Advertisement

ಸಿದ್ದು-ನಾನು ಅಣ್ತಮ್ಮ ಇದ್ದಂತೆ: ಸಿಎಂ

11:21 PM May 13, 2019 | Team Udayavani |

ಹುಬ್ಬಳ್ಳಿ: “ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಾನು ಅಣ್ಣ-ತಮ್ಮ ಇದ್ದ ಹಾಗೆ. ಅವರ ಆಶೀರ್ವಾದ ಹಾಗೂ ಕಾಂಗ್ರೆಸ್‌ ನಾಯಕರ ಬೆಂಬಲ ಇರುವವರೆಗೂ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ನಾನು ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಂಡು ಆಡಳಿತ ಮಾಡುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಈ ಸರ್ಕಾರ ನಡೆಯುತ್ತಿದೆ. ಅವರ ಸಹಕಾರ-ಆಶೀರ್ವಾದ ಹಾಗೂ ಜನರ ಆಶೀರ್ವಾದ ಇರುವವರೆಗೂ ಸಮ್ಮಿಶ್ರ ಸರ್ಕಾರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ನಾಯಕರು ತೊಂದರೆ ಕೊಡುತ್ತಿದ್ದಾರೆ. ಬಿಜೆಪಿಯವರ ಗೊಂದಲದ ಹೇಳಿಕೆಗಳಿಗೆ ಹಾಗೂ ಮಾಧ್ಯಮಗಳ ಧಾರಾವಾಹಿ ವರದಿಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದು. ಇಂತಹ ಹಲವು ಸಮಸ್ಯೆಗಳ ನಡುವೆಯೂ ಹಲವು ಯೋಜನೆಗಳನ್ನು ನೀಡಿದ್ದೇವೆ ಎಂದರು.

ಉಪ ಚುನಾವಣೆಯ ಎರಡು ಸೀಟು ಗೆದ್ದರೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಎಲ್ಲಿಂದ ರಚನೆ ಮಾಡಲಿಕ್ಕಾಗುತ್ತದೆ. ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನಂಬಬೇಡಿ. ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಅವರನ್ನು ಗೌರವದಿಂದ ಕಾಣುತ್ತಾ ಒಂದೇ ಕುಟುಂಬದ ಅಣ್ಣ-ತಮ್ಮಂದಿರಂತೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಯಾವುದೇ ಸ್ವಾರ್ಥವಿಲ್ಲದೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರ ಬೀಳಬೇಕಾ? ನೀವೇ ಹೇಳಿ ಎಂದರು.

ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು: ಕಳೆದ ಏಳೆಂಟು ದಿನಗಳಿಂದ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡುವ ಕನವರಿಕೆ ಹೆಚ್ಚು ಮಾಡಿಕೊಂಡಿದ್ದಾರೆ. ಅಂದಾಜು 45 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಈಗಾಗಲೇ 11 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಆದರೆ ಬಿಜೆಪಿ ನಾಯಕರು ಕುಮಾರಸ್ವಾಮಿ ರಾಜ್ಯದ ರೈತರಿಗೆ ಮೋಸ ಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ.

Advertisement

ಯೋಜನೆ ಲಾಭ ಪಡೆದ ರೈತರು ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ಕೊಂಡಾಡುತ್ತಿರುವಾಗ ಸುಳ್ಳು ಹೇಳುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಸಾಲ ಮನ್ನಾದಿಂದ ಮಾತ್ರ ರೈತರ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ಭ್ರಮೆಯಲ್ಲಿ ನಾವಿಲ್ಲ. ಅದಕ್ಕಾಗಿ ಪರ್ಯಾಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು

ಮಾಧ್ಯಮಗಳ ಧಾರವಾಹಿ ನಂಬಬೇಡಿ: ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿ ತೋರಿಸುತ್ತಿರುವ ಕಾರಣಕ್ಕೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಬಿಜೆಪಿ ನಾಯಕರ ಗೊಂದಲದ ಹೇಳಿಕೆಗಳನ್ನಿಟ್ಟುಕೊಂಡು ಸರ್ಕಾರ ಬೀಳಿಸುತ್ತಿದ್ದಾರೆಂದು ಧಾರಾವಾಹಿಗಳ ರೀತಿಯಲ್ಲಿ ಬರುತ್ತಿರುವ ಮಾಧ್ಯಮಗಳ ಗಡುವಿನ ವರದಿಗಳನ್ನು ನಂಬಬೇಡಿ.

ನಾನು ಮಾಡಿರುವ ತಪ್ಪೇನು? ನಾನು ಹೇಳುವುದು ಒಂದು, ತೋರಿಸುವುದು ಇನ್ನೊಂದು. ಇದರಿಂದ ನನಗೆ ಯಾವುದೇ ನಷ್ಟವಿಲ್ಲ. ಮಾಧ್ಯಮಗಳಿಂದ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಒಂದು ದಿನ ವಿಶ್ರಾಂತಿಗೆ ಹೋಗಿದ್ದು ದೊಡ್ಡ ತಪ್ಪು ಎಂಬಂತೆ ಬಿಂಬಿಸಲಾಯಿತು. ಇದಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಬಿಜೆಪಿಯವರಂತೆ ಕಟುಕರಲ್ಲ: ಸಚಿವ ಡಿ.ಕೆ. ಶಿವಕುಮಾರ ಅವರ ವಿರುದ್ಧ ಇಡಿ, ಐಟಿ ದಾಳಿ ಮೂಲಕ ಹಿಂಸೆ ನೀಡಿದರೂ ಕಣ್ಣೀರು ಹಾಕಲಿಲ್ಲ. ತಮ್ಮ ತಾಯಿಯವರನ್ನು ಐಟಿ ಕಚೇರಿಯಲ್ಲಿ ನಿಲ್ಲಿಸುವ ಪ್ರಮೇಯ ಬಂದರೂ ಎದೆಗುಂದಲಿಲ್ಲ. ಇಡೀ ರಾಜಕೀಯ ಜೀವನದಲ್ಲಿ ಕಣ್ಣೀರು ಹಾಕಿದ ಉದಾಹರಣೆಯಿಲ್ಲ. ಆದರೆ ಆಪ್ತ ಗೆಳೆಯ ಶಿವಳ್ಳಿ ಅವರನ್ನು ನೆನೆದು ಶಿವಕುಮಾರ ಕಣ್ಣೀರು ಹಾಕಿದ್ದಾರೆ. ಜನರ ಸಂಕಷ್ಟಗಳನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ನಾವು ಮನುಷ್ಯತ್ವದ ಹೃದಯದವರು, ಭಾವನಾತ್ಮಕ ಜೀವಿಗಳು. ನೋವಿನ ಕಣ್ಣೀರನ್ನು ರಾಜಕಾರಣಗೊಳಿಸುವ ಬಿಜೆಪಿ ನಾಯಕರಂತೆ ಕಟುಕರಲ್ಲ ಎಂದು ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next