Advertisement

ಸಿದ್ದು ತಿಣುಕಾಡಿ ಗೆದ್ರು, ನಾನೇಗೆ ಗೆಲ್ತೇನೆ ನೋಡ್ತಿರಿ

12:36 PM Apr 08, 2017 | Team Udayavani |

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ತಿಣುಕಾಡಿ 256 ಮತಗಳ ಅಂತರದಿಂದ ಗೆದ್ದಿದ್ರಿ, ತಾನು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು 13ನೇ ತಾರೀಖು ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಸವಾಲು ಹಾಕಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ತಾನು ಮಂತ್ರಿಮಂಡಲದಿಂದ ಕೈಬಿಟ್ಟಿದ್ದಕ್ಕೆ ರಾಜೀನಾಮೆ ಕೊಡಲಿಲ್ಲ. ಕೇಂದ್ರ-ರಾಜ್ಯದಲ್ಲಿ ಮಂತ್ರಿಯಾದಾಗ ಯಾರ ಮನೆಬಾಗಿಲೂ ಕಾದಿರಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದೆ. ನಂಜನಗೂಡು ಉಪ ಚುನಾವಣೆ ಸ್ವಾಭಿಮಾನ ಮತ್ತು ಷಡ್ಯಂತ್ರ, ದುರಹಂಕಾರದ ನಡುವಿನ ಸಂಘರ್ಷ ಎಂದು ಹೇಳಿದರು.

ತಾನು ನಂಜನಗೂಡಿನ ಮನೆ ಮಗ. ಇದಕ್ಕೆ ಪ್ರಚಾರಕ್ಕೆ ಹೋಗುತ್ತಿಲ್ಲ. ಆರೋಗ್ಯ ಸರಿಯಿಲ್ಲ ಎನ್ನುವವರು ಅರ್ಥ ಮಾಡಿಕೊಳ್ಳಬೇಕು. ಕೇರಳ, ಮಾಲ್ಡೀವ್ಸ್‌ಗೆ ಹೋಗಿ ಮಸಾಜ್‌ ಮಾಡಿಸಿಕೊಂಡು ಬರುತ್ತೀರಾ ನೀವು, ತಾನು ಹೋರಾಟದಿಂದ ಬಂದವನು ದೈಹಿಕವಾಗಿ ಬಳಲಿದ್ದೇನೆ. ಆದರೆ, ಮಾನಸಿಕವಾಗಿ ನಿಮಗಿಂತ ನೂರರಷ್ಟು ಸದೃಢನಾಗಿದ್ದೇನೆ ಎಂದು ತಿರುಗೇಟು ನೀಡಿದರು.

80 ಲಕ್ಷದ ವಾಚ್‌ ಕಟ್ಟುವ ಮುಖ್ಯಮಂತ್ರಿ, ನಾಲ್ಕು ವರ್ಷದ ಕೆಲಸಕ್ಕೆ ಕೂಲಿ ಕೊಡಿ ಎಂದು ನಂಜನಗೂಡಿನ ಗಲ್ಲಿ ಗಲ್ಲಿ ಸುತ್ತುತ್ತಾರೆ. ನಂಜನಗೂಡಲ್ಲಿ ಬಿಜೆಪಿಯ ಭೂಕಂಪನ ಆಗಿದೆ. ಅದಕ್ಕಾಗಿ ಸಿದ್ದರಾಮಯ್ಯ ಮಂತ್ರಿಮಂಡಲದ ಹಾವು-ಚೇಳುಗಳೆಲ್ಲ ಈಚೆ ಬಂದಿವೆ. ಇಂತಹ ದುರಹಂಕಾರಿಗೆ ಪಾಠ ಕಲಿಸುವ ಶಕ್ತಿ ಜನರ ಕೈಯಲ್ಲಿದೆ ಎಂದರು.

1996ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದಾಗ ಪಕ್ಷೇತರನಾಗಿ ನಿಂತು 1.60 ಲಕ್ಷ ಮತಗಳಿಂದ ಆರಿಸಿ ಬಂದೆ, 1952ರಿಂದ ಕಾಂಗ್ರೆಸ್‌ ಗೆದ್ದಿದ್ದ ಚಾಮರಾಜ ನಗರ ಕ್ಷೇತ್ರವನ್ನು ಕಾಂಗ್ರೆಸ್‌ ಕಳೆದುಕೊಳ್ಳಬೇಕಾಯಿತು ಎಂದು ಟೀಕಿಸಿದರು.

Advertisement

ಜೂನ್‌ ತಿಂಗಳಿಂದ ಕೇಳುತ್ತಿದ್ದೇನೆ, ಆದರೆ, ಮಂತ್ರಿಮಂಡಲ ಪುನಾರಚನೆ ಮಾಡಿದ ಬಗ್ಗೆ ಮುಖ್ಯಮಂತ್ರಿ ಸಮರ್ಥನೆಯನ್ನೇ ಮಾಡಿಕೊಳ್ಳುತ್ತಿಲ್ಲ. ಕಂದಾಯ ಸಚಿವನಾಗಿ ತಾನು ಎಡವಿದ್ದರೆ, ಮಂತ್ರಿಮಂಡಲದ ನಾಯಕರಾಗಿದ್ದ ಸಿದ್ದರಾಮಯ್ಯ, ಕರೆದು ಚರ್ಚೆ ಮಾಡಬಹುದಿತ್ತಲ್ಲ ಎಂದ ಅವರು, ಕಂದಾಯ ಸಚಿವನಾಗಿ ಇಲಾಖೆಗೆ ಕಾಯಕಲ್ಪ ನೀಡಿದ್ದೇನೆ.

ಜಗದೀಶ್‌ ಶೆಟ್ಟರ್‌ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದರಿಂದ ಅದರ ಕ್ರೆಡಿಟ್‌ ಬಿಜೆಪಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ತಾಲೂಕು ರಚನೆ ಸಂಬಂಧ ಐದನೇ ಸಮಿತಿ ರಚನೆ ಮಾಡೋಣ ಎಂದವರು, ಈಗ ಹೊಸ ತಾಲೂಕು ಘೋಷಣೆ ಮಾಡಿದ್ದೀರಾ ರಚನೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಶ್ವತ್ಥ್ನಾರಾಯಣ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್‌.ಮೋಹನ್‌ ಕುಮಾರ್‌, ಬಿಜೆಪಿ ಮುಖಂಡ ಎಲ್‌.ನಾಗೇಂದ್ರ, ಹೇಮಂತಕುಮಾರ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next