Advertisement

ನಿರ್ವಹಣೆ ಕಾಣದ ಸಿಗೇಹಳ್ಳಿ ತ್ಯಾಜ್ಯ ಘಟಕ

01:07 AM Sep 18, 2019 | Lakshmi GovindaRaju |

ಬೆಂಗಳೂರು: ಹಸಿತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯು 2015ರಲ್ಲಿ ನಿರ್ಮಾಣ ಮಾಡಿರುವ ಸಿಗೇಹಳ್ಳಿಯ ಹಸಿತ್ಯಾಜ್ಯ ಸಂಸ್ಕರಣಾ ಘಟಕವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಘಟಕಕ್ಕೆ ನಿತ್ಯ 90ರಿಂದ 100 ಟನ್‌ ಹಸಿತ್ಯಾಜ್ಯ ಬರುತ್ತಿದ್ದು, ನಿರ್ವಹಣೆಗೆಂದೇ ಪ್ರತಿ ತಿಂಗಳು 14 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದ್ದು, ವರ್ಷಕ್ಕೆ 1.68 ಕೋಟಿ ರೂ. ಮೀಸಲಿಡಲಾಗಿದೆ.

Advertisement

ಈ ಪ್ರಮಾಣದ ಭಾರಿ ಮೊತ್ತವನ್ನು ವ್ಯಯಿಸುತ್ತಿದ್ದರೂ, ಘಟಕವನ್ನು ಸ್ವಚ್ಛವಾಗಿ ನಿರ್ವಹಣೆ ಮಾಡುವಲ್ಲಿ ಗುತ್ತಿಗೆದಾರರು ಹಾಗೂ ಬಿಬಿಎಂಪಿಯ ಅಧಿಕಾರಿಗಳು ವಿಫ‌ಲವಾಗಿದ್ದಾರೆ. ಇದರೊಂದಿಗೆ ಗುತ್ತಿಗೆದಾರರು ಪೌರಕಾರ್ಮಿಕರಿಗೆ ಕಡಿಮೆ ವೇತನ ನೀಡುತ್ತಿರುವ, ನಿರ್ವಹಣೆಯಲ್ಲಿ ಲೋಪವೆಸಗುತ್ತಿರುವ ಆರೋಪವೂ ಇದೆ. ಹೀಗಾಗಿ, ಬಿಬಿಎಂಪಿಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಹಸಿ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆಯಲ್ಲಾಗಿರುವ ಲೋಪವನ್ನು ಸರಿಪಡಿಸಬೇಕಿದೆ.

ಎಲ್ಲೆಲ್ಲಿಂದ ತ್ಯಾಜ್ಯ: ಸಿಗೇಹಳ್ಳಿಯ ಹಸಿತ್ಯಾಜ್ಯ ಸಂಸ್ಕರಣಾ ಘಟಕವು 200ಟನ್‌ ತ್ಯಾಜ್ಯ ಸಂಸ್ಕರಣೆ ಮಾಡುವ ಸಾರ್ಮಥ್ಯ ಹೊಂದಿದೆ. ಈ ಘಟಕಕ್ಕೆ ಉಳ್ಳಾಳ, ದೊಡ್ಡಬಿದರೆಕಲ್ಲು, ಕೊಟ್ಟಿಗೆಪಾಳ್ಯ, ಹೆರೋಹಳ್ಳಿ, ಯಶವಂತಪುರ, ಆರ್‌ಆರ್‌ ನಗರ, ಜೆಪಿ ಪಾರ್ಕ್‌, ಕೆಂಗೇರಿ, ಎಚ್‌ಎಂಟಿ ಲೇಔಟ್‌, ಮಾಲ್ಗಾಳ, ಲಕ್ಷ್ಮೀದೇವಿ ನಗರ, ಎಂ.ಕೆ.ಪುರ ಪ್ರದೇಶಗಳಿಂದ ನಿತ್ಯ 10ರಿಂದ 15 ಟನ್‌ ಹಸಿ ತ್ಯಾಜ್ಯ ಘಟಕ್ಕೆ ಬರುತ್ತಿದೆ.

