Advertisement

ನಮ್ಮೂರ ಸಮಸ್ಯೆ ಸಿದ್ದೇಶ್ವರ್‌ಗೆ ಅರ್ಥವಾಗದು

12:46 PM Jan 06, 2018 | Team Udayavani |

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ್‌ ಈ ಊರಿನವವರಲ್ಲ, ಹಾಗಾಗಿ ಅವರಿಗೆ ನಮ್ಮೂರ ಸಮಸ್ಯೆ ಅರ್ಥ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ
ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಖಾರವಾಗಿ ಟೀಕಿಸಿದ್ದಾರೆ.

Advertisement

ಶುಕ್ರವಾರ, ಡಿಸಿಎಂ ಟೌನ್‌ಶಿಪ್‌ ಪಕ್ಕದ ರಸ್ತೆಯ ಸಿಮೆಂಟೀಕರಣ ಕಾಮಗಾರಿಗೆ ಪೂಜೆ ಸಲ್ಲಿಸುವ ಮುನ್ನ ಅಲ್ಲಿನ ರೈಲ್ವೆ ಸೇತುವೆ ಕುರಿತ ಪ್ರಶ್ನೆಗೆ
ಉತ್ತರಿಸಿದ ಅವರು, ಸಿದ್ದೇಶ್ವರ್‌ ಈ ಊರಿನವರಲ್ಲ. ಪಕ್ಕದೂರಿನಿಂದ ಬಂದವರು. ಇಲ್ಲಿನ ಸಮಸ್ಯೆ ಅವರಿಗೆ ಸಮಸ್ಯೆಯಾಗಿ ಕಾಣಲ್ಲ. ಇದಕ್ಕೆ ಉತ್ತಮ
ಉದಾಹರಣೆ ಈ ರೈಲ್ವೆ ಸೇತುವೆ. ಇದೀಗ ರೈಲ್ವೆ ಜೋಡಿಮಾರ್ಗ ನಿರ್ಮಾಣ ಮಾಡಲಾಗುತ್ತಿದ್ದು, ಸಂಸದರು ಪ್ರಯತ್ನಪಟ್ಟರೆ ಸಮಸ್ಯೆ ಪರಿಹಾರ
ಸಾಧ್ಯವಿದ್ದು, ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ರೈಲ್ವೆ ಅಧಿಕಾರಿಗಳು ನಮಗೆ ಯಾವುದೇ ಉತ್ತರ ಕೊಡಲು ನಿರಾಕರಿಸುತ್ತಾರೆ ಎಂದರು.

ಇದೀಗ ರೈಲ್ವೆ ಜೋಡಿಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, ರೈಲ್ವೆ ಬ್ರಿಡ್ಜ್ಗೂ ಸಹ ಕೆಲ ಮಾರ್ಪಾಟು ಮಾಡಲಿದ್ದಾರೆಂಬ ಮಾಹಿತಿ ಇದೆ.
ಈ ಕುರಿತು ರೈಲ್ವೆ ಇಂಜಿನಿಯರ್‌ಗಳನ್ನು ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಕಾಮಗಾರಿ ಕುರಿತು ಸಣ್ಣ ಮಾಹಿತಿ ಸಹ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕಾಮಗಾರಿ ಆಗಿರುವುದರಿಂದ ಸಂಸದರು ಕಡೆ ಪಕ್ಷ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಈ ಬ್ರಿಡ್ಜ್ ಸಮಸ್ಯೆ ತಿಳಿಸಿ, ಅಂತಹ ಸಮಸ್ಯೆ ಮತ್ತೆ ಆಗದಂತೆ ಕ್ರಮ ವಹಿಸಲು ಸೂಚಿಸಬಹುದು. ಅವರಿಗೆ ಈ ಬಗ್ಗೆ ಕಾಳಜಿ ಇಲ್ಲ. ಸದಾ ಭೀಮಸಮುದ್ರದಲ್ಲಿ ಬೀಡು ಬಿಡುವ ಅವರಿಗೆ ಇಂತಹ ಸಮಸ್ಯೆಗಳು ಗೊತ್ತಾಗುವುದಾದರೂ ಹೇಗೆ? ಇದು ತಮ್ಮ ಊರಾಗಿದ್ದರೆ ಸಮಸ್ಯೆಗಳು ಗೊತ್ತಾ ಗುತ್ತಿದ್ದವು ಎಂದು ಅವರು ಟೀಕಿಸಿದರು.

ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌ ಮಾತನಾಡಿ, ಹೊಸದಾಗಿ ನಿರ್ಮಾಣ ಮಾಡಿರುವ ರೈಲ್ವೆ ಫ್ಲೆ ಓವರ್‌ ಕೆಳಗೆ ಈ ಹಿಂದೆ ಸತತ ಮಳೆ
ಸುರಿದಾಗ ಹೂಳು ತುಂಬಿಕೊಂಡಿದೆ. ಈಗ ಅಲ್ಲಿ ಯಾವುದೇ ವಾಹನ ಓಡಾಡಲು ಸಾಧ್ಯವಿಲ್ಲದಷ್ಟು ಮಣ್ಣು ತುಂಬಿಕೊಂಡಿದೆ. ಅಲ್ಲಿನ ಮಣ್ಣು ತೆಗೆಸಿ,
ಸ್ವತ್ಛ ಮಾಡಿಸಲು ಜೆಸಿಬಿ ತೆಗೆದುಕೊಂಡು ನಾನೇ ಹೋಗಿದ್ದೆ. ಆದರೆ, ರೈಲ್ವೆ ಅಧಿಕಾರಿಗಳು ಇದು ನಮ್ಮ ಜಾಗ. ಇಲ್ಲಿ ನೀವು ಯಾವುದೇ ಕೆಲಸ 
ಮಾಡುವಂತಿಲ್ಲ. ನಾವೇ ಮಾಡುತ್ತೇವೆ ಎಂದು ಹೇಳಿ ಮಣ್ಣು ತೆಗೆಯುವುದನ್ನು ನಿಲ್ಲಿಸಿದರು ಎಂದು ದೂರಿದರು.

