ಚೆನ್ನೈ : ಸರಕಾರ ರಚಿಸಲು ಅವಕಾಶ ಕೋರಿ ತಮ್ಮ ಬೆಂಬಲಕ್ಕಿರುವ ಶಾಸಕರ ಸಹಿಯುಳ್ಳ ಪಟ್ಟಿಯನ್ನು ಎಐಎಡಿಎಂಕೆ ಪ್ರಧಾನಿ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸಲ್ಲಿಸಿದ್ದು ಈ ಸಹಿಗಳ ಅಧಿಕೃತತೆಯನ್ನು ಪರಿಶೀಲಿಸಬೇಕಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ನಿನ್ನೆ ಗುರುವಾರ ಭೇಟಿಯಾಗಿದ್ದ ಶಶಿಕಲಾ “ನಾನು ಸರಕಾರ ರಚಿಸುವೆ’ ಎಂದು ಇಂಗ್ಲಿಷ್‌ನಲ್ಲಿ ಹೇಳಿದ್ದರು. ಶಶಿಕಲಾ ಅವರೊಂದಿಗೆ 10 ಮಂದಿ ತಮಿಳುನಾಡು ಸಚಿವರು ಇದ್ದು ರಾಜ್ಯಪಾಲರೊಂದಿಗೆ ಸುಮಾರು 30 ನಿಮಿಷ ಕಾಲ ಇವರು ಮಾತುಕತೆ ನಡೆಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ರಾಜ್ಯಪಾಲರೊಂದಿಗಿನ ಸಭೆಯ ವಿವರಗಳನ್ನು ಸಚಿವರೊಬ್ಬರು ನೀಡಿರುವುದಾಗಿ ಎನ್‌ಡಿಟಿವಿ ಹೇಳಿದೆ.
ಶಶಿಕಲಾ ಅವರನ್ನು ಭೇಟಿಯಾಗುವುದಕ್ಕೆ ಮುನ್ನ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಮುಖ್ಯಮಂತ್ರಿ ಪನ್ನೀರ ಸೆಲ್ವಂ ಅವರನ್ನು ಭೇಟಿಯಾಗಿದ್ದರು. ಪಕ್ಷದೊಳಗೆ ತನಗಿರುವ ಬೆಂಬಲವನ್ನು ಸಾಬೀತು ಪಡಿಸಲು ತನಗೆ ಐದು ದಿನಗಳ ಕಾಲಾವಕಾಶ ನೀಡಬೇಕೆಂದು ಪನ್ನೀರ ಸೆಲ್ವಂ ಕೋರಿರುವುದಾಗಿ ರಾಜ್ಯಪಾಲರು ಶಶಿಕಲಾಗೆ ತಿಳಿಸಿದ್ದಾರೆ.
ಈ ನಡುವೆ ಡಿಎಂಕೆ ಪಕ್ಷವು ಆಳುವ ಎಐಡಿಎಂಕೆ ಸರಕಾರಕ್ಕೆ ನಿಶ್ಶರ್ತ ಬೆಂಬಲವನ್ನು ಕೊಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದೆ.
ಒಟ್ಟಾರೆಯಾಗಿ ಈಗ ತಮಿಳು ನಾಡಿನ ರಾಜಕೀಯ ಅಸ್ಥಿರತೆಯನ್ನು ನಿವಾರಿಸುವ ಮಂತ್ರದಂಡ ರಾಜ್ಯಪಾಲರ ಕೈಯಲ್ಲಿದ್ದು ಎಲ್ಲರ ದೃಷ್ಟಿ ರಾಜ್ಯಪಾಲರ ಚಾಣಾಕ್ಷ ನಡೆಯ ಮೇಲೆ ನಿಂತಿದೆ ಎನ್ನಲಾಗಿದೆ.