Advertisement
ಸ್ವಾಮೀಜಿಯವರು ಮಠದಲ್ಲಿದ್ದರೆ ಅಥವಾ ಮಠಕ್ಕೆ ಬರುತ್ತಾರೆಂದು ಗೊತ್ತಾಗುತ್ತಿದ್ದರೆ ಗಿಜಿಗುಡುತ್ತಿದ್ದ ಜನಸಂದಣಿ ಸೋಮವಾರ ಇರಲಿಲ್ಲ. ಉಡುಪಿಯಲ್ಲಿದ್ದಾಗ ಮಠದ ಗರ್ಭಗುಡಿ ಎದುರು ಅವರು ಜಪ, ಪಾರಾಯಣ ಮಾಡುತ್ತಿದ್ದ ಸ್ಥಳ ಅವರಿಲ್ಲದ ಶೂನ್ಯಭಾವವನ್ನು ಹೊಂದಿತ್ತು. ಸ್ವಾಮಿಗಳಿದ್ದಾರೆಂದರೆ ಅವರ ಸುತ್ತಮುತ್ತ ಓಡಾಡುತ್ತಿದ್ದ ವಿದ್ಯಾರ್ಥಿಗಳೊಬ್ಬರೂ ಇಲ್ಲದ ನೀರವ ವಾತಾವರಣವಿತ್ತು.
Related Articles
Advertisement
ರಥಬೀದಿಯಲ್ಲಿಯೂ ಜನಸಂಚಾರ ತುಸು ವಿರಳವೇ ಇತ್ತು. ಶ್ರೀಕೃಷ್ಣಮಠದಲ್ಲಿ ದೈನಂದಿನ ಕಾರ್ಯಕ್ರಮ ನಡೆಯುತ್ತಿದ್ದರೂ ಪೇಜಾವರ ಶ್ರೀಗಳ ಅಗಲುವಿಕೆ ದುಃಖ ಶ್ರೀಮಠಕ್ಕೆ ಭೇಟಿ ನೀಡಿದ ಭಕ್ತವರ್ಗದ ಮುಖಭಾವದಲ್ಲಿ ಕಾಣುತ್ತಿತ್ತು. ನಗರದ ಜನರ ಬಾಯಲ್ಲೂ ಪೇಜಾವರ ಶ್ರೀಗಳ ಸ್ಮತಿಪಟಲ ಹೊರಸೂಸುತ್ತಿತ್ತು. “ಅವರ ಮೌಲ್ಯ ಇನ್ನು ಗೊತ್ತಾಗುತ್ತದೆ. ಇದ್ದಾಗ ಗೊತ್ತಾಗುತ್ತಿರಲಿಲ್ಲ’ ಎಂಬ ಮಾತನ್ನು ಹೇಳಿದವರು ಅದೆಷ್ಟೋ ಮಂದಿ…
ನೀರವತೆಯ ನಡುವೆಯೂ ಜೀವಂತಿಕೆನೀರವ ವಾತಾವರಣದ ನಡುವೆಯೂ ಪೇಜಾವರ ಮಠವನ್ನು ಜೀವಂತವಾಗಿರಿಸಿರುವುದು ಕಿರಿಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಚಿಕ್ಕ ಮಕ್ಕಳ ಪ್ರಹ್ಲಾದ ಗುರುಕುಲ. ಇದರ ವಿದ್ಯಾರ್ಥಿಗಳು ನಿತ್ಯ ಗುರುಕುಲದಲ್ಲಿ ಮಾಡುವ ಸ್ತೋತ್ರ ಪಾಠಗಳನ್ನು ಸೋಮವಾರ ಪೇಜಾವರ ಮಠದಲ್ಲಿರಿಸಿದ ಹಿರಿಯ ಸ್ವಾಮೀಜಿಯವರ ಭಾವಚಿತ್ರದೆದುರು ಮಂಡಿಸಿದ ಮುಗ್ಧ ಮನಸ್ಸಿನ ಪ್ರಾರ್ಥನೆ ಅದೇ ತೆರನಾಗಿ ಮುಗ್ಧವಾಗಿದ್ದ ಹಿರಿಯ ಸ್ವಾಮೀಜಿಯವರಿಗೆ ತಲುಪಬಹುದೋ ಎಂದೆನಿಸುತ್ತಿತ್ತು. ಒಬ್ಬ ವಿದ್ಯಾರ್ಥಿ “ನಾನು ಡಾಕ್ಟರ್ ಆಗ್ತೀನೆ. ನಾನಾಗಿದ್ದರೆ ಸ್ವಾಮಿಗಳನ್ನು ಉಳಿಸಿಕೊಳ್ತಿದ್ದೆ’ ಎಂದು ಹೇಳಿದ. “ನಮಗೆ ಇಬ್ಬರು ಸ್ವಾಮಿಗಳೂ ಇಷ್ಟ. ಏಕೆಂದರೆ ಕಿರಿಯ ಸ್ವಾಮಿಗಳಿಗೆ ಹಿರಿಯ ಸ್ವಾಮಿಗಳು ಪಾಠ ಮಾಡಿದ್ದರು. ನಾವು ಸಿಕ್ಕಿದಾಗ ಹೆಸರು, ಊರು ಕೇಳಿ ಹಣ್ಣುಗಳನ್ನು ಕೊಡುತ್ತಿದ್ದರು’ ಇನ್ನೊಬ್ಬ ವಿದ್ಯಾರ್ಥಿ ಹೇಳಿದ. ಬಾಲಮಕ್ಕಳ ಮನಸ್ಸಿನ ಮೇಲೂ ವಯೋವೃದ್ಧ, ಜ್ಞಾನವೃದ್ಧ ಸ್ವಾಮಿಗಳು ತಮ್ಮ ಛಾಪು ಒತ್ತಿರುವುದು ಕಂಡುಬರುತ್ತಿತ್ತು.