ಬೆಂಗಳೂರು: ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ನಡೆದಾಡುವ ದೇವರು ಎಂದೇ ಭಕ್ತ ಸಮೂಹದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳು ಸೇವೆ ಅಪಾರ. ಶಿಕ್ಷಣ, ದಾಸೋಹ, ವಸತಿ ಸೇರಿ ತ್ರಿವಿಧ ದಾಸೋಹ ಮೂರ್ತಿಗಳಾಗಿದ್ದ ಅವರು ವಿಶ್ವಕ್ಕೆ ಮಾದರಿಯಾಗಿದ್ದರು. ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಗೌರವ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠ ಪುರಾತನ ಮಠವಾಗಿದ್ದು, ಆರು ನೂರು ವರ್ಷಗಳ ಇತಿಹಾಸ ಹೊಂದಿದೆ. ಎಲ್ಲ ಜಾತಿಯ ಬಡವರಿಗೆ ಇಲ್ಲಿ ಉಚಿತ ಶಿಕ್ಷಣ, ವಸತಿ, ದಾಸೋಹ ನೀಡಲಾಗುತ್ತಿದೆ. ಡಾ.ಶಿವಕುಮಾರ ಸ್ವಾಮಿಗಳು ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ 130 ಶಾಲಾ-ಕಾಲೇಜುಗಳನ್ನು ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿ ಪ್ರಾರಂಭಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದರು.
ಸಿದ್ಧಗಂಗಾ ಮಠದಲ್ಲೂ 9 ಸಾವಿರ ವಿದ್ಯಾರ್ಥಿಗಳು ಶಿಕ್ಷಣ , ವಸತಿ, ದಾಸೋಹ ಪಡೆಯುತ್ತಿದ್ದು ಇದಕ್ಕೂ ಶಿವಕುಮಾರ ಸ್ವಾಮಿಗಳು ಶ್ರಮ ಅಪಾರ. ಏಳು ದಶಕಗಳಿಂದ ಸಿದ್ಧಗಂಗಾ ಮಠವು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ನಾಯಕರು, ನಾಗರಿಕರು, ಸಂಘ-ಸಂಸ್ಥೆಗಳ ಆಶಯವೂ ಡಾ.ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಗೌರವ ಕೊಡಬೇಕು ಎಂಬುದಾಗಿದೆ. ಹೀಗಾಗಿ, ಕೇಂದ್ರ ಸರ್ಕಾರವು ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.