Advertisement

ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಪತನ: ಅಮೆರಿಕದ ಮತ್ತೂಂದು ಪ್ರಮುಖ ಬ್ಯಾಂಕ್‌ಗೆ ಬೀಗ

10:14 PM Mar 11, 2023 | Team Udayavani |

ವಾಷಿಂಗ್ಟನ್‌: ತಂತ್ರಜ್ಞಾನ ಜಗತ್ತಿನ ಹಲವು ಪ್ರಮುಖ ನವೋದ್ಯಮಗಳಿಗೆ ಸಾಲ ನೀಡುವ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ)ಪತನಗೊಂಡಿದೆ.

Advertisement

ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಿದ್ದ ಲಕ್ಷಾಂತರ ಮಂದಿ ಆತಂಕಕ್ಕೊಳಗಾಗಿದ್ದು, ಈ ದಿಢೀರ್‌ ಬೆಳವಣಿಗೆಯಿಂದ ಅಮೆರಿಕದ ಬ್ಯಾಂಕಿಂಗ್‌ ವಲಯ ಆಘಾತಕ್ಕೊಳಗಾಗಿದೆ. 2008ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ನೆಲಕಚ್ಚಿದ ಅತಿದೊಡ್ಡ ಬ್ಯಾಂಕ್‌ ಇದಾಗಿದೆ.

ಜಗತ್ತು ಮತ್ತೂಂದು ಆರ್ಥಿಕ ಹಿಂಜರಿತದ ಭೀತಿಯನ್ನು ಎದುರಿಸುತ್ತಿರುವಾಗಲೇ, ಈ ಬೆಳವಣಿಗೆ ನಡೆದಿರುವುದು “ಗಾಯದ ಮೇಲೆ ಬರೆ’ ಎಳೆದಂತಾಗಿದೆ. 2008ರ ಲೇಹ್‌ಮ್ಯಾನ್‌ ಬ್ರದರ್ಸ್‌ ಬ್ಯಾಂಕ್‌ ಬಿಕ್ಕಟ್ಟಿನ ಬಳಿಕ ಅಮೆರಿಕದಲ್ಲಿ ಮತ್ತೂಂದು ಬ್ಯಾಂಕ್‌ ಪತನವಾದಂತಾಗಿದೆ.

ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ಗೆ ಬೀಗ ಬೀಳುತ್ತಿದ್ದಂತೆಯೇ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿದೆ. ಶನಿವಾರ, ಭಾನುವಾರ ಮುಂಬೈ ಷೇರುಪೇಟೆ ರಜೆಯಿದ್ದ ಕಾರಣ, ಭಾರತದ ಮಾರುಕಟ್ಟೆ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದು ಸೋಮವಾರ ಗೊತ್ತಾಗಲಿದೆ.

ಪತನಕ್ಕೆ ಕಾರಣವೇನು?
ಆರಂಭದಲ್ಲಿ ಬ್ಯಾಂಕ್‌ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಸಾಕಷ್ಟು ಹಣವೂ ಹರಿದುಬಂದಿತ್ತು. ಹೀಗಾಗಿ, ವರ್ಷದ ಹಿಂದೆ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಭಾರೀ ಮೊತ್ತದ ಬಾಂಡ್‌ಗಳನ್ನು ಖರೀದಿಸಿತ್ತು. ಉಳಿದೆಲ್ಲ ಬ್ಯಾಂಕುಗಳಂತೆಯೇ ಸಣ್ಣ ಮೊತ್ತದ ಠೇವಣಿಯನ್ನು ಮಾತ್ರ ತನ್ನ ಬಳಿ ಇಟ್ಟುಕೊಂಡು, ಉಳಿದ ಬೃಹತ್‌ ಮೊತ್ತವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಿತು. ಇದರಿಂದ ಸಾಕಷ್ಟು ಲಾಭವೂ ಬರುತ್ತಿತ್ತು. ಆದರೆ, ದುರದೃಷ್ಟವಶಾತ್‌ ಕಳೆದ ವರ್ಷ ಹಣದುಬ್ಬರ ಏರಿಕೆಯಾದ ಕಾರಣ, ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಕೆ ಮಾಡಲು ಆರಂಭಿಸಿತು. ಇದೇ ಸಮಯದಲ್ಲಿ ಸ್ಟಾರ್ಟಪ್‌ ಫ‌ಂಡಿಂಗ್‌ ಕೂಡ ಖಾಲಿಯಾಗತೊಡಗಿತು. ಬ್ಯಾಂಕ್‌ ಗ್ರಾಹಕರ ಮೇಲೆ ಒತ್ತಡಬಿದ್ದು, ಹಣ ವಿತ್‌ಡ್ರಾ ಮಾಡಲು ಆರಂಭಿಸಿದರು. ಗ್ರಾಹಕರಿಗೆ ಅವರ ಹಣ ಮರಳಿಸಲು ಬ್ಯಾಂಕ್‌ನಲ್ಲಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ, ತನ್ನ ಕೆಲವು ಹೂಡಿಕೆಗಳನ್ನು ಮಾರಾಟ ಮಾಡಬೇಕಾಯಿತು. ಇದರಿಂದಾಗಿ ಸುಮಾರು 2 ಶತಕೋಟಿ ಡಾಲರ್‌ನಷ್ಟು ನಷ್ಟ ಅನುಭವಿಸಿತು.