ಈಗ ಆ ಜಾಗದಲ್ಲಿ ಯಾವುದೇ ವಾಹನ ಓಡಾಡುವುದೇ ಅಸಾಧ್ಯ ಎಂಬ ಸ್ಥಿತಿ ಇದೆ. ಒಂದೆರಡು ಸಾವಿರ ರೂಪಾಯಿ ಖರ್ಚು ಮಾಡಿದರೆ ಸೇತುವೆ ಕೆಳಭಾಗದ ರಸ್ತೆ ಸಂಪೂರ್ಣ ಸ್ವತ್ಛವಾಗಿ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ. ಇದನ್ನೂ ಸಹ ಮಾಡಿಸಲು ಸಂಸದರಿಗೆ ಆಸಕ್ತಿ ಇಲ್ಲ ಎಂದು
ಅವರು ಟೀಕಿಸಿದರು. ಮೇಯರ್‌ ಅನಿತಾಬಾಯಿ, ಉಪ ಮೇಯರ್‌ ನಾಗರತ್ನಮ್ಮ, ಸದಸ್ಯ ಸುರೇಂದ್ರ ಮೊಯಿಲಿ, ಡೂಡಾ ಮಾಜಿ ಅಧ್ಯಕ್ಷ ಡಿ. ಮಾಲತೇಶ್‌, ಕೆ.ಜಿ. ಶಿವಕುಮಾರ್‌, ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. 

Advertisement

ಪೋಲಾಗುತ್ತಿದ್ದ ಕುಡಿವ ನೀರು ನಿಲ್ಲಿಸಲು ಕ್ರಮ ಕಳೆದ ಒಂದೂವರೆ ತಿಂಗಳಿನಿಂದ ಡಿಸಿಎಂ ಟೌನ್‌ಶಿಪ್‌ ಬಳಿಯ ಪಿಬಿ ರಸ್ತೆಯ ಕಾಮಗಾರಿ ವೇಳೆ ಪೈಪ್‌ಲೈನ್‌ ಒಡೆದು ನೀರು ನಿರಂತರವಾಗಿ ಸೋರುತ್ತಿದೆ. ಪಾಲಿಕೆ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಈ ಕುರಿತು ಗಮನ ಹರಿಸಿರಲಿಲ್ಲ. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದ ವೇಳೆ ಅಲ್ಲಿನ ಜನರು
ಅವರ ಗಮನಕ್ಕೆ ತಂದರು. ಆಗ, ಸಚಿವರು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಇಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಯಿಸಿ, ದುರಸ್ತಿ
ಕಾರ್ಯಕ್ಕೆ ಸೂಚಿಸಿದರು.

ಪಾದಚಾರಿ ರಸ್ತೆ ಒತ್ತುವರಿ ತೆರವಿಗೆ ಸಚಿವರ ಸೂಚನೆ ಡಿಸಿಎಂ ಟೌನ್‌ಶಿಪ್‌ ಬಳಿಯ ರೈಲ್ವೆ ಪಕ್ಕದಲ್ಲಿರುವ ಕೇಂದ್ರ ಉಗ್ರಾಣ ನಿಗಮದ ಕಟ್ಟಡಕ್ಕೆ ಕಂಪೌಂಡ್‌ ನಿರ್ಮಿಸುವಾಗ ಪಿಬಿ ರಸ್ತೆಯ ಪಾದಚಾರಿ ರಸ್ತೆ ಒತ್ತುವರಿ ಮಾಡಿದ್ದು, ತಕ್ಷಣ ತೆರವುಗೊಳಿಸಲು ನಿಗಮದ ಅಧಿಕಾರಿಗಳಿಗೆ ತಿಳಿಸುವಂತೆ ಸಚಿವ ಮಲ್ಲಿಕಾರ್ಜುನ್‌ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೊಸದಾಗಿ ನಿರ್ಮಿಸಿರುವ ಕಂಪೌಂಡ್‌ ರಸ್ತೆ ಜಾಗದಲ್ಲಿದೆ. ಸುಮಾರು 4-5 ಅಡಿ ಜಾಗ ಒತ್ತುವರಿ ಆಗಿದೆ. ಈ ಹಿಂದೆ ಸೂಚನೆ ನೀಡಿದ್ದರೂ ಸಹ ಒತ್ತುವರಿ ತೆರವು ಮಾಡಿಲ್ಲ. ಇದೀಗ ರಸ್ತೆ ನಿರ್ಮಾಣ ನಡೆಯುತ್ತಿದ್ದು, ತಕ್ಷಣ ಕಂಪೌಂಡ್‌ ತೆರವುಗೊಳಿಸಿ, ಪಾದಚಾರಿ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡಲು ನಿಗಮದ ಅಧಿಕಾರಿಗಳಿಗೆ ಸೂಚಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next