Advertisement

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

08:07 PM Apr 30, 2024 | Shreeram Nayak |

ಶಿವಮೊಗ್ಗ:ಸಿದ್ದರಾಮಯ್ಯ ಯಾವಾಗಲೂ ಕರ್ನಾಟಕದ ಬಾಕಿ ಬಂದಿಲ್ಲ, ಬಂದಿಲ್ಲ ಎನ್ನುತ್ತಾರೆ. ಅವರು ಹೇಳಿದ್ದು ಸರಿ ಇದೆ. ಅವರಿಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ. ಬರೀ ಕಮಿಷನ್‌ ನಂಬಿಕೆ. ಹಾಗಾಗಿ ಅದು ಅವರಿಗೆ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದರು.

Advertisement

ನಗರದ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನನ್‌ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ವೃತ್ತಿಪರರ ಸಮಾವೇಶದಲ್ಲಿ ಮಾತನಾಡಿದ ಅವರು, ಯುಪಿಎ ಅವಧಿಗಿಂತ ಶೇ.275ರಷ್ಟು ಹೆಚ್ಚು ಅನುದಾನ ಎನ್‌ಡಿಎ ಅವ ಧಿಯಲ್ಲಿ ಬಂದಿದೆ. 30 ಸಾವಿರ ಕೋಟಿ ಮೂಲಸೌಕರ್ಯ ಅಭಿವೃದ್ಧಿಗೆ, 8 ಸಾವಿರ ಬೆಂಗಳೂರು-ಮೈಸೂರು ಹೈವೇಗೆ, 57 ಸಾವಿರ ಕೋಟಿ ಅನುದಾನ ಬೆಂಗಳೂರು ಸಬ್‌ ಅರ್ಬನ್‌ ರೈಲ್ವೆಗೆ ಕಾಯ್ದಿರಿಸಲಾಗಿದೆ.

ಭಾರತ್‌ ಮಾಲಾ ಯೋಜನೆಯಲ್ಲಿ 640 ಕಿಮೀ ರಸ್ತೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನೋಡಿದರೆ ಅಭಿವೃದ್ಧಿಗೆ ಹೇಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಯುತ್ತದೆ. ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ಗೆ 5 ಸಾವಿರ ಕೋಟಿ ಕೊಡಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಗೆ 14 ಸಾವಿರ ಕೋಟಿ ವಿನಿಯೋಗಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ, ಕಳಸಾ-ಬಂಡೂರಿಗೆ 1 ಸಾವಿರ ಕೋಟಿ ನೀಡಲಾಗಿದೆ ಎಂದರು.

ಒಂದು ಕಡೆ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಇದೆ. ಪ್ರತಿ ದಿನ, ವರ್ಷದಿಂದ ವರ್ಷಕ್ಕೆ ಶಕ್ತಿ ವೃದ್ಧಿಸಿಕೊಳ್ಳುತ್ತದೆ. ಆದರೆ ಒಂದು ಬೇಸರದ ವಿಚಾರವೆಂದರೆ ಇನ್ನೊಂದು ಕಡೆ ಐನ್‌ಡಿಐಎ ಒಕ್ಕೂಟ ಯಾವುದೇ ಸ್ಪಷ್ಟತೆ, ವಿಚಾರ, ಗುರಿ ಇಲ್ಲದೆ ವಿಭಜಿತ ಶಕ್ತಿಗಳಿಗೆ ತುಂಬುತ್ತಿದ್ದಾರೆ. ಅವರು ಉತ್ತರ, ದಕ್ಷಿಣ ಮಾಡಲು ಹೊರಟ್ಟಿದ್ದಾರೆ. ಆದರೆ ಮೋದಿ ಅವರು ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ ಮಾಡುತ್ತಿದ್ದಾರೆ. ಕರ್ನಾಟಕದ ಒಬ್ಬ ಎಂಪಿ ಲೋಕಸಭೆ ಮುಂದೆ ನಿಂತು ಪ್ರತ್ಯೇಕ ದಕ್ಷಿಣ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿದರು. ಅಂತವರಿಗೆ ಸಾರ್ವಜನಿಕ ಜೀವನದಲ್ಲಿ ಅವಕಾಶ ನೀಡಬೇಕೇ? ಸ್ಥಳೀಯ ವಿಚಾರಗಳಿಗೆ ನಾವು ಗೌರವ ಕೊಡುತ್ತೇವೆ. ವಿವಿಧತೆಯಲ್ಲಿ ಏಕತೆಯನ್ನು ಬೆಂಬಲಿಸುತ್ತೇವೆ ಎಂದರು.

