Advertisement

ಬೆಳ್ಳಿ ಹಬ್ಬದ ಕಟ್ಟಡ ನಿರ್ಮಾಣ: ಜಾಗ ಕನ್ವರ್ಷನ್‌ಗೆ ಆಗ್ರಹ

03:10 AM Jul 18, 2017 | Team Udayavani |

ಬೆಳ್ಳಾರೆ : ಐವರ್ನಾಡು ಗ್ರಾಮ ಪಂಚಾಯತ್‌ನ 2017-18 ನೇ ಸಾಲಿನ  ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್‌ ಅಧ್ಯಕ್ಷೆ  ರಾಜೀವಿ ಪರ್ಲಿಕಜೆ ಅವರ ಅಧ್ಯಕ್ಷತೆಯಲ್ಲಿ  ಐವರ್ನಾಡು ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಯು.ಡಿ. ಶೇಖರ್‌ ಸ್ವಾಗತಿಸಿ ವರದಿ ವಾಚಿಸಿದರು.

Advertisement

ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ನ್ಯಾಯವಾದಿ ಜಯಪ್ರಸಾದ್‌ ಕಜೆತ್ತಡ್ಕ ಅವರು ಮಾತನಾಡಿ, ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗಕ್ಕೆ 25 ವರ್ಷ ತುಂಬಿದ್ದು, ಇದರ ಬೆಳ್ಳಿಹಬ್ಬದ ನೆನಪಿಗಾಗಿ ನಾವು ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಆದರೆ ಜಾಗ  ಕನ್ವರ್ಷನ್‌ ಆಗದಂತೆ ನಮಗೆ ತೊಂದರೆ ಕೊಡಲಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ಯಾಕೆ ಜಾಗ ಕನ್ವರ್ಷನ್‌ ಆಗುವುದಿಲ್ಲ? ರಸ್ತೆಯಿಂದ ಎಷ್ಟು ಮೀಟರ್‌ ದೂರ ಇರಬೇಕು? ಎಂದು ಗ್ರಾಮ ಲೆಕ್ಕಾ ಧಿಕಾರಿ ಕಾರ್ತಿಕ್‌ ಅವರಲ್ಲಿ ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್‌ ಅವರು, ಕನ್ವರ್ಷನ್‌ ಆಗಬೇಕಾದ ಜಾಗ  ರಸ್ತೆಯಿಂದ 6 ಮೀಟರ್‌ ದೂರ ಇರಬೇಕು. ಇಲ್ಲದಿದ್ದರೆ ಭೂಪರಿವರ್ತನೆ ಮಾಡಲು ಆಗುವುದಿಲ್ಲ ಎಂದರು.

ಆಗ ಜಯಪ್ರಸಾದ್‌ ಮತ್ತು ಶಿವಪ್ರಸಾದ್‌, ಯೋಗೀಶ ಕಲ್ಲಗದ್ದೆ, ನಾಗಪ್ಪ ಪಾಲೆಪ್ಪಾಡಿ ಅವರು ಪ್ರತಿಕ್ರಿಯಿಸಿ, ನಮ್ಮ ಕಟ್ಟಡ ಮಾರ್ಗದಿಂದ 7 ಮೀಟರ್‌ ದೂರದಲ್ಲಿದೆ. ನಾವು ಅಲ್ಲಿ ಗೆಳೆಯರ ಬಳಗದ ಕಟ್ಟಡ ನಿರ್ಮಾಣ ಉದ್ದೇಶ ಹೊಂದಿದ್ದೇವೆಯೇ ಹೊರತು ಬೇರೇನೂ ಇಲ್ಲ. ಹಾಗಾಗಿ ಕೂಡಲೇ ಕನ್ವರ್ಷನ್‌ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. 

ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಊರಿನ ಹಲವು ಜನರು ನಮ್ಮ ಸಂಘಕ್ಕೆ ದೇಣಿಗೆ ರೂಪದಲ್ಲಿ ಕಬ್ಬಿಣ, ಸಿಮೆಂಟ್‌ ನೀಡಿದ್ದಾರೆ. 15 ಗೋಣಿ ಸಿಮೆಂಟ್‌ ಹಾಳಾಗುತ್ತಿದೆ. ಬಂದ ದೇಣಿಗೆ ಹಾಳಾದರೆ ಅದಕ್ಯಾರು ಹೊಣೆ ಎಂದು ಪ್ರಶ್ನಿಸಿದರು. 

Advertisement

ಆಗ ಜಿಲ್ಲಾ ಪಂಚಾಯತ್‌ ಸದಸ್ಯೆ ಪುಷ್ಪಾವತಿ ಬಾಳಿಲ ಅವರು ಕನ್ವರ್ಷನ್‌ನ ಕಾರ್ಯಕ್ಕೆ ಸಂಬಂಧಿಸಿ ಸಹಕರಿಸುವುದಾಗಿ ಹೇಳಿದರು.  ನೋಡೆಲ್‌ ಅಧಿಕಾರಿ ಮಹೇಶ್‌ ಅವರು ಹಂತ ಹಂತವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. 

