ತುಮಕೂರು : ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಡಾಣ ಶಿವಕುಮಾರ ಸ್ವಾಮೀಜಿಯವರ 110ನೇ ವರ್ಷದ ಜನ್ಮದಿನೋತ್ಸವ ಶನಿವಾರ ನಡೆಯುತ್ತಿದ್ದು, ಸಿದ್ಧಗಂಗಾ ಮಠಕ್ಕೆ ರಾಜಕೀಯ ರಂಗ,ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀಗಳ ದರ್ಶನ ಪಡೆದರು.
ಹಳೆಯ ಮಠದಲ್ಲಿ ಬೆಳಗಿನ ಜಾವ ಶ್ರೀಗಳು ನಿತ್ಯ ಕರ್ಮಾಧಿ ಗಳನ್ನು ಮುಗಿಸಿ, ಶಿವಪೂಜೆ ಮುಗಿಸಿಕೊಂಡು, 9.30 ರ ವೇಳೆ ಮಠದಿಂದ ಹೊರ ಬಂದ ವೇಳೆ ಅವರನ್ನು ಮಂಗಳವಾದ್ಯ ಹಾಗೂ 110 ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಿ, ಮಠದ ಆವರಣದಲ್ಲಿ ನಿರ್ಮಿಸಿರುವ ವೇದಿಕೆಗೆ ಕರೆದೊಯ್ಯಲಾಯಿತು.
ನೂರಾರು ಮಠಾಧೀಶರಿಂದ ಸಾಮೂಹಿಕ ಪಾದಪೂಜೆ, ಪುಷ್ಪಾರ್ಚನೆ ನಡೆಸುತ್ತಿದ್ದಾರೆ.ಬೆಳಗ್ಗೆ 10.30ಕ್ಕೆ ಗುರುವಂದನೆ ಸಲ್ಲಿಸಲಾಯಿತು.
ರಾಜ್ಯಪಾಲ ವಜೂಭಾಯಿ ವಾಲಾ ಕಾರ್ಯಕ್ರಮ ಉದ್ಘಾಟಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದರು.
2 ಲಕ್ಷ ಜನರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಸಂಜೆ 6 ಗಂಟೆಗೆ ಶ್ರೀಗಳಿಗೆ ನಗರದ ನಾಗರಿಕರ ಪರವಾಗಿ ಗುರುವಂದನೆ ಸಲ್ಲಿಸಲಾಗುತ್ತಿದೆ.
ಪ್ರಧಾನಿ ಮೋದಿ ಶುಭಾಶಯ
ಶ್ರೀಗಳ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಶ್ರೀಗಳ ಸಮಾಜ ಸೇವೆ ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಬರೆದಿದ್ದಾರೆ.