Advertisement

ಬ್ಯಾಂಕಿಗೆ ಬಿತ್ತು ಬೀಗ:
ಕಳೆದ ಕೆಲ ದಿನಗಳಿಂದಲೇ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಪತನಗೊಳ್ಳುವ ಸುಳಿವು ಸಿಕ್ಕಿತ್ತು. ಬ್ಯಾಂಕಿನಲ್ಲಿ ಸಾಕಷ್ಟು ನಗದು ಕೂಡ ಲಭ್ಯವಾಗುತ್ತಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಗ್ರಾಹಕರು ತಮ್ಮ ಹಣವನ್ನು ವಿತ್‌ಡ್ರಾ ಮಾಡಲು ಆರಂಭಿಸಿದ್ದರು. 2 ದಿನಗಳ ಹಿಂದೆಯಷ್ಟೇ ಗ್ರಾಹಕರಿಗೆ ಹಣವನ್ನು ವಾಪಸ್‌ ಪಡೆಯದಂತೆ ಬ್ಯಾಂಕ್‌ ಮನವಿ ಮಾಡಿತ್ತು. ಇದಾದ ಬೆನ್ನಲ್ಲೇ ಶುಕ್ರವಾರ ಕ್ಯಾಲಿಫೋರ್ನಿಯಾದ ಹಣಕಾಸು ರಕ್ಷಣೆ ಮತ್ತು ನಾವೀನ್ಯತಾ ಇಲಾಖೆಯು ಬ್ಯಾಂಕಿಗೆ ಬೀಗ ಜಡಿಯಿತು.

ಸ್ಟಾರ್ಟ್‌ಅಪ್‌ಗ್ಳ ಖಾತೆ:
ಗಮನಾರ್ಹ ಅಂಶವೆಂದರೆ, ಭಾರತದ ಕೆಲವು ಸ್ಟಾರ್ಟ್‌ಅಪ್‌ಗ್ಳು ಈ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದಿರುವ ಅಂಶಗಳೂ ಶನಿವಾರ ಬೆಳಕಿಗೆ ಬಂದಿದೆ.

ಸುಳ್ಳು ಮಾಹಿತಿ ಎಂದ ಇಲಾನ್‌ ಮಸ್ಕ್
ಎಸ್‌ವಿಬಿಯನ್ನು ಟ್ವಿಟರ್‌ ಮಾಲೀಕ ಇಲಾನ್‌ ಮಸ್ಕ್ ಖರೀದಿ ಮಾಡಲಿದ್ದಾರೆ ಎಂಬ ಬಗ್ಗೆ ಜಾಲತಾಣಗಳಲ್ಲಿ ಹಲವು ಸುದ್ದಿಯ ಲಿಂಕ್‌ಗಳು ಹರಿದಾಡಿದ್ದವು. ಆದರೆ, ಮಸ್ಕ್ ಅವರೇ ಸ್ಪಷ್ಟನೆ ನೀಡಿ “ದಿಸ್‌ ಆರ್ಟಿಕಲ್‌ ಈಸ್‌ ಫಾಲ್ಸ್‌’ (ಈ ಲೇಖನದ ಅಂಶಗಳು ಸುಳ್ಳು) ಎಂದು ಬರೆದುಕೊಂಡಿದ್ದಾರೆ.

ಗ್ರಾಹಕರ ಹಣ ಎಲ್ಲಿದೆ?
ಈಗ ಗ್ರಾಹಕರು ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಲ್ಲಿಟ್ಟಿದ್ದ ಒಟ್ಟು 175 ಶತಕೋಟಿ ಡಾಲರ್‌ ಠೇವಣಿಯನ್ನು ಫೆಡರಲ್‌ ಡೆಪಾಸಿಟ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ತನ್ನ ನಿಯಂತ್ರಣಕ್ಕೆ ಪಡೆದಿದೆ. ಜತೆಗೆ, ಅದು ನ್ಯಾಷನಲ್‌ ಬ್ಯಾಂಕ್‌ ಆಫ್ ಸಾಂತಾ ಕ್ಲಾರಾ ಎಂಬ ಹೊಸ ಬ್ಯಾಂಕನ್ನು ಸ್ಥಾಪಿಸಿ, ಸಿಲಿಕಾನ್‌ವ್ಯಾಲಿಯ ಎಲ್ಲ ಸೊತ್ತುಗಳನ್ನೂ ಅದರಲ್ಲಿರಿಸಿದೆ. ಸೋಮವಾರದಿಂದಲೇ ಈ ಹೊಸ ಬ್ಯಾಂಕ್‌ನ ಶಾಖೆಗಳು ತೆರೆಯಲಿದ್ದು, ಸಿಲಿಕಾನ್‌ವ್ಯಾಲಿ ಬ್ಯಾಂಕ್‌ ಕೊಟ್ಟಿದ್ದ ಚೆಕ್‌ಗಳನ್ನು ಕ್ಲಿಯರ್‌ ಮಾಡುವುದಾಗಿಯೂ ತಿಳಿಸಿದೆ. ಪತನಗೊಳ್ಳುವ ಸಮಯದಲ್ಲಿ ಬ್ಯಾಂಕಿನ ಒಟ್ಟು ಆಸ್ತಿ ಮೌಲ್ಯ 209 ಶತಕೋಟಿ ಡಾಲರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next