ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಇನ್ನಷ್ಟು ಅನುದಾನಗಳನ್ನು ತಗೆದುಕೊಂಡು ಬಂದು ಕ್ಷೇತ್ರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಸದಾಬದ್ಧನಾಗಿರುವೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಂಗಳವಾರ ಸಮೀಪದ ಆಸಂಗಿ ಗ್ರಾಮದಲ್ಲಿ ಗುಡ್ಡದ ಪ್ರದೇಶದಲ್ಲಿರುವ ಎಸ್.ಸಿ ಕಾಲೊನಿಯಲ್ಲಿ ರೂ. 2.60 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕ್ಷೇತ್ರದಲ್ಲಿಯ ನಗರ ಮತ್ತು ಗ್ರಾಮೀಣ ರಸ್ತೆ ನಿರ್ಮಾಣ, ಅಲಂಕಾರಿಕ ದೀಪಗಳ ಅಳವಡಿಕೆ, ಪ್ರಾಥಮಿಕ ಶಾಲೆಗಳಿಂದ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಡಿಪ್ಲೊಮಾ ಕಾಲೇಜುಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡಲಾಗಿದೆ. ಕ್ಷೇತ್ರದ ಪ್ರತಿಯೊಂದು ಮನೆಯಲ್ಲಿ ಕೇಂದ್ರ ಇಲ್ಲವೆ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡವರು ಇದ್ದಾರೆ. ಕ್ಷೇತ್ರದ ಪ್ರತಿಯೊಂದು ಸಮುದಾಯಗಳ ಅಭಿವೃದ್ಧಿಗಾಗಿ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗಿದೆ.
ಆಸಂಗಿ ಗ್ರಾಮದ ಎಸ್.ಸಿ. ಕಾಲೊನಿಯಲ್ಲಿ ರೂ. 33 ಲಕ್ಷ ವೆಚ್ಚದಲ್ಲಿ ಜಲಜೀವನ ಮಿಶನ್ ಯೋಜನೆ ಅಡಿಯಲ್ಲಿ ಶುದ್ಧ ಮತ್ತು ಸುರಕ್ಷತೆಯ ಕಡಿಯುವ ನೀರು ಪೂರೈಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಕೂಡಾ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಸಿದ್ದು ಸವದಿ ತಿಳಿಸಿದರು.
ವರ್ಧಮಾನ ಕೋರಿ, ಪಾಂಡುರಂಗ ಸಾಲ್ಗುಡೆ, ಮುತ್ತುರಾಜ ಶಿರಹಟ್ಟಿ, ರಾಜೇಂದ್ರ ಮಠದ, ಸಚಿನ್ ಧೂಪದಾಳ, ಪಾಂಡು ಸಾಂಗಲೀಕರ್, ಪಂಡು ಶಿರೋಳ, ಕಾಡು ಧಬಾಡಿ, ರಾಜು ಕೊಕಟನೂರ, ಶ್ರೀಶೈಲ ಸಿಂದ್ಯೆ, ಚನಗೌಡ ಕೊಕಟನೂರ, ಜಯವಂತ ದೊಡಮನಿ, ಧರ್ಮಣ್ಣ ತಮದಡ್ಡಿ, ಮಾರುತಿ ಗಾಯಕವಾಡ ಮತ್ತು ಸಂಗಮೇಶ ಗುಟ್ಲಿ ಇದ್ದರು.
ಇದನ್ನೂ ಓದಿ: ಅಮ್ಮನ ಹತ್ತಿರ ಪಾಕೇಟ್ ಮನಿ ಕೇಳುವವರಿಂದ ನಿರುದ್ಯೋಗಭತ್ಯೆ ಗ್ಯಾರಂಟಿ: ತೇಜಸ್ವಿ ಸೂರ್ಯ