ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸರ್ಕಾರದ ಜೊತೆ ಸಂಚು ಮಾಡಿಕೊಂಡಿದ್ದು, ಪ್ರತಿಪಕ್ಷಗಳ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ. ಅವರ ನಡವಳಿಕೆಯಿಂದ ಸಂವಿಧಾನ ಹಾಗೂ ಸದನಕ್ಕೂ ಚ್ಯುತಿಯಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮ್ಯಯ ಆರೋಪಿಸಿದ್ದಾರೆ.
ದೊರೆಸ್ವಾಮಿ ವಿರುದ್ಧ ಯತ್ನಾಳ್ ನೀಡಿರುವ ಹೇಳಿಕೆ ವಿರುದ್ಧ ಚರ್ಚೆಗೆ ಅವಕಾಶ ನೀಡುವಂತೆ ನಿಯಮದ ಪ್ರಕಾರ ಮನವಿ ಮಾಡಿದರೂ ಚರ್ಚೆಗೆ ಅವಕಾಶ ನೀಡದೆ ತಳ್ಳಿ ಹಾಕಿದ್ದಾರೆ. ಯತ್ನಾಳ್ ನೀಡಿರುವ ಹೇಳಿಕೆಗಳ ಎಲ್ಲ ದಾಖಲೆಗಳನ್ನು ಸ್ಪೀಕರ್‌ಗೆ ನೀಡಿದ್ದೇವೆ. ಮೊದಲು ನಮ್ಮ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ, ಈಗ ಸರ್ಕಾರದ ಮಾತು ಕೇಳಿ ಚರ್ಚೆಗೆ ಅವಕಾಶ ನೀಡಲಿಲ್ಲ.
ಸ್ಪೀಕರ್ ಅವರ ಈ ನಡವಳಿಕೆಯ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ. ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತೇವೆ. ಅವರ ಭೇಟಿಯ ನಂತರ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ವಿಧಾನಸಭಾ ಇತಿಹಾಸದಲ್ಲಿ ಮೊದಲ ಬಾರಿಗೆ ಸಂವಿಧಾನದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ವಿರೋಧ ಪಕ್ಷದ ನಾಯಕರು ಸೇರಿ ಯಾರಿಗೂ ಆಸಕ್ತಿ ಇಲ್ಲ. ಇವರಿಗೆ ಸಂವಿಧಾನದ ಬಗ್ಗೆ ಎಷ್ಟು ಗೌರವ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