Advertisement

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಕೈ ಜೋಡಿಸಿ

08:44 PM Jan 13, 2020 | Lakshmi GovindaRaj |

ತಿಪಟೂರು: ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಯುವಕರು ಕೈಜೋಡಿಸಬೇಕಿದ್ದು, ಯುವಕರಿಂದಲೇ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ಇಲಾಖೆಯೊಂದಿಗೆ ಕೈಜೋಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮೋಟಾರು ವಾಹನ ನಿರೀಕ್ಷಕ ಟಿ.ಎಸ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದರು. ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಆವರಣದಲ್ಲಿ ಸೋಮವಾರ 31ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ವಾಹನ ಚಲಾಯಿಸುವಾಗ ಮೊಬೈಲ್‌ ಬಳಸುವುದಿಲ್ಲವೆಂಬ ದೃಢ ನಿರ್ಧಾರದ ಪ್ರತಿಜ್ಞೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Advertisement

ಜಾಗೃತಿ ಮೂಡಿಸಿ: ಇಲಾಖೆಯಿಂದ 31 ವರ್ಷದಿಂದ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಇದು ರಾಷ್ಟ್ರೀಯ ನೀತಿಯಾಗಿದ್ದು, ಈ ನೀತಿಯ ಪ್ರಕಾರ ಯುವಕರಿಂದಲೇ ಬದಲಾವಣೆ ಸಾಧ್ಯ. ಇಲಾಖೆ ಜೊತೆಗೆ ಕೈ ಜೋಡಿಸಿ ಜಾಗೃತಿ ಮೂಡಿಸಿದರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು. ರಸ್ತೆ ಕಾಮಗಾರಿ ನಡೆಯುತ್ತಿರುವಾಗ ಸೂಚನಾ ಫ‌ಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಲಿದೆ. ನೈಸರ್ಗಿಕ ತೊಂದರೆಯಾದ ಮಳೆ ಬಂದಾಗ, ಮಂಜು ಕವಿದಾಗ, ಹೊಗೆ ಹೆಚ್ಚಾದಾಗ ವಾಹನ ಅಪಘಾತಗಳು ಸಂಭವಿಸುತ್ತವೆ. ಇದಕ್ಕೆ ವಾಹನ ಸವಾರರು, ಚಾಲಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೆಲವು ಬಾರಿ ನಾವೇ ಅಪಘಾತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.

ಮೊಬೈಲ್‌ ಬಳಸಬೇಡಿ: ವಾಹನ ಚಲಾಯಿಸುವಾಗ ಬೇರೆಕಡೆ ಗಮನಹರಿಸುವುದು ಸರಿಯಲ್ಲ. ಸರಕು ಸಾಗಾಣೆ ಬೈಕ್‌ನಲ್ಲಿ ಸಾಗಿಸುವುದರಿಂದ ಹಾಗೂ ಮೊಬೈಲ್‌ ಬಳಕೆಯಿಂದ ಹೆಚ್ಚು ಅಪಘಾತಗಳಾಗುತ್ತವೆ. ಮದ್ಯ ಸೇವಿಸಿ ಚಲಾಯಿಸುವುದು ಕಾನೂನು ಪ್ರಕಾರ ತಪ್ಪು, ವಾಹನದ ಗುಣಮಟ್ಟ ತಿಳಿಯದೆ ಅದರ ವೇಗ ಅರಿಯದೆ ಅತೀ ವೇಗವಾಗಿ ವಾಹನ ಚಲಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು. ಯುವ ಸಮುದಾಯ ಇಲಾಖೆಯೊಂದಿಗೆ ಕೈಜೋಡಿಸಿ ಇದರ ಬಗ್ಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಪ್ರಜ್ಞಾವಂತರಾಗೋಣ: ಸಹಾಯಕ ಸಾರಿಗೆ ಅಧಿಕಾರಿ ಎಚ್‌. ಹನುಮಂತರಾಯಪ್ಪ ಮಾತನಾಡಿ, ವಾಹನ ಸವಾರರಿಗೆ ಅಪಘಾತ ತಡೆಗಟ್ಟಲು ಹಾಗೂ ವೇಗದ ಮಿತಿ ಅನುಸರಿಸುವ ಬಗ್ಗೆ ಅರಿವು ಅಗತ್ಯವಾಗಿದ್ದು, ಸವಾರರು ವಾಹನ ಚಲಾವಣೆ ಮಾಡುವಾಗ ಯಾವುದೇ ಸಂದರ್ಭದಲ್ಲಿ ಅಪಘಾತವಾದಾಗ ಪ್ರಜ್ಞೆ ತಪ್ಪುವ ಬದಲು ಮೊದಲೇ ಪ್ರಜ್ಞಾವಂತರಾಗಬೇಕು. ಶಾಲಾ, ಕಾಲೇಜು ಬಳಿಯಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ಇಲಾಖೆ ಸಿಬ್ಬಂದಿ ನೇಮಕ ಮಾಡಿ ಎಚ್ಚರಿಸಲಾಗುತ್ತಿದೆ.

ಕೆಲವು ವಾಹನಗಳನ್ನು ಅಪ್ರಾಪ್ತರು ಕಾನೂನು ಉಲ್ಲಂಘಿಸಿ ಚಾಲನೆ ಮಾಡಿದರೆ ರಸ್ತೆ ಸುರಕ್ಷತಾ ನಿಯಮದ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ನಿಮ್ಮ ಸ್ವಾರ್ಥ ಮೋಜಿಗಾಗಿ ಅಮಾಯಕರನ್ನು ಬಲಿ ಪಡೆಯುತ್ತಿದ್ದು, ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು. ಕಚೇರಿ ಅಧೀಕ್ಷಕ ವೀರಗಂಗಾಧರಸ್ವಾಮಿ, ಕಚೇರಿ ಸಹಾಯಕ ಎಚ್‌.ಎಸ್‌.ಚೇತನ್‌, ಸಿಬ್ಬಂದಿ ದಿಲೀಪ್‌, ಭದ್ರೇಶ್‌ ಮತ್ತಿತರರಿದ್ದರು.

Advertisement

ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವಾರು ಕಾರ್ಯಕ್ರಮ ರೂಪಿಸಿದೆ. ಇವುಗಳನ್ನು ಪಾಲಿಸದೇ ಅಪಘಾತ ಸಂಖ್ಯೆಯಲ್ಲಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ವಿಷಾದನೀಯ. ದಂಡ ವಿಧಿಸುವುದು ಲಾಭಕ್ಕಾಗಿ ಅಲ್ಲ, ಕಾನೂನು ಉಲ್ಲಂಘನೆ ಮಾಡದೇ ಅಪಘಾತಗಳ ಬಗ್ಗೆ ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕೆಂಬ ಉದ್ದೇಶ. ಲೈಸೆನ್ಸ್‌ ಪಡೆಯುವುದು ಪದವಿ ಪಡೆದಂತೆ ಇದಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರಬೇಕು.
-ಡಾ.ಸುರೇಶ್‌, ಸಾರ್ವಜನಿಕ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next