ಸ್ಮಶಾನದ ಕೆಲಸ ಸಂಬಂಧಿಸಿ ಚಂದ್ರಾ ಕೋಲ್ಚಾರ್‌ ಅವರು ವಿಷಯ ಪ್ರಾಸ್ತಾಪಿಸಿದರು. ಅದಕ್ಕೆ ಪಿಡಿಒ ಪ್ರತಿಕ್ರಿಯಿಸಿ, ಸ್ಮಶಾನದ ಕೆಲಸ ನಾವು ಈ ವರ್ಷ ತೆಗೆದುಕೊಂಡದ್ದು ಕಾಮಗಾರಿಗೆ ಅನುದಾನದ ಕೊರತೆ ಇದೆ. ಜಾಗ ಸಮತಟ್ಟು ಮಾಡಿ ಆಗಿದೆ. ಶೆಡ್‌ ನಿರ್ಮಾಣವಾಗಿದೆ.  ಈ ವರ್ಷ ಅದಕ್ಕೆ ಅನುದಾನವಿಟ್ಟು 2-3 ತಿಂಗಳಲ್ಲಿ ಕೆಲಸ ಪೂರ್ತಿಗೊಳಿಸುತ್ತೇವೆ ಎಂದು ಹೇಳಿದರು.

ನದಿಗೆ ಸಂಬಂಧಿಸಿ ದೂರು
ಬಾಂಜಿಕೋಡಿಯಲ್ಲಿ ನೈಸರ್ಗಿಕವಾಗಿ ಹರಿಯುವ ಹೊಳೆಯನ್ನು ತಿರುಗಿಸಿ ಬೇರೆ ಕಡೆ ನೀರು ಹೋಗುವಂತೆ ಮಾಡಿದ್ದಾರೆ. ಇದು ಸರಿಯೇ ಎಂಬ ಅನಂತೇಶ್‌ ವರ ಪ್ರಶ್ನೆಗೆ ಎಂಜಿನಿಯರ್‌ ಮಹೇಶ್‌ ಮತ್ತು ಪಿಡಿಒ ಅವರು ಉತ್ತರಿಸಿ, ಈ ಬಗ್ಗೆ ನಮಗೆ ದೂರು ಬಂದಿದೆ.  ಕಂದಾಯ ಇಲಾಖೆಯವರು, ತಹಶೀಲ್ದಾರ್‌ ಕೂಡಾ ಅಲ್ಲಿಗೆ ಬಂದು ಗಮನಿಸಿ ಹೋಗಿದ್ದಾರೆ. ಹಾಗಾಗಿ ಇದರ ಬಗ್ಗೆ ತಹಶೀಲ್ದಾರರಿಗೆ ತಿಳಿಸುವುದಾಗಿ ಅವರು ಹೇಳಿದರು.

ಮಿತ್ತಮೂಲೆ-ದೇವರಕಾನ ರಸ್ತೆ ರಿಪೇರಿ ಆಗಲಿಲ್ಲ 2.5 ಲಕ್ಷ ರೂ. ಖರ್ಚು ಬಂದಿದೆ.  ಆದರೆ ಕೆಲಸವಾಗಿದ್ದೆಲ್ಲಿ ಎಂದು ರಮೇಶ್‌ ಮಿತ್ತಮೂಲೆ ಪ್ರಶ್ನಿಸಿದರು. 

ಅದಕ್ಕೆ ಸದಸ್ಯ ನವೀನ್‌ ಕುಮಾರ್‌ ಸಾರಕೆರೆ ಅವರು ಉತ್ತರಿಸಿ, ಆ ಭಾಗದಲ್ಲಿ   ಮೋರಿ ಹಾಕಿ ಸ್ವಲ್ಪ ತಡೆಗೋಡೆ ಮಾಡಿದ್ದೇವೆ. ಅನುದಾನ ಸಾಕಾಗಲಿಲ್ಲ. ಅಲ್ಲಿ ಸರಿ ಆಗಬೇಕಾದರೆ 4 ಲಕ್ಷ ರೂ. ಅನುದಾನ ಬೇಕು ಎಂದು ಹೇಳಿದರು. 

ಅದಕ್ಕೆ ಎಂಜಿನಿಯರ್‌ ಹುಕ್ಕೇರಿ ಅವರೂ ಪ್ರತಿಕ್ರಿಯಿಸಿ, ಅನುದಾನ ಸಾಕಾಗಲಿಲ್ಲ ಇನ್ನೊಮ್ಮೆ ಅನುದಾನ ಇಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು. ಆಗ ರಮೆಶ್‌ರವರು ಈಗ ಮಾಡಿದ 2.5 ಲಕ್ಷದ ಕಾಮಗಾರಿಯೂ ಮಣ್ಣು ಸವೆದು ಹೋಗಿದೆ. ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ ಎಂದು ಹೇಳಿದರು. ಆಗ ಚಂದ್ರಾ ಕೋಲ್ಚಾರ್‌ ಅವರು, ಪ್ರತೀ ವರ್ಷವೂ ಗ್ರಾಮ ಸಭೆಯಲ್ಲಿ ಮೋರಿದ್ದೇ ಚರ್ಚೆ ನಡೆಯುತ್ತಿರುತ್ತದೆ. ಅನುದಾನ ಇಡುವಾಗ ಅಲ್ಲಿಗೆ ಎಷ್ಟು ಬೇಕು ಅಷ್ಟು ಅನುದಾನ ಇಟ್ಟು ಪೂರ್ತಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಕೆಲಸ ಮಾಡಿದ್ದೂ ವ್ಯರ್ಥ, ಹಣವೂ ವ್ಯರ್ಥ ಆಗುತ್ತದೆ ಎಂದು ಹೇಳಿದರು. 

