Advertisement

ಚೆಕ್‌ಗಳಿಗೆ ಸಹಿ; ನಿಯಮ ಉಲ್ಲಂಘನೆ?

11:59 AM Jun 09, 2018 | |

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ರಚನೆಯಾಗಿ ವರ್ಷ ಕಳೆದರೂ ಹಣಕಾಸು ಅಧಿಕಾರಿಯನ್ನು ಉನ್ನತ ಶಿಕ್ಷಣ ಇಲಾಖೆ ನೇಮಕ ಮಾಡದ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಚೆಕ್‌ಗಳಿಗೆ ಸ್ವತಃ ಕುಲಪತಿಯೇ ಸಹಿ ಹಾಕುತ್ತಿದ್ದಾರೆ. ಇದು ವಿವಿ ನಿಯಮಗಳ ಉಲ್ಲಂಘನೆಯಾಗಿದೆ. 

Advertisement

“ಕರ್ನಾಟಕ ವಿಶ್ವವಿದ್ಯಾಲಯ ನಿಯಮ-2000′ ಪ್ರಕಾರ ಕುಲಪತಿಗಳು ನೇರವಾಗಿ ಹಣಕಾಸು ಬಿಡುಗಡೆಗೆ ಸಂಬಂಧಿಸಿದ ಚೆಕ್‌ಗಳಿಗೆ ಸಹಿ ಹಾಕುವಂತಿಲ್ಲ. ಆದರೆ, ಬೆಂಗಳೂರು ಕೇಂದ್ರ ವಿವಿಯಲ್ಲಿ ಕುಲಪತಿಗಳೇ ಚೆಕ್‌ಗಳಿಗೆ ಸಹಿ ಹಾಕುತ್ತಿದ್ದು, ಇದನ್ನು ಸ್ವತಃ ಕುಲಪತಿ ಪ್ರೊ.ಎಸ್‌. ಜಾಫೆಟ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡರು. 

“ವರ್ಷದ ಹಿಂದೆಯೇ ವಿತ್ತ ಅಧಿಕಾರಿ ನೇಮಕ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಸದ್ಯ ನಾನೇ ಚೆಕ್‌ಗಳಿಗೆ ಸಹಿ ಹಾಕುತ್ತಿದ್ದೇನೆ. ಈ ಬಗ್ಗೆ ಹೆಚ್ಚಿನ ವಿಷಯ ಗೊತ್ತಿಲ್ಲ. ಅಧಿಕಾರಿ ನೇಮಕ ಮಾಡಿದರೆ, ನಾನು ಸಹಿ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಆದರೆ, ಇಂತಹದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಿವಿಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. 

ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಮೌಲ್ಯಮಾಪನ ಕೇಂದ್ರಕ್ಕಾಗಿ ಕೇಂದ್ರ ವಿವಿ ಮತ್ತು ಮೂಲ ವಿವಿ ನಡುವಿನ ಹಗ್ಗಜಗ್ಗಾಟದ ಬಗ್ಗೆ ಕೇಳಿದಾಗ, ಈ ಸಂಬಂಧ ಮೂಲ ವಿವಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಕಟ್ಟಡ ಬಿಟ್ಟುಕೊಡುವುದಾಗಿ ಬೆಂಗಳೂರು ವಿವಿ ಹೇಳಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next