Advertisement

ಮಾಣಿ ವಿದ್ಯುದಾಗಾರಕ್ಕೆ ಬೆಳ್ಳಿಹಬ್ಬದ ಸಂಭ್ರಮ

05:34 PM Apr 09, 2018 | |

ಹೊಸನಗರ: ರಾಜ್ಯದಲ್ಲೇ ಅತೀ ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲೊಂದಾದ ನಗರ ಹೋಬಳಿ ಹೇಳಿ ಕೇಳಿ ಮುಳುಗಡೆ ತವರು ಪ್ರದೇಶ. ಶರಾವತಿ ಹಿನ್ನೀರಿನ ಸಂಗಮ ಮಾತ್ರವಲ್ಲ. ನಾಲ್ಕು ಡ್ಯಾಂಗಳು ಇಲ್ಲಿವೆ. ಇದರಲ್ಲಿ ಮುಖ್ಯವಾಗಿ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಮಾಣಿ ಜಲಾಶಯ ಮತ್ತು ವಿದ್ಯುದಾಗಾರ. ಸಾರ್ಥಕ 25 ವರ್ಷದ ಸೇವೆ ಸಲ್ಲಿಸಿ ಗಮನ ಸೆಳೆದ ಮಾಣಿ ಜಲಾಶಯ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.

Advertisement

ರಾಜ್ಯದಲ್ಲಿ ಕೆಪಿಸಿ ಅಸ್ತಿತ್ವಕ್ಕೆ ಬಂದಮೇಲೆ ಕೆಪಿಸಿ ತಂತ್ರಜ್ಞರು, ಇಂಜನಿಯರ್‌ಗಳೇ ನಿರ್ವಹಿಸಿದ ಮೊದಲ ಅಣೆಕಟ್ಟು ಮಾಣಿ ಜಲಾಶಯ ಮತ್ತು ವಿದ್ಯುದಾಗಾರ. ಇದು ತನ್ನದೇ ಹಲವು ವೈಶಿಷ್ಟ್ಯದಿಂದ ಗಮನ ಸೆಳೆದಿದೆ. ಮಾತ್ರವಲ್ಲ ತನ್ನ ಸೇವಾ ಸಾಮರ್ಥ್ಯಕ್ಕೆ ಎರಡು ಬಾರಿ ಪ್ರಶಸ್ತಿಯನ್ನು ಕೂಡ ಮಾಣಿ ಜಲ ವಿದ್ಯುದಾಗಾರ ಮುಡಿಗೇರಿಸಿಕೊಂಡಿದೆ.
 
ಒಟ್ಟು 881 ಮೆ.ಯೂನಿಟ್‌ ಉತ್ಪಾದನೆ: ಮಾಣಿ ವಿದ್ಯುದಾಗಾರದಲ್ಲಿ ಈವರೆಗೆ 881 ಮೆಗಾ ಯೂನಿಟ್‌ ವಿದ್ಯುತ್‌ ಉತ್ಪಾದನೆಯನ್ನು ಮಾಡಲಾಗಿದೆ. ವಾರ್ಷಿಕ 40 ಮೆ.ಯುನಿಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಮಾಣಿಯಲ್ಲಿ ಈ ಹಿಂದೆ ವರ್ಷವೊಂದರಲ್ಲಿ 41.83 ಮೆ.ಯುನಿಟ್‌ ವಿದ್ಯುತ್‌ ಉತ್ಪಾದನೆಯ ಗರಿಷ್ಠ ಸಾಧನೆಯನ್ನು ಮಾಡಿದೆ. ಭದ್ರತೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ಗಮನ ಸೆಳೆದಿರುವ ಮಾಣಿ ವಿದ್ಯುದಾಗಾರ ಈವರೆಗೆ ಎರಡು ಬಾರಿ ಎಫ್‌ ಆರ್‌ಎಲ್‌ ಪುರಸ್ಕಾರವನ್ನು ಕೂಡ ಪಡೆದಿದೆ. 

ಗಮನ ಸೆಳೆಯುವ ಮಾಣಿ ಜಲಾಶಯ: ಪ್ರಾಕೃತಿಕ ಶ್ರೀಮಂತಿಕೆಯ ನಡುವೆ ಹರಿಯುವ ವಾರಾಹಿ ನದಿಗೆ ಅಡ್ಡಲಾಗಿ ಮಾಣಿ ಪ್ರದೇಶದಲ್ಲಿ ನಿರ್ಮಾಣಗೊಂಡ ಮಾಣಿ ಜಲಾಶಯ ವೀಕ್ಷಣೆಗೂ ಕೂಡ ಮನಮೋಹಕ. 12 ಸ್ಯಾಡಲ್‌ ಡ್ಯಾಂಗಳನ್ನು ಹೊಂದಿರುವ ಮಾಣಿ ಜಲಾಶಯ 565 ಮೀ ಉದ್ದ. 59 ಮೀ ಎತ್ತರವಿದೆ. 594.36 ಮೀಟರ್‌ ನೀರು ಸಂಗ್ರಹ ಸಾಮರ್ಥ್ಯವಿರುವ ಮಾಣಿ ಜಲಾಶಯ 25 ವರ್ಷದಲ್ಲಿ ಎರಡು ಬಾರಿ ಶೇ.100 ರಷ್ಟು ನೀರು ತುಂಬಿ ಓವರ್‌ ಫ್ಲೋ ಆಗಿತ್ತು. 