ಅನಂತರ ತೋಟಗಾರಿಕಾ ಇಲಾಖೆಯ ಹರ್ಬನ್‌ ಪೂಜಾರಿ, ಜಿ.ಪಂ. ಎಂಜಿನಿಯರ್‌ ಎಸ್‌.ಎಸ್‌. ಹುಕ್ಕೇರಿ, ಪಶುಸಂಗೋಪನಾ ಇಲಾಖೆಯ ಸೂರ್ಯನಾರಾಯಣ, ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಉಷಾ, ಬೆಳ್ಳಾರೆ ಆರೋಗ್ಯ ಇಲಾಖೆಯ ಡಾ| ಕೃಷ್ಣಮೂರ್ತಿ, ಮೆಸ್ಕಾಂ ಇಲಾಖೆಯ ಸತ್ಯನಾರಾಯಣ, ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್‌ ಆತೀಶ್‌ ಅವರು ತಮ್ಮ ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯೆ  ಪುಷ್ಪಾವತಿ ಬಾಳಿಲ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷ  ಶಾಂತಾರಾಮ ಕಣಿಲೆಗುಂಡಿ, ಸದಸ್ಯರಾದ ಚಂದ್ರಲಿಂಗಂ, ನವೀನ್‌ ಕುಮಾರ್‌ ಸಾರಕರೆ, ಸುಜಾತ ಪವಿತ್ರಮಜಲು,  ರಾಜೀವಿ ಲಾವಂತಡ್ಕ, ಭವಾನಿ ಬಾಂಜಿಕೋಡಿ, ಬಾಲಕೃಷ್ಣ ಕೀಲಾಡಿ, ಎಸ್‌.ಎನ್‌. ದೇವಿಪ್ರಸಾದ್‌ ಕೊಪ್ಪತ್ತಡ್ಕ, ತಿರುಮಲೇಶ್ವರ ಪೂಜಾರಿಮನೆ, ಚೈತ್ರಾ ಕಟ್ಟತ್ತಾರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ ಮಹೇಶ್‌ ಅವರು  ನೋಡೆಲ್‌ ಅ ಧಿಕಾರಿಯಾಗಿ ಗ್ರಾಮ ಸಭೆ ನಡೆಸಿಕೊಟ್ಟರು. ಉಪಾಧ್ಯಕ್ಷ  ಶಾಂತಾರಾಮ ಕಣಿಲೆಗುಂಡಿ ವಂದಿಸಿದರು. 

“ಅವ್ಯಹಾರ ನಡೆದಿಲ್ಲ’
ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯಹಾರ ನಡೆದಿದೆ ಎಂದು ಜಯಪ್ರಕಾಶ್‌ ನೆಕ್ರೆಪ್ಪಾಡಿ ಅವರು ಪಿಡಿಒ ಅವರಲ್ಲಿ ಯೋಗೀಶ್‌ ಕಲ್ಲಗದ್ದೆ ವಿಷಯ ಪ್ರಾಸ್ತಾಪಿಸಿದರು. ಇದಕ್ಕೆ ಪಿಡಿಒ ಶೇಖರ್‌ಪ್ರತಿಕ್ರಿಯಿಸಿ, ಉದ್ಯೋಗ ಖಾತರಿಯಲ್ಲಿ ಅವ್ಯವಹಾರ ನಡೆಯಲು ಸಾಧ್ಯವೇ ಇಲ್ಲ. ಉದ್ಯೋಗ ಖಾತರಿ ಯೋಜನೆಗೆ ಅದರದ್ದೆ ಆದ ಇಂಜಿನಿಯರ್‌, ಮತ್ತು ಸಾಮಾಜಿಕ ತಂಡ ಇದೆ. ಅಡಿಟ್‌ ಕೂಡಾ ಇದೆ. ಮತ್ತೆ ಫಲಾನುಭವಿಗಳ ಪ್ರತೀ ಮನೆಗೆ ಭೇಟಿ ನೀಡುತ್ತಾರೆ. ಹಣ ಬಂದಿದೆಯೋ ಇಲ್ವೋ ಎಂದು ವಿಚಾರಿಸುತ್ತಾರೆ. ಫಲಾನುಭವಿಗಳ  ಖಾತೆಗೆ ನೇರವಾಗಿ ಆನ್‌ ಲೈನ್‌ ಮೂಲಕ ಹಣ ಬರುತ್ತದೆ. ಹಾಗಾಗಿ ಇಲ್ಲಿ ವ್ಯವಹಾರಗಳಾಗುವ ಸಾಧ್ಯತೆಗಳಿಲ್ಲ  ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next