Advertisement

ಬೇಡ ಜಂಗಮರಿಗೆ ಎಸ್‌ ಸಿ ಪ್ರಮಾಣಪತ್ರ ಕೊಡಿ : ಸಿದ್ಧನಕೊಳ್ಳ ಶ್ರೀ

07:27 PM Apr 03, 2021 | Team Udayavani |

ಹುನಗುಂದ : ಬೇಡ ಜಂಗಮರಿಗೆ ಎಸ್‌ಸಿ ಮೀಸಲಾತಿ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶವಿದ್ದರೂ ಸರ್ಕಾರ ಮಾತ್ರ ಎಸ್‌ ಸಿ ಪ್ರಮಾಣ ಪತ್ರ ಕೊಡಲು ಹಿಂದೇಟು ಹಾಕುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲಿ ಎನ್ನುವಂತಾಗಿದೆ ಎಂದು ಸಿದ್ಧನಕೊಳ್ಳ ಧರ್ಮಾಧಿಕಾರಿ ಡಾ| ಶಿವಕುಮಾರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಶ್ರೀ ವೀರಮಾಹೇಶ್ವರ (ಜಂಗಮ) ಸಮಾಜ ಮತ್ತು ಗಚ್ಚಿನಮಠದ ಸಕಲ ಸದ್ಭಕ್ತರ ಮಂಡಳಿಯ ಸಹಯೋಗದಲ್ಲಿ ನಡೆದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಅಯ್ನಾಚಾರ ಸಾಮೂಹಿಕ ಲಿಂಗ ದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮೀಸಲಾತಿ ಕೊಡುವುದಾದರೇ ಎಲ್ಲ ಧರ್ಮ, ಜಾತಿಗಳಿಗೆ ಮೀಸಲಾತಿ ನೀಡಲಿ. ಇಲ್ಲವೇ ಆರ್ಥಿಕವಾಗಿ ಹಿಂದುಳಿದ ಮೀಸಲಾತಿ ಜಾರಿಗೊಳಿಸಿ. ಎಲ್ಲ ಜಾತಿಗಳಲ್ಲಿ ಬಡವರಿದ್ದಾರೆ ಅವರೆಲ್ಲರಿಗೂ ಮೀಸಲಾತಿ ಕೊಡಿ. ಇಲ್ಲದಿದ್ದರೇ ಮೀಸಲಾತಿಯನ್ನೇ ತೆಗೆದು ಹಾಕಿ. ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹಾಗೂ ಕುರುಬರ ಎಸ್‌ಟಿ ಮೀಸಲಾತಿಗೆ ನಮ್ಮ ಬೆಂಬಲವಿದೆ ಎಂದರು.

ಕಮತಗಿಯ ಹೊಳೆಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಜಂಗಮರ ಜೋಳಿಗೆ ಭಿಕ್ಷೆಯ ಸಾಧನವಲ್ಲ. ಅದೊಂದು ಕಾಯಕ ನಿಷ್ಠೆಯ ಪ್ರತೀಕ. ಜಂಗಮ ಸಮಾಜ ಎಲ್ಲ ಧರ್ಮದವರಿಂದ ಗೌರವಕ್ಕೆ ಪಾತ್ರವಾದ ಸಮಾಜ. ನಮ್ಮ ಸಮಾಜದ ಜತೆಗೆ ಇತರೇ ಸಮಾಜವನ್ನು ಗೌರವದಿಂದ ಕಂಡಾಗ ಮಾತ್ರ ನಮ್ಮ ಸಮಾಜ ಗೌರವ ಉತ್ತಂಗಕ್ಕೆ ಏರಲು ಸಾಧ್ಯ ಎಂದರು. ಎಸ್‌ಆರ್‌ಎನ್‌ಇ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ನವಲಿಹಿರೇಮಠ ಮಾತನಾಡಿ, ರೇಣುಕಾಚಾರ್ಯರು ಜಂಗಮ ಸಮುದಾಯಕ್ಕೆ ಮಾತ್ರ ಸೀಮಿತರಲ್ಲ.

ಎಲ್ಲ ಸಮುದಾಯಗಳಿಗೆ ಬೇಕಾಗಿರುವ ಮಹಾನ್‌ ದೇವತಾ ಪುರುಷ. ರಾಜ್ಯದಲ್ಲಿ 3600 ಮಠಗಳಿವೆ. ಶೇ. 90ರಷ್ಟು ಮಠಗಳಲ್ಲಿ ಜಂಗಮ ಸಮುದಾಯದ ಮಠಾ ಧಿಪತಿಗಳಿದ್ದಾರೆ. ರಾಜ್ಯದ 30 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಅತೀ ಹೆಚ್ಚು ಜಂಗಮ ಸಮುದಾಯದ ಜನರಿದ್ದಾರೆ. ರಾಜ್ಯದಲ್ಲಿ 35 ಲಕ್ಷ ಜನ ಜಂಗಮ ಸಮುದಾಯದ ಜನರಿದ್ದಾರೆ.

ಅದರಲ್ಲಿ ಶೇ. 80ರಷ್ಟು ಜನ ಕಡುಬಡವರಿದ್ದಾರೆ. ಜಾತಿ ರಾಜಕೀಯವನ್ನು ಸುತ್ತಿಕೊಂಡು ಸಮಾಜದ ಸ್ವಾಸ್ಥÂ ಹಾಳು ಮಾಡುತ್ತಿವೆ ಎಂದರು. ಗಚ್ಚಿನಮಠದ ಅಮರೇಶ್ವರ ದೇವರು, ಅಧ್ಯಕ್ಷತೆ, ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಿವಗಂಗಾ ರಂಜಣಗಿ ಉಪನ್ಯಾಸ ನೀಡಿದರು. ಬೆಳಗ್ಗೆ 11ಗಂಟೆಗೆ ಗಚ್ಚಿನಮಠದಿಂದ ಆರಂಭಗೊಂಡ ರೇಣುಕಾಚಾರ್ಯ ಭಾವಚಿತ್ರದ ಮೆರವಣಿಗೆ ಹಾಗೂ ಕುಂಭ ಮೇಳ ಲಿಂಗದಕಟ್ಟಿ, ಶ್ರೀ ಸಂಗಮೇಶ್ವರ ದೇವಸ್ಥಾನದ ಮಾರ್ಗವಾಗಿ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮರಳಿ ಗಚ್ಚಿನಮಠ ತಲುಪಿತು. ಈ ವೇಳೆ 21 ಜನರಿಗೆ ಅಯ್ನಾಚಾರ ಮತ್ತು ಲಿಂಗದೀಕ್ಷೆ ನೀಡಲಾಯಿತು.

Advertisement

ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ದಾಸಬಾಳದ ವೀರೇಶ್ವರ ಸ್ವಾಮಿಗಳು, ವೀರಭದ್ರಯ್ಯ ಸರಗಣಾಚಾರಿ, ಪುರಸಭೆ ಸದಸ್ಯೆ ಗಿರಿಜಮ್ಮ ಮಠ, ಮಹಾಂತಯ್ಯ ಗಚ್ಚಿನಮಠ ಇದ್ದರು. ಮಹಾಂತೇಶ ಮಠ ಸ್ವಾಗತಿಸಿ, ನಿರೂಪಿಸಿದರು. ವೀರೇಶ ದಮ್ಮೂರಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next