ಹಾವೇರಿ: ಶಿಗ್ಗಾವಿಯಲ್ಲಿ ಅಜ್ಜಂಪೀರ್ ಖಾದ್ರಿ ಪ್ರಬಲ ಆಕಾಂಕ್ಷಿಯಾಗಿದ್ದರು. ಮೊದಲನೆ ಹೆಸರಾಗಿ ಖಾದ್ರಿಯವರನ್ನು ಕೇಂದ್ರಕ್ಕೆ ಕಳುಹಿಸಿದ್ದೆವು. ಖಾದ್ರಿಯವರು ನಾಲ್ಕು ಸಲ ಕಡಿಮೆ ಅಂತರದಲ್ಲಿ ಸೋತರು. ಖಾದ್ರಿ ಅಭ್ಯರ್ಥಿ ಮಾಡಲು ಹಲವರು ನಾಮಪತ್ರ ಹಾಕಿಸಿದ್ದರು. ಖಾದ್ರಿ ನನ್ನ ಮಾತಿಗೆ ಕಟ್ಟು ಬಿದ್ದು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಹುಲಗೂರು ಗ್ರಾಮದಲ್ಲಿ ಸೋಮವಾರ (ನ.04) ಚುನಾವಣಾ ಪ್ರಚಾರದಲ್ಲಿ ಖಾದ್ರಿ ಹೆಗಲ ಮೇಲೆ ಕೈ ಹಾಕಿಕೊಂಡೆ ಸಿದ್ದರಾಮಯ್ಯ ಭಾಷಣ ಮಾಡಿದರು. ಖಾದ್ರಿಯವರು ಅಭ್ಯರ್ಥಿ ಪಠಾಣ ಗೆಲ್ಲಿಸಲು ಪಣ ತೊಟ್ಟಿದ್ದಾರೆ ಎಂದರು.
ಭರತ್ ಬೊಮ್ಮಾಯಿಗೂ ಈ ಕ್ಷೇತ್ರಕ್ಕೂ ಸಂಬಂಧವಿಲ್ಲ. ಇಬ್ಬರು ಮಾಜಿ ಸಿಎಂಗಳ ಕುಟುಂಬದ ಭರತ್ ಬಿಜೆಪಿ ಅಭ್ಯರ್ಥಿಯಾಗಿದ್ದಾನೆ. ಬೊಮ್ಮಾಯಿ ಮಗನನ್ನ ನೀನು ಕೆಡವಬೇಕು ಎಂದು ಸಿಎಂ ಹೇಳಿದರು.
ಬಿಜೆಪಿ ಒಂದು ಸುಳ್ಳಿನ ಪಕ್ಷ, ಭ್ರಷ್ಟಾಚಾರದ ಪಕ್ಷ. ಭ್ರಷ್ಟಾಚಾರ ಜನತಾ ಪಾರ್ಟಿ ಎಂದು ಕರೆಯುತ್ತೇವೆ. 40% ಕಮಿಷನ್ ಪದ ಬಂದಿದ್ದೆ ಬೊಮ್ಮಾಯಿ ಸಿಎಂ ಆದಾಗ. ಕೋವಿಡ್ ಬಂದಾಗ ಹೆಣಗಳಿಂದಲು ಲಂಚ ಪಡೆಯಲು ಶುರು ಮಾಡಿದ್ದರು. ಹೆಣಗಳಿಂದ ಲಂಚ ಪಡೆದ ಮುಖ್ಯಮಂತ್ರಿ ಇದ್ದರೆ ಅದು ಬಸವರಾಜ್ ಬೊಮ್ಮಾಯಿ. 40% ಕಮಿಷನ್ ಪಡೆಯುತ್ತಿದ್ದ, ಸತ್ತ ಹೆಣಗಳಿಂದ ಲಂಚ ಪಡೆಯುತ್ತಿದ್ದ ಬೊಮ್ಮಾಯಿ ಮಗ ಗೆಲ್ಲಬೇಕಾ? ರಾಜ್ಯವನ್ನು ಲೂಟಿ ಹೊಡೆದವರನ್ನು ಮತ್ತೆ ಗೆಲ್ಲಿಸಬೇಕಾ ಎಂದು ಸಿಎಂ ಹೇಳಿದರು.
ವಕ್ಪ್ ಆಸ್ತಿ ವಿಚಾರ ಬಿಜೆಪಿ ಕಾಲದಲ್ಲೂ ನೋಟಿಸ್ ಕೊಟ್ಟಿದ್ದಾರೆ. ಇದು ಎಲ್ಲರ ಕಾಲದಲ್ಲೂ ನಡೆದುಕೊಂಡು ಬಂದಿದೆ. ವಕ್ಪ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದರು. ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದ್ದೇನೆ. ನೋಟಿಸ್ ಬಂದರೂ, ನೋಟಿಸ್ ವಾಪಸ್ ಪಡೆಯಬೇಕು. ಇನ್ನೇನು ಬೇಕು ಖತಂ ಹೋಗಯಾ, ಇವರಿಗೆ ಮಾನಾ ಮರ್ಯಾದೆ ಇದೆಯಾ. ವೋಟಿಗಾಗಿ ಸುಳ್ಳು ಹೇಳುತ್ತಿದ್ದಾರೆ, ನಾನು 40 ವರ್ಷದಿಂದ ಶಾಸಕನಾಗಿದ್ದೆನೆ. ನನ್ಮ ಜೀವನ ತೆರೆದ ಪುಸ್ತಕ, ನನ್ನ ಮೇಲೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡುತ್ತಾರೆ ಎಂದು ಇವರಿಗೆ ಹೊಟ್ಟೆಯುರಿ. ಬಿಜೆಪಿ ಸುಳ್ಳಿಗೆ ಉತ್ತರ ಕೊಡಬೇಕಾದರೆ ಪಠಾಣರನ್ನು ಗೆಲ್ಲಿಸಬೇಕು ಎಂದು ಸಿಎಂ ಹೇಳಿದರು.
ಮೋದಿಯವರೆ ದೇಶ ದಿವಾಳಿ ಮಾಡಿದ್ದೀರಿ. ದೇಶ ಹಾಳು ಮಾಡಿ ನಮಗೆ ಹೇಳಲು ಬರ್ತಿರಾ? ಬೆಲೆ ಏರಿಕೆ ಜಾಸ್ತಿಯಾಗಿದೆ, ಆದ್ರೆ ನಮಗೆ ಪಾಠ ಹೇಳಿ ಹೇಳಲು ಬಂದಿದ್ದಾರೆ. ನಮ್ಮ ಬಗ್ಗೆ ಮಾತನಾಡಲು ಬೊಮ್ಮಾಯಿಗೆ ಯಾವ ನೈತಿಕತೆ ಇದೆ? ನಾನು ಉಳಿಯಲು ಪಠಾಣ ಗೆಲ್ಲಬೇಕು. ಮೂರು ಕ್ಷೇತ್ರದಲ್ಲಿ ಗೆಲ್ಲಿಸಿದ್ರೆ ನಮಗೆ ಇನ್ನೂ ಶಕ್ತಿ ಬರುತ್ತದೆ ಎಂದರು.