ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿ ಭಾರತ – ಚೀನ ಸೇನಾ ಮುಖಾಮುಖೀ ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ ಬೀಜಿಂಗ್ ಹೊಸದಿಲ್ಲಿಗೆ ತನ್ನ ಸೇನೆಯನ್ನು “ಕೂಡಲೇ’ ಮತ್ತು “ಬೇಷರತ್’ ಆಗಿ ಹಿಂದಕ್ಕೆ ಕರೆಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.
ಉಭಯ ದೇಶಗಳ ನಡುವೆ ಸಿಕ್ಕಿಂ ಗಡಿಗೆ ಸಂಬಂಧಿಸಿದಂತೆ ಇರುವ ಯಾವುದೇ ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕೆ ಅರ್ಥಪೂರ್ಣ ಮಾತುಕತೆಯನ್ನು ಕೈಗೊಳ್ಳುವ ಮುನ್ನ ಭಾರತ ನಿಶ್ಶರ್ತವಾಗಿ ಮತ್ತು ತತ್‌ಕ್ಷಣವೇ ತನ್ನ ಸೇನೆಯನ್ನು ಹಿಂದೆ ಕರೆಸಿಕೊಳ್ಳಬೇಕು ಎಂದು ಬೀಜಿಂಗ್ ಎಚ್ಚರಿಕೆ ನೀಡಿದೆ.
ಭಾರತದಲ್ಲಿನ ಚೀನ ದೂತಾವಾಸದಲ್ಲಿರುವ ರಾಜಕೀಯ ಸಲಹೆಗಾರ ಲಿ ಯಾ ಅವರು ಈ ಸಲಹೆಯನ್ನು ಹೊಸದಿಲ್ಲಿಗೆ ನೀಡಿದ್ದಾರೆ.
“ಉಭಯ ದೇಶಗಳ ನಡುವೆ ಯಾವುದೇ ಅರ್ಥಪೂರ್ಣ ಮಾತುಕತೆ ನಡೆಯಲು ಸಾಧ್ಯವಾಗಬೇಕಾದರೆ ಅದಕ್ಕೆ ಮುನ್ನ ಭಾರತ ಸಿಕ್ಕಿಂ ಗಡಿಯಿಂದ ತನ್ನ ಸೇನೆಯನ್ನು ಈ ಕೂಡಲೆ ಹಿಂದೆಗೆಯಬೇಕು ಎಂದು ಅವರು ಹೇಳಿದ್ದಾರೆ. ಚೀನ ದೂತಾವಾಸವು ಈ ಸಂಬಂಧ ವಿಡಿಯೋ ಸಂದೇಶವನ್ನು ಬಿಡುಗಡೆಮಾಡಿದೆ.
ಸಿಕ್ಕಿಂ ಮತ್ತು ಟಿಬೆಟ್‌ಗೆ ಸಂಬಂಧಪಟ್ಟಂತೆ 1890ರಲ್ಲಿ ಆಗಿದ್ದ ಚೀನ – ಬ್ರಿಟನ್ ಒಪ್ಪಂದದ ಸಿಕ್ಕಿಂ ಗಡಿಯಲ್ಲಿನ ಡೋಕ್‌ಲಾಮ್ ಪ್ರದೇಶವು ಚೀನಕ್ಕೆ ಸೇರಿದ್ದಾಗಿದ್ದು ಇದನ್ನು ಸಾಬೀತು ಪಡಿಸುವ ದಾಖಲೆ ಪತ್ರಗಳು ನಮ್ಮಲ್ಲಿವೆ. ಡೋಕ್‌ಲಾಮ್ ನಲ್ಲಿ ನಾವು ರಸ್ತೆಯನ್ನು ನಿರ್ಮಿಸುತ್ತಿರುವುದು ನಮ್ಮ ಸಾರ್ವಭೌಮ ಭೂಪ್ರದೇಶದ ಒಳಗಿನ ಕಾನೂನು ಬದ್ಧ ಚಟುವಟಿಕೆಯೇ ಆಗಿದೆ; ಭಾರತ ಅಥವಾ ಭೂತಾನ್ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಬೀಜಿಂಗ್ ಹೇಳಿದೆ.