ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿಯು ಪರಿಷ್ಕರಣೆ ಮಾಡಿರುವ ಶಾಲಾ ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ, ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ಶಿಕ್ಷಣ ಇಲಾಖೆಯು ಅನುಮತಿ ನೀಡುವ ಮೊದಲೇ ದ್ವಿತೀಯ ಪಿಯುಸಿ ಇತಿಹಾಸ ಪಠ್ಯವನ್ನು ಕೂಡ ಪರಿಷ್ಕರಣೆ ಮಾಡಿ ಮುಗಿಸಲಾಗಿದೆ. ಪರಿಷ್ಕೃತ ಪ್ರತಿಯು ಪಿಯು ಇಲಾಖೆ ಕಚೇರಿ ಸೇರಿದ್ದು, ಸರಕಾರ ಅನುಮತಿ ನೀಡದ ಕಾರಣ ಪ್ರಧಾನ ಕಾರ್ಯದರ್ಶಿಗಳಿಗೆ ನೀಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇಲಾಖೆ ಸಿಲುಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದ್ವಿತೀಯ ಪಿಯು ಇತಿಹಾಸ ಪಠ್ಯಪುಸ್ತಕದಲ್ಲಿ “ಹೊಸ ಧರ್ಮದ ಉದಯ’ ಎಂಬ ಅಧ್ಯಾಯವನ್ನು ಪರಿಷ್ಕರಣೆ ಮಾಡಿದೆ. ಬ್ರಾಹ್ಮಣ ಸಮುದಾಯಕ್ಕೆ ಕೆಟ್ಟ ಹೆಸರು ತರುವಂತಹ ಅಂಶಗಳಿದ್ದವು ಎಂಬ ಕಾರಣಕ್ಕೆ ಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಖಚಿತ ಪಡಿಸಿದೆ.
ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಇಲಾಖೆಗೆ ಕಳೆದ ಫೆಬ್ರ ವರಿಯಲ್ಲಿ ಟಿಪ್ಪಣಿ ಬರೆದಿದ್ದರು. ಆದರೆ, ಇಲಾಖೆಯು ಪರಿಷ್ಕರಣೆಗೆ ಅಧಿಕೃತವಾಗಿ ಆದೇಶ ಮಾಡಿಲ್ಲ. ಹೀಗಾಗಿ, ಪರಿಷ್ಕರಣೆ ಮಾಡಿರುವ ಪ್ರತಿಯು ಪಿಯು ಇಲಾಖೆಯಲ್ಲಿದೆ. ಪ್ರಧಾನ ಕಾರ್ಯದರ್ಶಿಗಳಿಗೆ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ದ್ವಿತೀಯ ಪಿಯುಸಿ ಇತಿಹಾಸ ಪಾಠದಲ್ಲಿ ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿ ಜಾತಿ ದ್ವೇಷ ಬಳಸುವ ಪಾಠವಿದೆ. ಮೇಲ್ವರ್ಗ, ಕೆಳ ವರ್ಗ ಎಂದು ಬಳಸಲಾಗಿದೆ. ಈ ಸಾಲನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಬೇರೆ ಇದ್ಯಾವ ಪಾಠವನ್ನು ಕೂಡ ಪರಿಷ್ಕರಣೆ ಮಾಡುತ್ತಿಲ್ಲ.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವ