Advertisement

“ಕವಿಶೈಲ’ದ ಚಿತ್ರಣ ಬದಲಿಸಿದ್ದ ಸಿದ್ಧಾರ್ಥ್

12:00 AM Aug 01, 2019 | Lakshmi GovindaRaj |

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಮನೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಗೆ ಹೋದರೆ ಕುವೆಂಪು ಅವರ ಸಮಾಧಿ  ಇರುವ ಸ್ಥಳ (ಕವಿಶೈಲ)ದ ಸುತ್ತ ಅಲಂಕಾರಿಕವಾದ ಬೃಹತ್‌ ಗಾತ್ರದ ಕಲ್ಲುಗಳು ಎಲ್ಲರ ಗಮನ ಸೆಳೆಯುತ್ತವೆ. ಇಂತಹ ಕಲಾಕೃತಿಗಳನ್ನು ಕೊಡುಗೆಯಾಗಿ ನೀಡಿ ಸಮಾಧಿ ಸ್ಥಳದ ಅಂದವನ್ನು ಹೆಚ್ಚಿಸಿದವರು ಸಿದ್ಧಾರ್ಥ್ ಹೆಗ್ಡೆ. ಆದರೆ, ಈ ವಿಷಯವನ್ನು ಸಿದ್ಧಾರ್ಥ ಈವರೆಗೂ ಎಲ್ಲೂ ಹೇಳಿಕೊಂಡಿಲ್ಲ.

Advertisement

50 ಲಕ್ಷ ಖರ್ಚು: 1992ರಲ್ಲಿ ಕುವೆಂಪು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದ ನಂತರದ ಐದಾರು ವರ್ಷಗಳ ಬಳಿಕ ಕವಿಶೈಲ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಯಿತು. ಕಲಾವಿದ ಕೆ.ಟಿ.ಶಿವಪ್ರಸಾದ್‌ ಅವರು ಲಂಡನ್‌ನ “ಸ್ಟೋನ್‌ ಹೆಂಜ್‌’ ಮಾದರಿ ರಚಿಸಿಕೊಟ್ಟರು. ಈ ವಿಷಯವನ್ನು ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಸಿದ್ಧಾರ್ಥ್ ಬಳಿ ಪ್ರಸ್ತಾಪಿಸಿದರು. ಇದಕ್ಕೆ ಮನಪೂರ್ವಕವಾಗಿ ಒಪ್ಪಿದ ಸಿದ್ದಾರ್ಥ್, 1997-98ರಲ್ಲಿ ಕಲಾಕೃತಿಗೆ ಅಗತ್ಯವಿರುವ ದೊಡ್ಡಗಾತ್ರದ ಕಲ್ಲುಗಳನ್ನು (ಒಂದೊಂದು 17-18 ಟನ್‌) ತೀರ್ಥಹಳ್ಳಿ ಸುತ್ತಮುತ್ತ ಹುಡುಕಿ ತರಲು ವ್ಯವಸ್ಥೆ ಮಾಡಿದರು.

ಆ ಕಾಲಕ್ಕೆ ಬೃಹತ್‌ ಲಾರಿಗಳು ಇರಲಿಲ್ಲ. ಚೆನ್ನೈ ನಿಂದ ಟ್ರಕ್‌ಗಳನ್ನು ತರಿಸಿ 17-18 ಟನ್‌ ತೂಕದ ಕಲ್ಲುಗಳನ್ನು ತರಲಾಯಿತು. ನಂತರ, ಚೆನ್ನೈ ಮೂಲದ ಕಾರ್ಮಿಕರು ಕೆತ್ತನೆ ಮಾಡಿ ಅದಕ್ಕೊಂದು ರೂಪ ಕೊಟ್ಟರು. ಬಳಿಕ ಅಷ್ಟು ದೊಡ್ಡ ಕಲ್ಲುಗಳನ್ನು ಬೆಟ್ಟದ ಮೇಲೆ ಕೊಂಡೊಯ್ಯುವುದು ಹೇಗೆ ಪ್ರಶ್ನೆ ಎದುರಾಯಿತು. ತಕ್ಷಣ ಸಿದ್ಧಾರ್ಥ ಅವರು ಮಂಗಳೂರಿನಿಂದ ಕ್ರೇನ್‌ ತರಿಸಿದರು. ಸುಮಾರು 30-35 ದಿನಗಳ ಕೆಲಸ ನಡೆದು ಕವಿಶೈಲದ ರೂಪ ಬದಲಾಯಿತು. ಈ ಎಲ್ಲ ಕಾರ್ಯಕ್ಕೆ ಆ ಸಮಯ ದಲ್ಲಿ ಸುಮಾರು 50 ಲಕ್ಷ ರೂ. ಖರ್ಚಾಗಿರಬಹುದು ಎನ್ನುತ್ತಾರೆ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌. ಕವಿಶೈಲಕ್ಕೆ ಬಳಸಿ ಉಳಿದ ಕಲ್ಲು ಗಳನ್ನು ತೇಜಸ್ವಿ ಅವರ ಸಮಾಧಿ ಗೂ ಬಳಸಲಾಗಿದೆ.