ನಾಡಪ್ರಭು ಕೆಂಪೇಗೌಡ ಪ್ರತಿಮೆಯಿಂದ ಅವರು ವಿಚಾರಧಾರೆಗಳು ದೇಶಕ್ಕೆ ತಿಳಿದಿದೆ. ಮನ್‌ ಕೀ ಬಾತ್‌ನಲ್ಲಿ ನರೇಂದ್ರ ಮೋದಿ ಅವರು ದ.ರಾ. ಬೇಂದ್ರೆ ಕವಿತೆ ಉಲ್ಲೇಖೀಸಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಅವರ ಪರಿಚಯವಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕುವೆಂಪು ಅವರ ಕಾವ್ಯ ಉಲ್ಲೇಖೀಸಿದ್ದರು. ಇದು ಭಾರತದ ಏಕತೆಯನ್ನು ತೋರಿಸುತ್ತದೆ. ಪ್ರಧಾನಿ ಮೋದಿ ಕಳೆದ 10 ವರ್ಷಗಳ ಈಚೆಗೆ ರಾಷ್ಟ್ರವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ತಂದಿದ್ದಾರೆ ಎಂದರು.

Advertisement

ಭಾರತ ವಿಶ್ವದ ಎಲ್ಲಾ ವೇದಿಕೆಯಲ್ಲಿ ಇದೆ. ಜಿ7, ಜಿ8 ಯಾವುದೇ ಇರಬಹುದು. ನೆರೆಹೊರೆ ದೇಶದ ಜತೆಗೆ ಉತ್ತಮ ಬಾಂಧವ್ಯ. ಶ್ರೀಲಂಕಾ, ಭೂತಾನ್‌, ನೇಪಾಳ ದೇಶಗಳ ಜತೆಗೆ ಬಾಂಧವ್ಯ ಗಟ್ಟಿ ಆಗಿದೆ. ಹಿಂದೆ ಅಭ್ಯರ್ಥಿಯ ಜಾತಿ ಯಾವುದು, ಪ್ರಾದೇಶಿಕತೆ, ಇಷ್ಟ, ಕಷ್ಟಗಳು ಯಾವುದು ನೋಡುತ್ತಿದ್ದರು. ಈಗ ಅದೆಲ್ಲಾ ಹೋಗಿದೆ. ರಾಜಕೀಯ ಸಂಸ್ಕೃತಿ ಬದಲಾಗಿದೆ. ರಾಘವೇಂದ್ರ ಐದು ವರ್ಷಗಳ ಸಾಧನೆ ಮಾತನಾಡುತ್ತಾರೆ. ಉಳಿದವರು ವಿಭಜನೆ ಮಾತನಾಡುತ್ತಾರೆ. ರಷ್ಯಾ, ಚೀನಾ, ಜಪಾನ್‌ ಅಮೆರಿಕ ಎಲ್ಲೆಡೆ ಆರ್ಥಿಕ ಸಂಕಷ್ಟ ಇದೆ. ಭಾರತ ಈಗ ಬ್ರಿಟನ್‌ ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿದೆ. ಶೇ.138ರಷ್ಟು ರಫ್ತು ಹೆಚ್ಚಳ ಆಗಿದೆ. ಪೆಟ್ರೋಕೆಮಿಕಲ್‌ ಶೇ.106ರಷ್ಟು ಹೆಚ್ಚು ಆಗಿದೆ. ಆಟಿಕೆಗಳು ಚೀನಾದಿಂದ ಬರುತ್ತಿದ್ದವು. ಈಗ ಆಟಿಕೆ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದರು.

