ಬೆಳಗಾವಿ: ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವದಲ್ಲದೆ ಅವರು ದೇಶಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಶೂರ ಸೇನಾನಿ ಸಂಗೊಳ್ಳಿ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ರಾಜ್ಯದ 3ನೇ ಸೈನಿಕ ಶಾಲೆ ತಲೆಎತ್ತಿದೆ.
ಪ್ರಸ್ತುತ ರಾಜ್ಯದ ವಿಜಯಪುರ ಮತ್ತು ಕೊಡಗಿನಲ್ಲಿ ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈಗ ಬೆಳಗಾವಿಯೂ ಆ ಸಾಲಿಗೆ ಸೇರಿದೆ. ಈ ಮೂಲಕ ಬಡವರ ಮತ್ತು ದೇಶಸೇವೆಯ ಕನಸು ಹೊತ್ತುಕೊಂಡಿರುವ ಪ್ರತಿಭಾವಂತ ಮಕ್ಕಳಿಗೆ ಸಂಗೊಳ್ಳಿ ರಾಯಣ್ಣ ಶಾಲೆಯು ವರದಾನವಾಗಿ ಬಂದಿದೆ.
ರಾಷ್ಟ್ರೀಯ ರಕ್ಷಣ ಅಕಾಡೆಮಿಗೆ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಪಡಿಸುವುದು ಈ ಸೈನಿಕ ಶಾಲೆಯ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಹಿಂದೆ ತಾವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆ ಆರಂಭಿಸಲು ಅನುಮತಿ ನೀಡಿದ್ದಲ್ಲದೆ ಅದಕ್ಕೆ ಸರಕಾರದಿಂದ 100 ಎಕ್ರೆ ಜಮೀನು ಮತ್ತು ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಮೂಲಕ 250 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಶಂಕುಸ್ಥಾಪನೆ ಮಾಡಿದ್ದ ಸಿದ್ದರಾಮಯ್ಯ ಈಗ ತಾವೇ ಈ ಸೈನಿಕ ಶಾಲೆ ಉದ್ಘಾಟಿಸಿದ್ದು ವಿಶೇಷ.
ಶೇ.65 ಸೀಟು ರಾಜ್ಯದವರಿಗೆ
ಈ ಸೈನಿಕ ಶಾಲೆಯಲ್ಲಿ ಸದ್ಯ 85 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಶೇ.65ರಷ್ಟು ವಿದ್ಯಾರ್ಥಿಗಳಿಗೆ ಮತ್ತು ಹೊರರಾಜ್ಯಗಳ ಶೇ.35ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಚಿಂತನೆ ಇದೆ ಎಂದು ಸಿಎಂ ಹೇಳಿದ್ದಾರೆ.