ದಾವಣಗೆರೆ: ಕ್ರೈಂ ಥ್ರಿಲ್ಲರ್ ಕಥೆ ಆಧಾರಿತ ಸಿಲಿಕಾನ್ ಸಿಟಿ… ಚಿತ್ರ ಜೂ. 16ರಂದು 180 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ತಿಳಿಸಿದರು. ಸುಲಭವಾಗಿ ಹಣ ಸಂಪಾದನೆ ಮಾಡಬೇಕು ಎನ್ನುವ ಭರದಲ್ಲಿ ಯುವ ಸಮೂಹ ತಪ್ಪು ದಾರಿಯಲ್ಲಿ ಸಾಗುವುದು ಕುಟುಂಬದ ಮೇಲೆ ಯಾವ ಪರಿಣಾಮ ಉಂಟು ಮಾಡುತ್ತದೆ ಎಂಬುದರ ಬಗ್ಗೆ ಎಚ್ಚರಿಸುವ ಸಿಲಿಕಾನ್ ಸಿಟಿ…ಉತ್ತಮವಾಗಿ ಮೂಡಿಬಂದಿದೆ.
30-35 ಮಲ್ಟಿಫ್ಲೆಕ್ಸ್ ಸೇರಿ 180-200 ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ. ಮುಂಬೈ, ಹೈದರಾಬಾದ್ ಒಳಗೊಂಡಂತೆ 5 ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ನಂತರ ವಿದೇಶದಲ್ಲೂ ಬಿಡುಗಡೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯುವ ಸಮೂಹ ಅತಿ ಸುಲಭದ ಹಾದಿಯಲ್ಲಿ ಹಣ ಸಂಪಾದನೆ ಮಾಡಬೇಕು ಎಂಬ ಹಪಾಹಪಿಯಲ್ಲಿರುತ್ತದೆ.
ಅದಕ್ಕಾಗಿ ಹಿಡಿಯುವಂತಹ ತಪ್ಪು ಹಾದಿಯ ನೇರ ಪರಿಣಾಮ ಕುಟುಂಬದಲ್ಲಿ ಏನೆಲ್ಲಾ ಅಲ್ಲೊಲ-ಕಲ್ಲೋಲಕ್ಕೆ ಕಾರಣವಾಗುತ್ತದೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು. ಸುಮಾರು ಎರಡು ವರ್ಷದ ನಂತರ ಸಿಲಿಕಾನ್ ಸಿಟಿ…ಯಲ್ಲಿ ಅಭಿನಯಿಸಿದ್ದೇನೆ.
ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ಕಥೆಗಳಿವೆ. ಈಗಿನ ವಾತಾವರಣದ ಬಯಕೆಗೆ ತಕ್ಕಂತ ಕಥೆ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಈ ಚಿತ್ರದ ನಂತರ ಮೋಡ ಕವಿದ ವಾತಾವರಣ…ದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದರು. ಶ್ರೀನಗರ ಕಿಟ್ಟಿ ರೋಮ್ಯಾನ್ಸ್ ದೃಶ್ಯದಲ್ಲಿ ಅಭಿನಯಿಸುವುದಕ್ಕೆ ಮುಜುಗರ ಪಡುತ್ತಾರೆ ಎಂಬ ಆರೋಪ ನಿಜವಲ್ಲ.
ಹಲವಾರು ಚಿತ್ರದಲ್ಲಿ ನಟಿಸಿದ್ದೇನೆ. ಇನ್ನು ಮುಂದೆ ಇನ್ನೂ ಚೆನ್ನಾಗಿ ನಟಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಹಾಸ್ಯ ಚಟಾಕಿ ಹಾರಿಸಿದರು. ಚಿತ್ರದ ನಿರ್ದೇಶಕ ಮುರುಳಿ ಗುರಪ್ಪ ಮಾತನಾಡಿ, ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೇ ಚಿತ್ರ ನಿರ್ದೇಶಿಸಬೇಕು ಎಂಬ ಕನಸು ಈಗ ನನಸಾಗಿದೆ.
ಸಿಲಿಕಾನ್ ಸಿಟಿ ತಮಿಳಿನ ಮೆಟ್ರೋ… ಚಿತ್ರದ ರಿಮೇಕ್. ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರ ತಯಾರಿಸಲಾಗಿದೆ ಎಂದು ತಿಳಿಸಿದರು. ನಾಯಕ ನಟರಾಗಿ ಶ್ರೀನಗರಕಿಟ್ಟಿ, ನಾಯಕಿಯಾಗಿ ಕಾವ್ಯಶೆಟ್ಟಿ, ಕಿಟ್ಟಿ ಸಹೋದರನ ಪಾತ್ರದಲ್ಲಿ ಸ್ವಂತ ತಮ್ಮ ಸೂರಜ್‌ಗೌಡ, ಅವರಿಗೆ ನಾಯಕಿಯಾಗಿ ಏಕತಾ ರಾಥೋಡ್ ಅಭಿನಯಿಸಿದ್ದಾರೆ.
ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳಿವೆ ಎಂದು ತಿಳಿಸಿದರು. ನಾಯಕಿ ನಟಿ ಕಾವ್ಯಶೆಟ್ಟಿ ಮಾತನಾಡಿ, ಇಷ್ಟಕಾಮ್ಯದ ನಂತರ ಸಿಲಿಕಾನ್ ಸಿಟಿಯಲ್ಲಿ ನಟಿಸಿದ್ದೇನೆ. ಪ್ರತಿಯೊಬ್ಬರೂ ಚಿತ್ರ ವೀಕ್ಷಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.