ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ಮಳೆ ಕೊರತೆ ಇದ್ದರೂ, ರಸ್ತೆಗಳಲ್ಲಿನ ಗುಂಡಿಗಳಿಗೇನೂ ಕಡಿಮೆ ಇಲ್ಲ. ನಗರದ ಪ್ರತಿಷ್ಠಿತ ರಸ್ತೆಗಳಲ್ಲೇ ಮಾರುದ್ಧದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿವೆ. ನಗರದ ಹೃದಯ ಭಾಗವಾದ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಪ್ಲಾಟ್‌ಫಾರಂ ಪ್ರವೇಶಿಸುವ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿದ್ದು ಮಾರುದ್ಧದ ಗುಂಡಿಗಳು ಬಿದ್ದಿವೆ.
ಜಲ್ಲಿ ಮೇಲೆದ್ದು ಜನರ ಓಡಾಟಕ್ಕೂ ತೊಂದರೆ ಆಗಿದೆ. ಬಿಎಂಟಿಸಿ ಬಸ್ ನಿಲ್ದಾಣದ ಮುಖ್ಯದ್ವಾರದಿಂದ ಸಿಟಿ ರೈಲ್ವೆ ನಿಲ್ದಾಣವರೆಗೂ ದೊಡ್ಡ ಪ್ರಮಾಣದಲ್ಲಿ ನೂರಕ್ಕೂ ಅಧಿಕ ಗುಂಡಿಗಳು ಬಿದ್ದಿವೆ. ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳ ಡಾಂಬರಿನ ಮೇಲ್ಪದರ ಕಿತ್ತು ಹೋಗಿದೆ. ಕೆಲವು ಕಡೆಗಳಲ್ಲಿ ಗುಂಡಿಬಿದ್ದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಜಲ್ಲಿಕಲ್ಲುಗಳು ತುಂಬಿವೆ. ದ್ವಿಚಕ್ರ ಸವಾರರ ಪ್ರಾಣಕ್ಕೆ ಕಂಟಕ ತರುತ್ತಿವೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನ ಹರಿಸಿ ರಾಜಧಾನಿಯ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಕೆಲಸ ಮಾಡಬೇಕಾಗಿದೆ ಎಂದು ನಾಗರಿಕರು ಆಗ್ರಹಿಸುತ್ತಾರೆ.
ಗಡುವು ಹಾಕಿಕೊಂಡ ಪಾಲಿಕೆ: ಪಾಲಿಕೆ ರಸ್ತೆ ಗುಂಡಿಗಳ ಬಗ್ಗೆ ಎಚ್ಚರಿಕೆ ವಹಿಸಿದೆ. ಕಳೆದ ವರ್ಷ ಗುಂಡಿಗಳನ್ನು ಮುಚ್ಚಲು ಸಲುವಾಗಿಯೇ 30 ಕೋಟಿ ರೂ. ವೆಚ್ಚ ಮಾಡಿತ್ತು. ಈ ವರ್ಷ ಪೂರ್ಣ ಪ್ರಮಾಣದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯಲಿದೆ. ನಗರದಲ್ಲಿ ಶೇ.90 ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಪಣ ತೊಟ್ಟಿದ್ದು, ಇದಕ್ಕಾಗಿ ನ.30ರ ಡೆಡ್‌ಲೈನ್ ಹಾಕಿಕೊಂಡಿದೆ. ನ.1ರಿಂದ ಕೆಲಸ ಆರಂಭವಾಗಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವರ್ಷ ಬಿಬಿಎಂಪಿ ಮಳೆಯ ನೆಪ ಕೊಡಲು ಸಾಧ್ಯ ಆಗುತ್ತಿಲ್ಲ. ಈಗ ರಸ್ತೆ ಗುಂಡಿಗಳ ಬಗ್ಗೆ ಎಚ್ಚೆತ್ತಿರುವ ಅಧಿಕಾರಿಗಳು, ಮುಚ್ಚಲು ಟೆಂಡರ್ ಕರೆದಿದ್ದಾರೆ. ಶೀಘ್ರದಲ್ಲೇ ರಸ್ತೆಗಳು ಗುಂಡಿ ಮುಕ್ತ ಆಗುವ ಸಾಧ್ಯತೆ ಹೆಚ್ಚಿದೆ.
