ನವದೆಹಲಿ: ಸುಮಾರು ಒಂದು ತಿಂಗಳ ಹಿಂದೆ ಪೂರ್ವ ಅಫ್ಘಾನಿಸ್ತಾನದ ಪಾಕ್ಟಿಕಾ ಪ್ರಾಂತ್ಯದ ಗುರುದ್ವಾರದಲ್ಲಿ ತಾಲಿಬಾನ್ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಅಫ್ಘಾನ್ ಸಿಖ್ ನಿದಾನ್ ಸಿಂಗ್ ಸಚ್ ದೇವ್ ಅವರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ನಿದಾನ್ ಸಿಂಗ್ ಅಫ್ಘಾನಿಸ್ತಾನದ ಚಮ್ಕಾನಿಯ ಥಾಲಾ ಶ್ರೀ ಗುರು ನಾನಕ್ ಸಾಹಿಬ್ ಗುರುದ್ವಾರದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಿಂಗ್ ಅವರನ್ನು ಅಪಹರಿಸಿಕೊಂಡು ಹೋಗಿರುವುದಾಗಿ ವರದಿ ವಿವರಿಸಿದೆ.
ಅಫ್ಘಾನ್ ಪ್ರಜೆಯಾಗಿರುವ ನಿದಾನ್ ಸಿಂಗ್ (55ವರ್ಷ), ಕಳೆದ ಕೆಲವು ವರ್ಷಗಳಿಂದ ದೆಹಲಿಯಲ್ಲಿ ಪತ್ನಿ, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳ ಜತೆ ವಾಸವಾಗಿದ್ದರು. 1992ರಲ್ಲಿ ಅಫ್ಘಾನಿಸ್ತಾನದಲ್ಲಿ ತಲೆದೋರಿದ್ದ ಸಾಮಾಜಿಕ ಅಶಾಂತಿ, ಗಲಭೆಯಿಂದಾಗಿ ದೆಹಲಿಗೆ ಆಗಮಿಸಿ ನಿರಾಶ್ರಿತ ಶಿಬಿರದಲ್ಲಿದ್ದರು.
ಪಾಕ್ಟಿಯಾ ಪ್ರಾಂತ್ಯ ತಾಲಿಬಾನ್ ಉಗ್ರರ ಸುರಕ್ಷಿತ ತಾಣವಾಗಿದ್ದು, ಹಕ್ಕಾನಿ ನೆಟ್ ವರ್ಕ್ ಕೂಡಾ ಕಾರ್ಯಾಚರಿಸುತ್ತಿದೆ ಎಂದು ವರದಿ ತಿಳಿಸಿದೆ. ನಿದಾನ್ ಸಿಂಗ್ ದೆಹಲಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ವರದಿ ಹೇಳಿದೆ.
ನಿದಾನ್ ಸಿಂಗ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಸಿಂಗ್ ರಕ್ಷಣೆಗಾಗಿ ಭಾರತ ಸರ್ಕಾರ ಅಫ್ಘಾನ್ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿತ್ತು.