ಹೆಸರು ಹಾಕ್ಬೇಡಿ: ಇದಕ್ಕೆಲ್ಲಾ ತಮ್ಮ ಕೊಡುಗೆ ಎಂದು ನನ್ನ ಹೆಸರು ಹಾಕಬೇಡಿ ಎಂದಿದ್ದರಂತೆ. ಹೀಗಾಗಿ, ಕೆಲ ವರ್ಷ ಹಾಗೇ ಇತ್ತು. ಕೊನೆಗೆ ಒತ್ತಾಯ ಮಾಡಿದ ಮೇಲೆ ಅವರ ತಂದೆ, ತಾತನ ಹೆಸರು ಹಾಕಲು ಒಪ್ಪಿಗೆ ಸೂಚಿಸಿದ್ದರು. ಮತ್ತೆ ಒತ್ತಾಯ ಮಾಡಿ ದಾಖಲೆಗೆ ಬೇಕಾಗಲಿದೆ ಎಂದು ಹೇಳಿ ಅವರ ಹೆಸರು ಬರೆಸಲಾಯಿತು. ಆ ಫಲಕ ಕುಪ್ಪಳ್ಳಿ ಮನೆ ಒಳಗೆ ಇದ್ದು, ಬಹಳಷ್ಟು ಜನರ ಕಣ್ಣಿಗೆ ಬಿದ್ದಿಲ್ಲ.

2000ನೇ ಇಸವಿಯಲ್ಲಿ ತೀರ್ಥಹಳ್ಳಿಗೆ ಮದುವೆ ನಿಮಿತ್ತ ಬಂದಿದ್ದ ಸಿದ್ಧಾರ್ಥ ಅವರನ್ನು ಕರೆದು ಕೊಂಡು ಹೋಗಿ ಕವಿಶೈಲ ತೋರಿಸಲಾಯಿತು. ಆಗ ಸುತ್ತಲೂ ಲಾನ್‌ ಬೆಳೆಸುವಂತೆ ಸಲಹೆ ನೀಡಿದ್ದರು. ಆಮೇಲೆ ಅಷ್ಟಾಗಿ ಭೇಟಿ ನೀಡಲಿಲ್ಲ. ಕಳೆದ ವರ್ಷ ಕೊಪ್ಪಕ್ಕೆ ಬಂದಿದ್ದಾಗ ಹೋಗೋಣ ಬನ್ನಿ ಎಂದಿದ್ದೆ. ಸಮಯ ಇಲ್ಲ ಇನ್ನೊಮ್ಮೆ ಬರುವೆ, ಕವಿಶೈಲ ಅಭಿವೃದ್ಧಿ ಕೆಲಸ ನನ್ನ ಗಮನಕ್ಕೆ ಬರುತ್ತಿದೆ. ಇನ್ನೂ ಏನು ಬೇಕಾದರೂ ಹೇಳಿ ಮಾಡೋಣ ಎಂದಿದ್ದರು ಎಂಬುದನ್ನು ಪ್ರಕಾಶ್‌ ನೆನಪಿಸಿಕೊಳ್ಳುತ್ತಾರೆ.

Advertisement

ಕುವೆಂಪು ಸಂಬಂಧಿ: ಕುವೆಂಪು ಅವರ ಪತ್ನಿ ಹೇಮಾವತಿ ಯವರ ಸಹೋದರ ದೇವಂಗಿ ರತ್ನಾಕರ ಗೌಡ. ರತ್ನಾಕರ ಗೌಡರ ಪತ್ನಿ ಶಾರದಮ್ಮಗೆ ಸಿದ್ಧಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅಣ್ಣ. ಹೀಗಾಗಿ, ದೇವಂಗಿ ಕುಟುಂಬ ಹಾಗೂ ಕುವೆಂಪು ಕುಟುಂಬದೊಂದಿಗೆ ಸಿದ್ಧಾರ್ಥ ಅವರ ಮನೆತನಕ್ಕೆ ನಂಟು ಬೆಸೆದಿದೆ. ಇದಲ್ಲದೆ ತೀರ್ಥಹಳ್ಳಿ ತಾಲೂಕಿನಲ್ಲಿ ಸಿದ್ಧಾರ್ಥ ಅವರ ಸಂಬಂ ಧಿಕರು ಹಲವರಿದ್ದಾರೆ. ಬೆಜ್ಜ ವಳ್ಳಿ ಸಮೀಪದ ಹಿರೇತೋಟದಲ್ಲೂ ನೆಂಟರಿದ್ದಾರೆ. ಕುಡುಮಲ್ಲಿಗೆ ಸಿದ್ಧಾರ್ಥ ಅವರ ಅತ್ತೆ ಪ್ರೇಮಾ ಅವರ ತವರು ಮನೆ. ನಾಲ್ಕು ತಿಂಗಳ ಹಿಂದೆ ರತ್ನಾಕರ ಗೌಡರ ಪತ್ನಿ ಶಾರದಮ್ಮ ಶಿವಮೊಗ್ಗದಲ್ಲಿ ತೀರಿಕೊಂಡಾಗ ಸಿದ್ಧಾರ್ಥ ಇಲ್ಲಿಗೆ ಬಂದಿದ್ದರು.

ರೈತನ ಮಗನಾಗಿ ಹುಟ್ಟಿ ಬೆಳೆದ ಅವರಿಗೆ ಸೂಕ್ಷ್ಮ ಮನಸ್ಸು ಇತ್ತು. ಕವಿಶೈಲ ಅಭಿವೃದ್ಧಿಗೆ ಉದಾರವಾಗಿ ಖರ್ಚು ಮಾಡಿದ್ದಾರೆ. ಅದನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಅಂತಹ ದೊಡ್ಡ ಮನಸ್ಸು ಅವರದ್ದು.
-ಕಡಿದಾಳ್‌ ಪ್ರಕಾಶ್‌, ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next