Advertisement

ಕಾಯುವಿಕೆ ಇನ್ನಿಲ್ಲ ; ಫ‌ಲಾನುಭವಿ ಮಿತಿ ಏರಿಕೆ

02:04 AM Oct 04, 2020 | mahesh |

ಕೋಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 58 ವರ್ಷ ಮೇಲ್ಪಟ್ಟ, ಅರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ನೀಡುತ್ತಿರುವ ಮಾಸಾಶನದ ನಿಯಮದಲ್ಲಿ ಮಹತ್ವದ ತಿದ್ದುಪಡಿಗಳನ್ನು ಮಾಡಿದ್ದು, ಕಲಾವಿದರಿಗೆ ವರದಾನವಾಗಿದೆ.

Advertisement

ಪ್ರಸ್ತುತ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಹಾಗೂ ಕಲಾವಿದರ ಮರಣಾ ನಂತರ ಕುಟುಂಬಕ್ಕೆ ಶೇ. 50ರಷ್ಟು ಮೊತ್ತ ಪಾವತಿಸುವ ಸೌಲಭ್ಯ ರಾಜ್ಯದಲ್ಲಿದೆ. ಆದರೆ ಆಯ್ಕೆ ಪದ್ಧತಿಯ ದೋಷದಿಂದಾಗಿ ಕಲಾವಿದರು ಅರ್ಜಿ ಸಲ್ಲಿಸಿ ಮೂರ್‍ನಾಲ್ಕು ವರ್ಷ ಪರದಾಡುವ ಸ್ಥಿತಿ ಇದೆ. ಇಲಾಖೆ ಮಾಡಿರುವ ತಿದ್ದುಪಡಿ ಗಳಿಂದಾಗಿ ಇನ್ನಷ್ಟು ಕಲಾ ವಿದರು ಈ ಸೌಲಭ್ಯ ಪಡೆಯ ಬಹುದಾಗಿದೆ. ವೃದ್ಧಾಪ್ಯ ವೇತನ ಮುಂತಾದ ಪಿಂಚಣಿ ಪಡೆಯುವವರು ಸೌಲಭ್ಯಕ್ಕೆ ಅರ್ಹರಲ್ಲ ಎನ್ನುವ ನಿಯಮ ಮುಂದು ವರಿದಿದೆ.

ಬದಲಾವಣೆ ಏನು?
ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಅನಂತರ ಆಯಾಯ ಅಕಾಡೆಮಿಗಳ ಮೂಲಕ ದಾಖಲೆಗಳನ್ನು ಪರಿಶೀಲಿಸಿ ರಾಜ್ಯ ಇಲಾಖೆಗೆ ರವಾನಿಸಲಾಗುತ್ತಿತ್ತು ಮತ್ತು ಅವುಗಳನ್ನು ಪ್ರತ್ಯೇಕ ಆಯ್ಕೆ ಸಮಿತಿಯ ಮುಂದೆ ಹಾಜರುಪಡಿಸಿ ಸರಕಾರದ ಮೂಲಕ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗುತ್ತಿತ್ತು. ಇದೀಗ ವಿಳಂಬವನ್ನು ತಪ್ಪಿಸಲು ಜಿಲ್ಲಾ ಕೇಂದ್ರಗಳಿಂದ ಅರ್ಜಿ ಪಡೆದು, ಅಕಾಡೆಮಿಗಳಿಗೆ ರವಾನಿಸಿ ಅಲ್ಲಿ ಪರಿಶೀಲನೆಯ ಬಳಿಕ ರಾಜ್ಯ ಇಲಾಖೆ ಮೂಲಕ ಅಕಾಡೆಮಿಯ ಅಧ್ಯಕ್ಷರನ್ನೊಳಗೊಂಡ ಆಯ್ಕೆ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಆಯ್ಕೆ ಸಮಿತಿ ಸಭೆ ಸೇರಲೇಬೇಕು. ಅರ್ಜಿ ಸಲ್ಲಿಕೆಯಾದ ನಾಲ್ಕೈದು ತಿಂಗಳೊಳಗೆ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂಬುದು ಈಗ ತಂದಿರುವ ತಿದ್ದುಪಡಿ. ಜತೆಗೆ ವಾರ್ಷಿಕ ಫ‌ಲಾನುಭವಿಗಳ ಆಯ್ಕೆಗೆ ಇದ್ದ ಮಿತಿಯನ್ನು 500ರಿಂದ 1,000ಕ್ಕೆ ಹೆಚ್ಚಿಸಲಾಗಿದೆ. ಆದಾಯ ಮಿತಿಯನ್ನು 50 ಸಾವಿರ ರೂ.ಗಳಿಂದ 1ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಶೀಘ್ರ ಪಾವತಿ
ಖಜಾನೆಯ ಮೂಲಕ ಹಣ ಪಾವತಿಯಾಗುವುದರಿಂದ ಪ್ರತೀ ತಿಂಗಳು ಹಣ ಫಲಾನುಭವಿಗಳ ಕೈಸೇರುವಾಗ ವಿಳಂಬವಾಗುತ್ತಿದೆ. ಇಲಾಖೆಯ ಜಿಲ್ಲಾ ಮಟ್ಟದ ಕಚೇರಿಗಳ ಮೂಲಕ ಫಲಾನುಭವಿಯ ಖಾತೆಗೆ ಪಾವತಿಸುವ ವ್ಯವಸ್ಥೆ ಜಾರಿಯಾಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ 14 ಅಕಾಡೆಮಿಗಳ ವ್ಯಾಪ್ತಿಯ ಕಲಾವಿದರಿಗೆ ಮಾಸಾಶನ ನೀಡಲಾಗುತ್ತದೆ. ಆದರೆ ಆಯ್ಕೆ ಸಂದರ್ಭ ಯಕ್ಷಗಾನ ಸೇರಿದಂತೆ ಕೆಲವು ಅಕಾಡೆಮಿ ವ್ಯಾಪ್ತಿಯ ಕಲಾವಿದರಿಗೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈ ತಾರತಮ್ಯ ದೂರಮಾಡುವ ನಿಟ್ಟಿನಲ್ಲಿ ಪ್ರತಿಯೊಂದು ಅಕಾಡೆಮಿಗೆ ನಿರ್ದಿಷ್ಟ ಸಂಖ್ಯೆಯ ಮಾಸಾಶನ ಮೀಸಲಿಡಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಇಲಾಖೆಗೆ ಮನವಿ ಮಾಡಿದ್ದು ಇದು ಪರಿಶೀಲನೆಯಲ್ಲಿದೆ.

Advertisement

ನಿಯಮ ಪರಿಷ್ಕರಣೆಯಿಂದಾಗಿ ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳೊಳಗೆ ಫಲಾನುಭವಿಗಳ ಆಯ್ಕೆ ಪೂರ್ಣಗೊಳ್ಳಲಿದೆ ಹಾಗೂ ಫಲಾನುಭವಿಗಳ ಮಿತಿ ಏರಿಕೆಯಿಂದಲೂ ಸಾಕಷ್ಟು ಲಾಭವಾಗಲಿದೆ.
– ಎಸ್‌. ರಂಗಪ್ಪ, ರಾಜ್ಯ ನಿರ್ದೇಶಕರು,  ಕ.ಸಂ. ಇಲಾಖೆ ಬೆಂಗಳೂರು

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next