 20 ಚಾಲಕರಿಗೆ ಬೆಳ್ಳಿ ಪದಕ

10:48 AM Mar 23, 2018 | Team Udayavani |

ದಾವಣಗೆರೆ: ಸತತ ಐದು ವರ್ಷಗಳ ಕಾಲ ಯಾವುದೇ ರೀತಿಯ ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿದಂತಹ 20 ಚಾಲಕರಿಗೆ ಗುರುವಾರ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಬೆಳ್ಳಿ ಪದಕ ವಿತರಿಸಲಾಯಿತು. ದಾವಣಗೆರೆ ವಿಭಾಗದ 20 ಜನರಿಗೆ 32 ಗ್ರಾಂ ತೂಕದ ಬೆಳ್ಳಿಯ ಪದಕ, 2 ಸಾವಿರ ರೂಪಾಯಿ ನಗದು ಮತ್ತು ಇನ್ನು ಮುಂದೆ ಪ್ರತಿ ತಿಂಗಳು 50 ರೂಪಾಯಿ ವಿಶೇಷ ಭತ್ಯೆಯ ಆದೇಶ ಪತ್ರ ನೀಡಲಾಯಿತು.

Advertisement

ಬೆಳ್ಳಿ ಪದಕ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, 5 ವರ್ಷಗಳಲ್ಲಿ ಯಾವುದೇ ರೀತಿಯ ಅಪಘಾತ ಮತ್ತು ಅಪರಾಧರಹಿತ ಚಾಲನೆಗೆ ಬೆಳ್ಳಿಪದಕ ಪಡೆದಂತಹ ಚಾಲಕರು ಇತರರಿಗೂ ಮಾದರಿಯಾಗಿದ್ದಾರೆ ಎಂದರು.

ಓರ್ವ ವೈದ್ಯ ಏಕ ಕಾಲಕ್ಕೆ ಒಬ್ಬರ ಜೀವ ಉಳಿಸಿದರೆ. ಒಬ್ಬ ಚಾಲಕ ಏಕ ಕಾಲಕ್ಕೆ ನೂರಾರು ಜನರ ಪ್ರಾಣ ಉಳಿಸಬಲ್ಲ. ಒಂದೇ ಒಂದು ಕ್ಷಣ ಕರ್ತವ್ಯದಿಂದ ವಿಚಲಿತರಾಗದೆ ಮಾಡುವ ಸೇವೆ ಶ್ಲಾಘನೀಯ. ಚಾಲಕರ ಒಂದು ಕ್ಷಣದ ಉದಾಸೀನತೆ ಅನೇಕರ ಸಾವು. ನೋವಿಗೆ ಕಾರಣವಾಗಬಲ್ಲದು. ಬೆಳ್ಳಿ ಪದಕ ಪಡೆದ ಚಾಲಕರ ಜೊತೆಗೆ ಇತರರೂ ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾರಕ್ಷಣಾಧಿಕಾರಿ ಆರ್‌. ಚೇತನ್‌ ಮಾತನಾಡಿ, ಚಾಲಕನನ್ನು ನಂಬಿ ನೂರಾರು ಜನರು ಬಸ್‌ನಲ್ಲಿ ಪ್ರತಿ ನಿತ್ಯ ಪ್ರಯಾಣಿಸುತ್ತಾರೆ. ಅಂತಹವರ ಜೀವ ಉಳಿಸುವ ಮಹತ್ತರ ಜವಾಬ್ದಾರಿ ಚಾಲಕರ ಮೇಲೆ ಇದೆ. 5 ವರ್ಷಗಳಲ್ಲಿ ಯಾವುದೇ ರೀತಿಯ ಅಪಘಾತ ಮತ್ತು ಅಪರಾಧರಹಿತ ಚಾಲನೆ ಮಾಡಿದವರಿಗೆ ಬೆಳ್ಳಿಪದಕ ನೀಡುತ್ತಿರುವುದು ಸಂಸತದ ವಿಚಾರ. ಬೆಳ್ಳಿ ಪದಕ ಪಡೆದವರು 15 ವರ್ಷಗಳ ಕಾಲ ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿ ಬಂಗಾರದ ಪದಕ ಪಡೆಯುವಂತಾಗಬೇಕು ಎಂದು ಆಶಿಸಿದರು.