ರಸ್ತೆ ಗುಂಡಿ ಮುಚ್ಚಲು ಅನುದಾನ ಮೀಸಲು: ರಾಜಧಾನಿಯಲ್ಲಿರುವ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಬಿಬಿಎಂಪಿ ಸಿದ್ಧತೆ ನಡೆಸಿದೆ. ಕ್ಷೇತ್ರವಾರು ಅನುದಾನ ಮೀಸಲಿಟ್ಟಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು 3.6 ಕೋಟಿ ರೂ. ಮೀಸಲಿಡಲಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು 1.5 ಕೋಟಿ ರೂ. ಚಿಕ್ಕಪೇಟೆ, ಜಯನಗರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ತಲಾ 90 ಲಕ್ಷ ರೂ.ಮೀಸಲಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಮಲ್ಲೇಶ್ವರಂ 75 ಲಕ್ಷ ರೂ.,ಗೋವಿಂದರಾಜನಗರ 60 ಲಕ್ಷ ರೂ, ರಾಜರಾಜೇಶ್ವರಿ ನಗರ ,ಹೆಬ್ಟಾಳ, ಪುಲಕೇಶಿ ನಗರ ಹಾಗೂ ಶಾಂತಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ತಲಾ 15ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ ಹೇಳಿವೆ. ರಾಜಧಾನಿಯ ಪ್ರಮುಖ ರಸ್ತೆಗಳು ನ.30ರೊಳಗೆ ಗುಂಡಿ ಮುಕ್ತ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಸ್ಥಳೀಯ ವಲಯಗಳಿಗೂ ಜವಾಬ್ದಾರಿ ನೀಡಲಾಗಿದೆ.
ಗುಂಡಿ ಬಿದ್ದಿರುವ ಪ್ರತಿಷ್ಠಿತ ರಸ್ತೆಗಳು :
ನಗರದ ಎಂ.ಜಿ.ರಸ್ತೆ ಮಹಾತ್ಮಾಗಾಂಧಿ ಪ್ರತಿಮೆ, ಕೆಂಪೇಗೌಡ ಬಸ್ ನಿಲ್ದಾಣ, ಹೊಸೂರು ಮುಖ್ಯರಸ್ತೆ, ಚಾಮರಾಜಪೇಟೆ, ಬನಶಂಕರಿ, ಜಯನಗರ, ಆನೇಪಾಳ್ಯ, ವಿಲ್ಸನ್ ಗಾರ್ಡನ್, ವಿಜಯನಗರ, ಮೂಡಲಪಾಳ್ಯ, ಕೋಣನಕುಂಟೆ ಕ್ರಾಸ್, ಚಿಕಲ್ಲಸಂದ್ರ, ದೊಡ್ಡಕಲ್ಲಸಂದ್ರ, ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ವಿವೇಕನಗರ, ಗರುಡ ಮಾಲ್ ಸಿಗ್ನಿಲ್, ಜೆ.ಸಿ.ನಗರ, ಬನ್ನೇರುಘಟ್ಟ ರಸ್ತೆ ಸೇರಿ ಬಹುತೇಕ ರಸ್ತೆಗಳಲ್ಲಿ ಡಾಂಬರು ಕಿತ್ತು ಹೋಗಿದ್ದು, ಗುಂಡಿಗಳದ್ದೇ ಕಾರುಬಾರಾಗಿದೆ. ದ್ವಿಚಕ್ರ ವಾಹನ ಸವಾರರು ಪ್ರಾಣ ಭೀತಿಯಲ್ಲೆ ಸಂಚರಿಸುವಂತೆ ಆಗಿದೆ.
ಬಜೆಟ್‌ನಲ್ಲಿ ಇರಿಸಲಾಗಿರುವ ಅನುದಾನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮುಗಿದ ತಕ್ಷಣ ಬಿಡುಗಡೆಯಾಗಲಿದೆ. ರಾಜಧಾನಿ ವ್ಯಾಪ್ತಿಯ ಪ್ರಮುಖ 1,400 ಕಿ.ಮೀ. ವರೆಗಿನ ರಸ್ತೆಯನ್ನು ನವೆಂಬರ್ ಅಂತ್ಯದೊಳಗೆ ಗುಂಡಿಮುಕ್ತ ಮಾಡಲು ಪಣ ತೊಡಲಾಗಿದೆ.
– ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಬಿಬಿಎಂಪಿ.
ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಪಾದಚಾರಿಗಳು ಬಸ್ ನಿಲ್ದಾಣ ಪ್ರವೇಶಿ ಸಲು ಭಯ ಪಡುವ ಸ್ಥಿತಿ ನಿರ್ಮಾಣ ವಾಗಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಿಲ್ಲ.
– ದೊಡ್ಡೇಗೌಡ, ಹನುಮಂತ ನಗರದ ನಿವಾಸಿ.
-ದೇವೇಶ ಸೂರಗುಪ್ಪ