ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದಾಖಲಾಗಿದ್ದ ಹ್ಯುಬ್ಲೋಟ್ ವಾಚ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ವಾಚ್ ಖರೀದಿಗೆ ಸಂಬಂಧಿಸಿದಂತೆ ಗಿರೀಶ್‌ಚಂದ್ರ ವರ್ಮಾ ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ವಕೀಲ ಹಾಗೂ ದೂರುದಾರ ನಟರಾಜ ಶರ್ಮಾ ಆರೋಪಿಸಿದ್ದು, ಎಸಿಬಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವಂತೆ ಶನಿವಾರ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ನಟರಾಜ್ ಶರ್ಮಾ, ಗಿರೀಶ್‌ಚಂದ್ರ ವರ್ಮಾ ಸಲ್ಲಿಸಿದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪರೀಶೀಲಿಸದೆ ಇವರ ಹೇಳಿಕೆಯನ್ನಾಧರಿಸಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿದೆ. ಪ್ರಕರಣ ದಾಖಲಾದ ಬಳಿಕ ಹ್ಯುಬ್ಲೋಟ್ ವಾಚ್‌ಗೆ ಅಬಕಾರಿ ಸುಂಕ ಕಟ್ಟಲಾಗಿದೆ.
ಈ ಮೂಲಕ ಎಸಿಬಿ ಅಧಿಕಾರಿಗಳಿಗೆ ನೀಡಿದ ದಾಖಲೆಗಳು ಸುಳ್ಳು ಎಂಬುದು ಪತ್ತೆಯಾಗಿದೆ. ಪ್ರಮುಖವಾಗಿ ವಾಚ್‌ನ ಬಿಲ್ ನಕಲಿ ಎಂದು ಮಾರಾಟ ಸಂಸ್ಥೆಯೇ ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ಪ್ರಕರಣದಲ್ಲಿ ಗಿರೀಶ್ ಚಂದ್ರ ವರ್ಮಾ ಅವರ ಹೇಳಿಕೆಯನ್ನು ಸರಿಯಾಗಿ ಪರಿಶೀಲಿಸಿಲ್ಲ. ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿಲ್ಲ. ಇತರೆ ಸಾಕ್ಷ್ಯಗಳ ಹೇಳಿಕೆ ಪಡೆಯದೆ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮುಕ್ತಾಯಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್‌ಟಿಐನಲ್ಲಿ ಬಹಿರಂಗ: ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಿರುವ ಕುರಿತು ತನಿಖಾ ವರದಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ ) ಅಡಿಯಲ್ಲಿ ಎಸಿಬಿಗೆ ಕೇಳಲಾಗಿತ್ತು. ಆದರೆ, ಎಸಿಬಿ ಅಧಿಕಾರಿಗಳು ಈ ವರದಿ ನೀಡಲು ನಿರಾಕರಿಸಿದ್ದರು.
ಹೀಗಾಗಿ ಹೈಕೋರ್ಟ್ ಮೊರೆ ಹೋಗಿದ್ದೆ. ಹೈಕೋರ್ಟ್ ಸೂಚನೆ ಮೇರೆಗೆ ಎಸಿಬಿ ತನಿಖಾ ವರದಿಯನ್ನು ನೀಡಿತ್ತು. ಇದನ್ನು ಪರಿಶೀಲಿಸಿದಾಗ ಡಾ ಗಿರೀಶ್‌ಚಂದ್ರ ವರ್ಮಾ ಸಲ್ಲಿಸಿರುವುದು ನಕಲಿ ಬಿಲ್ ಎಂದು ನಟರಾಜ್ ಶರ್ಮಾ ಹೇಳಿದ್ದಾರೆ.