Advertisement
ಮೇ 31ರಂದು ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದಲ್ಲಿ ಎರಡು ನೂತನ ಮಹಡಿಗಳಾದ ಗುರುಕೃಪಾ ಮತ್ತು ನಾರಾಯಣ ಕೃಪಾ ಸೇವಾಭವನಗಳನ್ನು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್ ಇವರು ತಮ್ಮ ದಿವ್ಯಹಸ್ತದಿಂದ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿ, ಮುಂಬಯಿಯಲ್ಲಿನ ಒತ್ತಡ, ಸಂಘರ್ಷಮಯ ಬದುಕಿನಲ್ಲಿಯೂ ಹುಟ್ಟೂರಿನ ಸೆಳೆತ, ಅಲ್ಲಿನ ದೇವಸ್ಥಾನಗಳ ಬಗ್ಗೆ ಪ್ರೀತಿ, ಕಾಳಜಿಯಯನ್ನು ಗಮನಿಸಿದ್ದೇವೆ. ಈಶ್ವರನ ಅಸ್ತಿತ್ವವನ್ನು ಸ್ವೀಕರಿಸಿದ ಜೀವನ ನೈತಿಕತೆಯಿಂದ ಕೂಡಿ ಉನ್ನತಿಯತ್ತ ಸಾಗುತ್ತದೆ. ಇಂದು ದೀಕ್ಷೆಯ 25ರ ಸಂಭ್ರಮವನ್ನು ಆಚರಿಸಿದ ಈ ಕ್ಷಣವು ನಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳಿಗೆ ಸಂದ ವಿಶೇಷ ಗೌರವವಾಗಿದೆ ಎಂದರು.
Related Articles
Advertisement
ಕಾರ್ಯದರ್ಶಿ ರವೀಂದ್ರನಾಥ್ ಜಿ. ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1986ರಲ್ಲಿ ಲಕ್ಷ್ಮೀàನಾರಾಯಣ ಭಟ್‌ರಿಂದ ಬೀಜಾಂಕುರಗೊಂಡ ಸೇವಾಮಂಡಲದ ಕನಸು ಸಾಕಾರಗೊಂಡು 2001ರಲ್ಲಿ ವರದ ಸಿದ್ಧಿ ಸೇವಾ ಭವನ, 2011 ರಲ್ಲಿ ಮಹಾಗಣಪತಿ ಮಂದಿರ ಮತ್ತು ಇಂದು ಎರಡು ನೂತನ ಭವನಗಳು ಲೋಕ ಕಲ್ಯಾಣದ ಉದ್ದೇಶದಿಂದ ನಿರ್ಮಿತಗೊಂಡು ಲೋಕಾರ್ಪಣೆಗೊಂಡಿವೆ. ಸಂಸ್ಥಾನ ಗೌಡಪಾದಾಚಾರ್ಯ ಮೂಲ ಪರಂಪರೆಯಿಂದ ಬೆಳಗಿ ಬಂದ ಸಾರಸ್ವತರ ಕೇಂದ್ರೀಯ ಮಠ ಕವಳೆ ಮಠಾಧೀಶರ ಆಶೀರ್ವಾದದಿಂದ ಈ ಸತ್ಕಾರ್ಯಗಳು ಜರಗುತ್ತಿವೆ ಎಂದರು.
ನೂತನ ವಾಸ್ತು ನಿರ್ಮಾಣ ಸಾಗಿಬಂದ ಬಗ್ಗೆ ಉಪಾಧ್ಯಕ್ಷ ಮಾಧವ್ ಪಿ. ನಾಯಕ್ ಹಾಗೂ ಖರ್ಚು ವಿವರಗಳ ಮಾಹಿತಿಯನ್ನು ಕೋಶಾಧಿಕಾರಿ ಋಂಜಯ್ ಬಿಪಾಟ್ಕರ್ ಅವರು ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ರವಿಶಂಕರ್ ಡಹಾಣೂರೋಡ್