ಹೈಟೆಕ್ ತಂತ್ರಜ್ಞಾನ ಕ್ಷೇತ್ರದ ಪ್ರಬಲ ಆರ್ಥಿಕ ಶಕ್ತಿಯಂತಿದ್ದ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್(ಎಸ್‌ವಿಬಿ)ನ ಮಹಾಪತನ ಇಡೀ ತಂತ್ರಜ್ಞಾನ ಕ್ಷೇತ್ರದ ಬುಡವನ್ನು ಅಲುಗಾಡಿಸಿದೆ. ತಂತ್ರಜ್ಞಾನ ಕಂಪನಿಗಳಿಗೆ ಅದರಲ್ಲೂ ಮುಖ್ಯವಾಗಿ ಸ್ಟಾರ್ಟ್ ಅಪ್(ನವೋದ್ಯಮ)ಗಳಿಗೆ ಭಾರೀ ಪ್ರಮಾಣದಲ್ಲಿ ಸಾಲವನ್ನು ನೀಡುವ ಮೂಲಕ ಕೆಲವೇ ದಶಕಗಳ ಅವಧಿಯಲ್ಲಿ ಅಮೆರಿಕದ ಮುಂಚೂಣಿಯ ಬ್ಯಾಂಕ್ ಆಗಿ ಪರಿಗಣಿಸಲ್ಪಟ್ಟಿತ್ತು. ಸಹಜವಾಗಿಯೇ ಗ್ರಾಹಕರು ಈ ಬ್ಯಾಂಕ್‌ನಲ್ಲಿ ಹೂಡಿಕೆಗೆ ಹೆಚ್ಚಿನ ಆಸಕ್ತಿಯನ್ನು ತೋರಿದರು. ಠೇವಣಿ ಹೆಚ್ಚುತ್ತಿದ್ದಂತೆಯೇ ಭಾರೀ ಮೊತ್ತದ ಬಾಂಡ್‌ಗಳನ್ನು ಖರೀದಿಸಿ ವಿವಿಧೆಡೆಗಳಲ್ಲಿ ಬ್ಯಾಂಕ್ ಹೂಡಿಕೆ ಮಾಡಲಾರಂಭಿಸಿತು. ಆದರೆ ಕಳೆದೊಂದು ವರ್ಷದಿಂದೀಚೆಗೆ ಅಮೆರಿಕದಲ್ಲಿನ ಆರ್ಥಿಕ ಅನಿಶ್ಚಿತತೆಗಳ ಪರಿಣಾಮ ಬ್ಯಾಂಕ್‌ನ ಸ್ಟಾರ್ಟ್‌ಅಪ್ ಫಂಡಿಂಗ್ ಬರಿದಾಯಿತು. ಠೇವಣಿದಾರರಿಗೆ ಹಣ ಮರುಪಾವತಿಸಲೆಂದು ತನ್ನ ಹೂಡಿಕೆಗಳನ್ನು ಮಾರಾಟ ಮಾಡಿದ್ದರಿಂದ 2 ಶತಕೋಟಿ ಡಾಲರ್ ನಷ್ಟ ಅನುಭವಿಸಿದ ಬ್ಯಾಂಕ್‌ನ ತಿಜೋರಿ ಖಾಲಿಯಾಯಿತು. ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಾಗಿಲು ಮುಚ್ಚಿದೆ.
ಕಳೆದ ವರ್ಷಾಂತ್ಯಕ್ಕೆ ಬ್ಯಾಂಕ್‌ನ ಒಟ್ಟಾರೆ 175 ಶತಕೋಟಿ ಬಿಲಿಯನ್ ಡಾಲರ್ ಠೇವಣಿ ಮೊತ್ತದ ಪೈಕಿ ಶೇ. 89ರಷ್ಟು ಠೇವಣಿ ವಿಮೆರಹಿತವಾಗಿದ್ದು ಈ ಎಲ್ಲ ಗ್ರಾಹಕರು ಈಗ ತಮ್ಮ ಹಣದ ಭದ್ರತೆಯ ಕುರಿತಂತೆ ತೀವ್ರ ಆತಂಕದಲ್ಲಿದ್ದಾರೆ. ಎಸ್‌ವಿಬಿ ನೆಲಕಚ್ಚುತ್ತಿದ್ದಂತೆಯೇ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರೀ ತಲ್ಲಣಗಳು ಸೃಷ್ಟಿಯಾಗಿವೆ. ಒಂದೆಡೆಯಿಂದ ಹೂಡಿಕೆದಾರರು ಆತಂಕದಲ್ಲಿದ್ದರೆ ಮತ್ತೂಂದೆಡೆಯಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಅವಲಂಬಿಸಿ ವ್ಯವಹಾರ ನಡೆಸುತ್ತಿದ್ದ ಕಂಪನಿಗಳ ಷೇರುಗಳು ಕೂಡ ಕುಸಿಯತೊಡಗಿದ್ದು ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ನಡುಕ ಸೃಷ್ಟಿಸಿದೆ.