ಕೆಎಸ್ಸಾರ್ಟಿಸಿ ಮಂಡಳಿ ನಿರ್ದೇಶಕ ಟಿ. ತಿಪ್ಪೇಸ್ವಾಮಿ ಮಾತನಾಡಿ, 5 ವರ್ಷಗಳ ಕಾಲ ಯಾವುದೇ ರೀತಿ ಅಪಘಾತ ಮತ್ತು ಅಪರಾಧರಹಿತ ಚಾಲನೆ ಮಾಡಿದವರಿಗೆ ಬೆಳ್ಳಿಪದಕ ನೀಡಬೇಕು ಎಂದು 6 ತಿಂಗಳ ಹಿಂದೆಯೇ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ 2013 ರಿಂದ ಈಚೆಗೆ ಉತ್ತಮ ಚಾಲನಾ ಕೆಲಸ ಮಾಡಿದವರಿಗೆ ಎಲ್ಲಾ ಕಡೆ ಬೆಳ್ಳಿ ಪದಕ ಪ್ರದಾನ ಸಮಾರಂಭ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಮಹಿಳಾ ದಿನಾಚರಣೆಯಂದು 250 ಚಾಲಕರಿಗೆ ಬಂಗಾರದ ಮತ್ತು ಬೆಳ್ಳಿ ಪದಕ ಪ್ರದಾನ ಮಾಡಲಾಗಿತ್ತು. ಪ್ರತಿಯೊಬ್ಬ ಚಾಲಕರು ಸಹ ಬಂಗಾರ, ಬೆಳ್ಳಿ ಪದಕ ಪಡೆಯುವಂತಾಗಬೇಕು ಎಂದರು.

Advertisement

ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಶೇ. 10 ರಷ್ಟು ಮೂಲ ವೇತನ ಹೆಚ್ಚಿಸಬೇಕು ಎಂದು ಮಂಡಳಿ ಸಭೆಯಲ್ಲಿ ನಾವೆಲ್ಲ ಒತ್ತಾಯ ಮಾಡಿದ್ದೆವು. 2015-16ನೇ ಸಾಲಿನಲ್ಲಿ ಮಂಡಳಿ 180 ಕೋಟಿ ರೂಪಾಯಿ ನಷ್ಟದಲ್ಲಿದ್ದ ಕಾರಣ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಒಪ್ಪಲಿಲ್ಲ, ಶೇ. 8ರಷ್ಟು ಮೂಲ ವೇತನ ಹೆಚ್ಚಿಸಲು ಸಚಿವರು ಒಪ್ಪಿದರು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ. 12.5 ರಷ್ಟು ಮೂಲ ವೇತನ ಹೆಚ್ಚಿಸಲು ಒಪ್ಪಿಗೆ ನೀಡಿದರು. ಜಯದೇವ ಹೃದಯಾಲಯದಲ್ಲಿ ಚಾಲಕರು, ನಿರ್ವಾಹಕರಿಗೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

2015-16ನೇ ಸಾಲಿನಲ್ಲಿ ಮಂಡಳಿ 180 ಕೋಟಿ ರೂಪಾಯಿ ನಷ್ಟದಲ್ಲಿದ್ದ ಮಂಡಳಿ ಚಾಲಕರು, ನಿರ್ವಾಹಕರು, ಎಲ್ಲಾ ಹಂತದ ಅಧಿಕಾರಿಗಳ ಸತತ ಪರಿಶ್ರಮದಿಂದ ಈಗ ಮಂಡಳಿ 10.5 ಕೋಟಿ ಲಾಭದಲ್ಲಿದೆ. ಇನ್ನೂ ಹೆಚ್ಚಿನ ಲಾಭ ಗಳಿಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಕೆಸ್ಸಾರ್ಟಿಸಿ ಹಿರಿಯ ಅಧಿಕಾರಿ ಇಂಗಳಗಿ, ಶಿವಮೊಗ್ಗ ಡಿಪೋ ವ್ಯವಸ್ಥಾಪಕ ಅಶ್ವತ್‌ ಇತರರು ಇದ್ದರು.
 
ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಅಬ್ದುಲ್‌ ಖುದ್ದೂಸ್‌ ಸ್ವಾಗತಿಸಿದರು. ಬೆಳ್ಳಿ ಪದಕ ಸ್ವೀಕರಿಸಿದ ಕೆಲವಾರು ಚಾಲಕರು, ತಡವಾಗಿಯಾದರೂ ಬೆಳ್ಳಿ ಪದಕ ನೀಡುತ್ತಿರುವುದು ಸಂತಸದ ವಿಚಾರ. 5 ವರ್ಷ ಸತತವಾಗಿ ಯಾವುದೇ ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿರುವುದು ಬೆಳ್ಳಿ ಪದಕಕ್ಕಿಂತಲೂ ಹೆಚ್ಚಿನ ಸಂತೋಷ ನೀಡಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next