ಮಾಣಿ ಜಲಾಶಯದಲ್ಲಿ ತುಂಬುವ ನೀರು ಮಾಣಿ ಜಲವಿದ್ಯುತ್‌ಗೂ ಬಳಕೆಯಾದ ನಂತರ ಏಷ್ಯಾಖಂಡದಲ್ಲೇ ನಿರ್ಮಾಣವಾದ ಮೊದಲ ಭೂಗರ್ಭ ವಿದ್ಯುದಾಗಾರ ಎಂಬ ಹೆಗ್ಗಳಿಕೆಯುಳ್ಳ ವಾರಾಹಿ ಭೂಗರ್ಭ ವಿದ್ಯುದಾಗಾರಕ್ಕೆ ಹರಿಯುತ್ತದೆ. 

ಒಂದೇ ಜಲಾಶಯದ ನೀರನ್ನು ಎರಡು ಕಡೆ ವಿದ್ಯುತ್‌ ಉತ್ಪಾದನೆಗೆ ಬಳಸಲಾಗುವುದು ವಿಶೇಷ. ನಂತರ ಹರಿಯುವ ನೀರು ಉಡುಪಿ ಜಿಲ್ಲೆ ಸಿದ್ದಾಪುರದಲ್ಲಿ ನಿರ್ಮಾಣಗೊಂಡ ಇರಿಗೇಶನ್‌ ಡ್ಯಾಂ ಸೇರಿಕೊಂಡು ರೈತರ ಮೊಗದಲ್ಲಿ ಮಂದಹಾಸ ತರಿಸುತ್ತದೆ. 

Advertisement

ಮಾಣಿಯಲ್ಲಿ ಸಂಭ್ರಮ: 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮಾಣಿ ವಿದ್ಯುದಾಗಾರದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ. ಏ. 6 ರಂದು ಕೆಪಿಸಿಯ ಎಲ್ಲಾ ನೌಕರರು ಒಂದಡೆ ಸೇರಿ ಪೂಜಾ ಕಾರ್ಯಕ್ರಮ ಮತ್ತು ಭೋಜನಕೂಟ ಏರ್ಪಡಿಸಿದ್ದರು. ಈವೇಳೆ ಮಾಣಿ ಬೆಳೆದುಬಂದ ಹಾದಿ ಬಗ್ಗೆ ಮೆಲಕು ಹಾಕಲಾಯಿತು.

ಒಟ್ಟಾರೆ ನಿತ್ಯಹರಿದ್ವರ್ಣ ಕಾಡು, ಗಿರಿಕಂದರಗಳ ನಡುವೆ ಮೈದಳೆದ ಮಾಣಿ ಅಣೆಕಟ್ಟು ಮತ್ತು ಜಲವಿದ್ಯುದಾಗಾರ ತನ್ನ 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದೆ. ಕೆಪಿಸಿ ತಂತ್ರಜ್ಞರ ನೇತೃತ್ವದಲ್ಲೇ ನಿರ್ಮಾಣ ಕಂಡ ಮೊದಲ ಡ್ಯಾಂ ಎಂಬ ಹೆಗ್ಗಳಿಕೆ ಸಹಜವಾಗಿ ಕೆಪಿಸಿ ನೌಕರರಲ್ಲಿ ಸಂತಸ ಮೂಡಿಸಿದೆ. 

ಖುಷಿ ತಂದಿದೆ ಕೆಪಿಸಿ ಅಸ್ತಿತ್ವಕ್ಕೆ ಬಂದ ಮೇಲೆ ಕೆಪಿಸಿಯ ತಂತ್ರಜ್ಞರು ಮತ್ತು ಇಂಜನಿಯರ್‌ ಗಳನ್ನು ಬಳಸಿಕೊಂಡು ನಿರ್ಮಾಣ ಕಂಡ ಮೊದಲ ಡ್ಯಾಂ ಮಾಣಿ ಜಲಾಶಯ ಮತ್ತು ವಿದ್ಯುದಾಗಾರ 25 ವರ್ಷದ ಸಾರ್ಥಕ ಸೇವೆ ಸಲ್ಲಿಸಿ.. ಬೆಳ್ಳಿ ಹಬ್ಬ ಸಂಭ್ರಮ ಕಾಣುತ್ತಿರುವುದಕ್ಕೆ ಸಂತಸವಾಗುತ್ತದೆ..
 ದಿನೇಶ್‌ ಕುಮಾರ್‌, ಇಇ ಕೆಪಿಸಿ ಮಾಸ್ತಿಕಟ್ಟೆ, ಹೊಸಗಂಡಿ
 
ಅದ್ಭುತ ಅನುಭವ ಮಾಣಿ ಡ್ಯಾಂ ನೋಡಲು ಚಿಕ್ಕದಿರಬಹುದು. ಆದರೆ ವಿಸ್ತಾರ ಬಹುದೊಡ್ಡದು.ಅಲ್ಲಿಯ ಕಾರ್ಯ ವೈಖರಿ ಒಂದು ಅದ್ಭುತ ಅನುಭವ.  
ವೆಂಕಟೇಶ ಹೆಗ್ಡೆ, ಇಇ ಗೇಟ್ಸ್‌ 

ಕುಮುದಾ ಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next