ಎಸ್‌ವಿಬಿಯಲ್ಲಿ ವಿಶ್ವಾದ್ಯಂತದ ಹೈಟೆಕ್ ಕಂಪನಿಗಳು, ಅದರಲ್ಲೂ ಮುಖ್ಯವಾಗಿ ನವೋದ್ಯಮ ಕಂಪನಿಗಳು ತಮ್ಮ ಖಾತೆಗಳನ್ನು ಹೊಂದಿದ್ದು ಇವೆಲ್ಲದರ ವ್ಯವಹಾರವೂ ಈಗ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ. ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್ ಈ ಬೆಳವಣಿಗೆಯ ಬಗೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು ತಂತ್ರಜ್ಞಾನ ಜಗತ್ತಿನಲ್ಲಿ ಬಲುದೊಡ್ಡ ಬಿಕ್ಕಟ್ಟನ್ನು ಇದು ಸೃಷ್ಟಿಸಲಿದೆ ಎನ್ನುವ ಮೂಲಕ ಈ ಆರ್ಥಿಕ ವಿಪ್ಲವದ ಪಶ್ಚಾತ್ ಪರಿಣಾಮಗಳ ಬಗೆಗೆ ಮುನ್ನೆಚ್ಚರಿಕೆ ನೀಡಿದೆ. ಬ್ಯಾಂಕ್ ಪತನದಿಂದ ಟೆಕ್ ಕಂಪನಿಗಳಿಗೆ ನಗದು ಹರಿವಿನ ಕೊರತೆ ಎದುರಾಗುವ ಎಲ್ಲ ಸಾಧ್ಯತೆಗಳಿವೆ.
ಏತನ್ಮಧ್ಯೆ ಅಮೆರಿಕದಲ್ಲಿನ ಭಾರತದ ಕೆಲವು ಕಂಪನಿಗಳು ಕೂಡ ಎಸ್‌ವಿಬಿಯಲ್ಲಿ ಖಾತೆಯನ್ನು ಹೊಂದಿದ್ದರೆ ಮತ್ತೆ ಕೆಲವೊಂದು ಸ್ಟಾರ್ಟ್‌ಅಪ್‌ಗ್ಳು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ವ್ಯವಹಾರವನ್ನು ಹೊಂದಿರುವ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿವೆ. ಈ ಎಲ್ಲ ಕಂಪನಿಗಳು ನಕಾರಾತ್ಮಕ ಪರಿಣಾಮವನ್ನು ಎದುರಿಸುವ ಭೀತಿಯಲ್ಲಿವೆ. ದೇಶದ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರದ ಮೇಲೆ ಎಸ್‌ವಿಬಿ ಪತನ ಪರಿಣಾಮ ಬೀರಲಿದೆ ಎಂದು ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ದೇಶದ ತಂತ್ರಜ್ಞಾನ ಕಂಪನಿಗಳ ಮೇಲೆ ಹೇಳಿಕೊಳ್ಳುವಂತಹ ಪರಿಣಾಮವೇನೂ ಆಗಲಾರದು ಎಂದು ಬಹುತೇಕ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರದಂದು ದೇಶದ ಷೇರು ಮಾರುಕಟ್ಟೆಯ ಮೇಲೆ ಈ ಬೆಳವಣಿಗೆ ಯಾವ ತೆರನಾದ ಪರಿಣಾಮ ಬೀರಲಿದೆ ಎಂಬ ಸೂಚನೆ ಸಿಗಲಿದೆ. ಇದಕ್ಕೆ ಪೂರಕವಾಗಿ ರವಿವಾರ ರಾತ್ರಿ(ಅಮೆರಿಕದಲ್ಲಿ ಬೆಳಗ್ಗೆ) ವೇಳೆಗೆ ಅಮೆರಿಕ, ಯೂರೋಪ್ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಶುರುವಾಗಿದೆ.
ಈ ಸಂಬಂಧ ಈಗಾಗಲೇ ಭಾರತದ ಕೆಲವೊಂದು ಕಂಪೆನಿಗಳು ರಕ್ಷಣೆಗಾಗಿ ಕೇಂದ್ರ ಸರಕಾರದ ಮೊರೆ ಹೋಗಿವೆ. ಇದಕ್ಕೆ ಸ್ಪಂದಿಸಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ತುರ್ತು ಸಭೆ ನಡೆಸಿ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.
ಕೇಂದ್ರ ಸರಕಾರ ಆರಂಭದಿಂದಲೂ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ಟಾರ್ಟ್‌ಅಪ್‌ಗ್ಳ ಸ್ಥಾಪನೆಗೆ ಉತ್ತೇಜನ ನೀಡುತ್ತಲೇ ಬಂದಿರುವುದರಿಂದ ಭಾರತ ಈ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಂಡಿರುವುದರಿಂದ ನವೋದ್ಯಮ ಸಹಿತ ತಂತ್ರಜ್ಞಾನ ಕ್ಷೇತ್ರದ ಮೇಲೆ ಕರಿಛಾಯೆ ಆವರಿಸಿದೆ. ಸಂಕಷ್ಟದ ಸಂದರ್ಭದಲ್ಲಿ ಟೆಕ್ ಕಂಪನಿಗಳ ರಕ್ಷಣೆಗೆ ಸರಕಾರ ನಿಂತಲ್ಲಿ ಮಾತ್ರವೇ ತಂತ್ರಜ್ಞಾನ ಕ್ಷೇತ್ರದಲ್ಲಿನ ತನ್ನ ನಾಗಾಲೋಟವನ್ನು ಮುಂದುವರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಬೇಕಾಗಿದೆ.