ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕೆಂಗಣ್ಣಿಗೆ ಗುರಿಯಾಗಿರುವ ರೌಡಿ ಶೀಟರ್‌ಗಳಾದ ಸೈಲೆಂಟ್ ಸುನೀಲ ಹಾಗೂ ಕುಣಿಗಲ್ ಗಿರಿಗೆ ಲೋಕಸಭೆ ಚುನಾವಣೆ ಮುಗಿಯುವವರೆಗೆ ಸಿಸಿಬಿ ಕಚೇರಿಗೆ ನಿತ್ಯ ಹಾಜರಾಗಿ ಸಹಿ ಮಾಡಿ ಹೋಗುವಂತೆ ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ಆಗಮಿಸಿದ ಇಬ್ಬರು ರೌಡಿಶೀಟರ್‌ಗಳನ್ನು ಸಂಜೆ ನಾಲ್ಕು ಗಂಟೆವರೆಗೂ ಎಸಿಪಿ ಬಾಲರಾಜ್ ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ದರೋಡೆ, ಡಕಾಯಿತಿಯಿಂದ ದೂರ ಉಳಿದಿರುವ ಕುಣಿಗಲ್ ಗಿರಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಲಕ್ಷಾಂತರ ರೂ. ಸಂಪಾದನೆ ಮಾಡಿದ್ದಾನೆ.
ಮತ್ತೂಂದೆಡೆ ಶಿವಕುಮಾರ್ ಎಂಬುವರ ಹೆಸರಿನಲ್ಲಿ ಬಿಬಿಎಂಪಿ ಕಸ ವಿಲೇವಾರಿ ಗುತ್ತಿಗೆ ಪಡೆದಿರುವ ಸೈಲೆಂಟ್ ಸುನಿಲ, ಕೆಲ ಅಪರಾಧ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿದ್ದಾನೆ. ಅಲ್ಲದೆ, ಶುಕ್ರವಾರ ಸಿಸಿಬಿ ಕೇಂದ್ರ ಕಚೇರಿಯಲ್ಲಿ ನಡೆದ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೇ, “ಏನ್ ಮಾಡ್ತಿರಾ’? ಎಂದು ಪ್ರಶ್ನಿಸಿ ಉದಟತನ ತೋರಿದ್ದ.
ಇದರಿಂದ ಕೆಂಡಾಮಂಡಲವಾದ ಅಲೋಕ್ ಕುಮಾರ್, ಲೋಕಸಭೆ ಚುನಾವಣೆ ಮುಕ್ತಾಯಗೊಳ್ಳುವವರೆಗೂ ಇಬ್ಬರು ಪ್ರತಿನಿತ್ಯ ಸಿಸಿಬಿ ಕಚೇರಿಗೆ ಆಗಮಿಸಿ ಸಹಿ ಹಾಕಿ ಹೋಗುವಂತೆ ಸೂಚಿಸಲಾಗಿದೆ.