ಪಡುಬಿದ್ರಿ: ಹೆದ್ದಾರಿ ಬದಿ ಸರ್ವಿಸ್ ರಸ್ತೆ ಕಾಮಗಾರಿಯ ವಿಳಂಬ, ಹೆದ್ದಾರಿಯಲ್ಲಿನ ವಿದ್ಯುದ್ದೀಪಗಳು ಉರಿಯದಿರುವುದರ ವಿರುದ್ಧ ಮಂಗಳವಾರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ನವಯುಗ ಕಚೇರಿಗೆ ತೆರಳಿ ಪ್ರತಿಭಟಿಸಿದರು.
ಕಂಪೆನಿಯು ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದು ನವಯುಗ ನಿರ್ಮಾಣ ಕಂಪೆನಿಯ ಪಡುಬಿದ್ರಿಯ ಕಚೇರಿಗೆ ಪಡುಬಿದ್ರಿ ಗ್ರಾ. ಪಂ. ನೇತೃತ್ವದಲ್ಲಿ ಜ. 25ರಂದು ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷೆ ಯಶೋದಾ ಹಾಗೂ ಸದಸ್ಯರು ಬೀಗ ಜಡಿದು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು.
ಕಾಮಗಾರಿಯ ತ್ವರಿತತೆಗೆ ಸತತ 3-4 ಬಾರಿ ಮನವಿ ಮಾಡಲಾಗಿತ್ತು. ಆದರೂ ಯಾವುದೇ ಪ್ರಗತಿಯಾಗಿಲ್ಲವೆಂದು ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ ತಿಳಿಸಿದರು. ಪಂಚಾಯತ್ ಸಭೆಗೆ ಹಾಜರಾಗಲು ಹಲವು ಬಾರಿ ಹೇಳಲಾಗಿತ್ತು. ಎಲ್ಲಾ ಮೌಖಿಕ ಲಿಖಿತ ಮನವಿಗಳನ್ನು ಕಂಪೆನಿಯು ನಿರ್ಲಕ್ಷಿಸಿದೆ. ಸರ್ವೀಸ್ ರಸ್ತೆ ನಿರ್ಮಾಣವಾಗದೇ ಬಸ್ಸುಗಳನ್ನು ಆಯಾಯ ಸರ್ವೀಸ್ ರಸ್ತೆಗೆ ಕಳುಹಿಸಲು ಅಡೆತಡೆ ಉಂಟಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಹಿಂದಿನ ಮನವಿಗಳ ಹೊರತಾಗಿಯೂ ಪಡುಬಿದ್ರಿಯನ್ನು ನಿರ್ಲಕ್ಷಿಸಿರುವ ನವಯುಗ ಕಂಪೆನಿಯ ಕಚೇರಿಗೆ ಕೊನೆಗೂ ಬೀಗ ಜಡಿದು ಪಂಚಾಯತ್ ಸದಸ್ಯರು ವಾಪಾಸಾಗಿದ್ದಾರೆ.