80 ಕೋಟಿ ಜನರಿಗೆ ಆಹಾರ ಪೂರೈಕೆ ಸಾಗುತ್ತಿದೆ. 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. 11 ಕೋಟಿ ರೈತರಿಗೆ ಕಿಸಾನ್‌ ಸಮ್ಮಾನ್‌ ಪಾವತಿ ಮಾಡಲಾಗುತ್ತಿದೆ. 12 ಕೋಟಿ ಶೌಚಾಲಯ, 10 ಕೋಟಿ ಉಜ್ವಲ್‌ ಯೋಜನೆ ಮೂಲಕ ಮಹಿಳಾ ಸಬಲೀಕರಣ ಮಾಡಲಾಗಿದೆ. ಯಾರಿಗಾದರೂ ಆರೋಗ್ಯ ರಕ್ಷಣೆ ಬೇಕೆಂದರೆ ಧನ ಸಹಾಯ ಮಾಡಲು ಹಿಂದೆ ಶಾಸಕ, ಸಂಸದರು ಪತ್ರ ಬರೆಯಬೇಕಿತ್ತು. ಈಗ ಆಯುಷ್ಮಾನ್‌ ಭಾರತ್‌ ಅಡಿ 70 ವರ್ಷ ದಾಟಿದವರಿಗೂ 5 ಲಕ್ಷವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದರು.

ವಿರೋಧಿಗಳಿಂದ ಫೇಕ್‌ ವಿಡಿಯೋ ಹಾವಳಿ
ಭ್ರಷ್ಟಾಚಾರಿಗಳನ್ನು ರಕ್ಷಿಸುವುದೇ ವಿರೋಧ ಪಕ್ಷಗಳ ಅಜೆಂಡಾ. ಎಲ್ಲ ಪಕ್ಷಗಳನ್ನು ಗಮಿನಿಸಿ, ಯಾವುದಾದರೂ ಪ್ರಕರಣವೊಂದರಲ್ಲಿ ಭಾಗಿಯಾಗಿರುತ್ತಾರೆ. ಯಾವ ರೀತಿ ರಾಜಕೀಯ ಮಾಡುತ್ತಾರೆ ಎಂದು ನಿಮಗೆ ಅನ್ನಿಸಬಹುದು. ಎಸ್‌ಸಿ, ಎಸ್‌ಟಿ ಮೀಸಲಾತಿಗೆ ಸಂಬಂಧಪಟ್ಟಂತೆ ಐಎನ್‌ಡಿಐಎ ಡೀಪ್‌ ಫೇಕ್‌ ವಿಡಿಯೋ ಹಂಚಿಕೊಂಡಿದೆ. ಎಂತಹ ಮೂರ್ಖತನ. ತೆಲಂಗಾಣ ಸಿಎಂ ಇಂತಹ ಫೇಕ್‌ ವಿಡಿಯೋ ಹಂಚಿಕೊಳ್ಳುತ್ತಾರೆ. ಸಿಎಂ ಫೋನ್‌ನಿಂದಲೇ ಇದು ಅಪ್‌ಲೋಡ್‌ ಆಗಿದೆ. ಅವರು ಹಿಂಸಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ದೇಶ ವಿಭಜಿಸಲು ಹೊರಟಿದ್ದಾರೆ. ರಾಘವೇಂದ್ರ ಮತ್ತೊಮ್ಮೆ ಗೆಲ್ಲುತ್ತಾರೆ. ಯಡಿಯೂರಪ್ಪ ಹೇಳಿದಂತೆ ರಾಜ್ಯದಲ್ಲಿ 26ಕ್ಕೂ ಅ ಧಿಕ ಸ್ಥಾನ ಗೆಲ್ಲುವ ನಂಬಿಕೆ ಮೂಡಿಸಿದೆ ಎಂದು ನಡ್ಡಾ ಹೇಳಿದರು.

ಅಂಬೇಡ್ಕರ್‌ ಖಚಿತವಾಗಿ ಧಾರ್ಮಿಕ ಮೀಸಲಾತಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಒಬಿಸಿಯಲ್ಲಿ ಮುಸ್ಲಿಂ ಮೀಸಲಾತಿ ನೀಡಿದ್ದಾರೆ. ನಾವು ಮುಸ್ಲಿಂ ವಿರೋಧಿ ಅಲ್ಲ. ಆದರೆ ಒಬಿಸಿ ಮೀಸಲಾತಿ ಕೊಡಲು ವಿರೋಧ ಇದೆ.
– ಜೆ.ಪಿ.ನಡ್ಡಾ

Advertisement

Udayavani is now on Telegram. Click here to join our channel and stay updated with the latest news.

Next