ಅನುಪಯುಕ್ತ ತ್ಯಾಜ್ಯ ವಿಲೇವಾರಿ ಕಗ್ಗಂಟು: ಸಿಗೇಹಳ್ಳಿ ಹಸಿತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬರುವ ತ್ಯಾಜ್ಯದಲ್ಲಿ ಪ್ರತಿಟನ್‌ಗೆ ಶೇ.20 ಗೊಬ್ಬರ ಉತ್ಪತ್ತಿಯಾಗುತ್ತಿದ್ದು, ಉಳಿದ ಶೇ.80 ಪ್ರಮಾಣದ ಹಸಿತ್ಯಾಜ್ಯವು ಅನುಪಯುಕ್ತ ತ್ಯಾಜ್ಯವಾಗುತ್ತಿದ್ದು, ಇದನ್ನು ವಿಸರ್ಜನೆ ಮಾಡಲಾಗುತ್ತಿದೆ.  ಘಟಕದಲ್ಲಿ ಇಲ್ಲಿಯವರೆಗೆ ಅಂದಾಜು 30ರಿಂದ 40 ಸಾವಿರ ಟನ್‌ನಷ್ಟು ಅನುಪಯುಕ್ತ ತ್ಯಾಜ್ಯ ಸಂಗ್ರಹವಾಗಿದ್ದು, ಈ ತ್ಯಾಜ್ಯವನ್ನು ಸಿಗೇಹಳ್ಳಿಯ ಘಟಕದ ಮುಂಭಾಗದಲ್ಲೇ ಸುರಿಯುತ್ತಿದ್ದಾರೆ.

ಅನುಪಯುಕ್ತ ತ್ಯಾಜ್ಯವನ್ನು ಇಲ್ಲಿಂದ ತೆರವು ಮಾಡುವ ಕೆಲಸ ಆಗುತ್ತಿಲ್ಲ. ಇದರಿಂದ ಘಟಕದ ಸುತ್ತಮುತ್ತಲಿನ ಸ್ಥಳೀಯರೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅನುಪಯುಕ್ತ ತ್ಯಾಜ್ಯಕ್ಕೆ ಮಳೆ ನೀರೂ ಸೇರಿ ಘಟಕದ ಸುತ್ತಲಿನ ವಾತಾವರಣ ಕಲುಷಿತವಾಗುತ್ತಿದೆ.

Advertisement

“ಸಿಗೇಹಳ್ಳಿಯ ಹಸಿ ತ್ಯಾಜ್ಯ ಸಂಸ್ಕರಣಾ ಘಟಕದ ಅನುಪಯುಕ್ತ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್‌)ಗೆ ಟೆಂಡರ್‌ ಪ್ರಕ್ರಿಯೆಯಾಗಿದೆ. ಆದರೆ, ಈ ಪ್ರಕ್ರಿಯೆಯನ್ನು ಪ್ರಾರಂಭಿಸುವುದಕ್ಕೆ ಇನ್ನು ಕಾರ್ಯಾದೇಶವಾಗಿಲ್ಲ. ಹೀಗಾಗಿ,ಇದನ್ನು ತೆರವು ಮಾಡಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ಲಾಂಟ್‌ನಲ್ಲಿ ಸೂಕ್ತ ನಿವರ್ಹಹಣೆಯ ಕೊರತೆ: ಘಟಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಯಾವುದೇ ಸುರಕ್ಷತಾ ಕವಚ ನೀಡದೆ ಕೆಲಸ ಮಾಡಿಸಲಾಗುತ್ತಿದೆ. ಸಮವಸ್ತ್ರ, ಗ್ಲೌಸ್‌, ಶೂ ಹಾಗೂ ಇವರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಮಾಸ್ಕ್ಗಳನ್ನೂ ನೀಡಿಲ್ಲ. ಇದರಿಂದ ಘಟಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಅದೇ ರೀತಿ ಘಟಕದಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿಯೂ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಘಟಕದಲ್ಲಿ ಅವಘಡ ಸಂಭವಿಸಿದರೆ ಅದನ್ನು ತಡೆಯುವ ಸಾಧನಗಳನ್ನೂ ಇಲ್ಲಿ ಅಳವಡಿಸಿಲ್ಲ.

ದುಸ್ಥಿಯಲ್ಲಿ ವಿಶ್ರಾಂತಿಗೃಹ, ಶೌಚಾಲಯ: ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನಿರ್ಮಾಣ ಮಾಡಿರುವ ಶೌಚಾಲಯ ಹಾಗೂ ವಿಶ್ರಾಂತಿ ಗೃಹವೂ ಗಲೀಜಿನಿಂದ ಕೂಡಿದೆ. ಇಲ್ಲಿನ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಇದನ್ನು ಕೂಡಲೇ ಸರಿಪಡಿಸಬೇಕಿದೆ.

ಘಟಕದ ಅನುಪಯುಕ್ತ ತ್ಯಾಜ್ಯವನ್ನು ರೈತರಿಗೆ ಗೊಬ್ಬರವಾಗಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಲ್ಲಿನ ಅನುಪಯುಕ್ತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮುಚ್ಚಿ, ಬೆಳ್ಳಳ್ಳಿ ಮಾದರಿಯಲ್ಲಿ ಇದನ್ನು ಉದ್ಯಾನವನ್ನಾಗಿ ಬದಲಾಯಿಸುವ ಚಿಂತನೆ ಇದೆ.
-ಮಧುಕುಮಾರ್‌, ಸಿಗೇಹಳ್ಳಿ ತ್ಯಾಜ್ಯ ಘಟಕದ ಉಸ್ತುವಾರಿ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next