Advertisement

Lok Sabha Election; ಬಿಜೆಪಿ ಟಿಕೆಟ್‌ ಸಿದ್ದೇಶ್ವರ್‌ಗೋ, ಪುತ್ರ ಅನಿತ್‌ಕುಮಾರ್‌ಗೋ?

12:03 AM Jan 24, 2024 | Team Udayavani |

ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರ ಕಳೆದ ಕೆಲವು ದಶಕಗಳಿಂದ ಬಿಜೆಪಿಯ ವಶದಲ್ಲಿದ್ದು, ಈ ಸಲ ಈ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿರುವುದು ಆ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Advertisement

ಪ್ರಸ್ತುತ 8 ವಿಧಾನಸಭೆ ಕ್ಷೇತ್ರಗಳಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದು, ಉಳಿದ 7 ಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ. ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ದಾವಣಗೆರೆ ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ಮತ್ತೆ ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಪಡೆ ಕಾರ್ಯತಂತ್ರ ರೂಪಿಸುತ್ತಿದೆ. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ಗೆ ಹೊಸ ಸವಾಲಾಗಿದ್ದು, ಎದುರಿಸಲು ರಣತಂತ್ರ ಹೆಣೆಯುತ್ತಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ ಅಷ್ಟೊಂದು ಪ್ರಬಲವಾಗಿಲ್ಲ. ಹಾಲಿ ಬಿಜೆಪಿ ಸಂಸದರು ಇರುವುದರಿಂದ ಬಿಜೆಪಿ ಅಭ್ಯರ್ಥಿಗಳೇ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾಲಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ನಿರಂತರವಾಗಿ (2004, 2009, 2014, 2019) ಜಯ ಗಳಿಸಿದ್ದು, ಈ ಬಾರಿಯೂ ಮತ್ತೂಮ್ಮೆ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ವಯಸ್ಸಿನ ಆಧಾರ, ನಿರಂತರವಾಗಿ ಒಂದೇ ವ್ಯಕ್ತಿಗೆ ಟಿಕೆಟ್‌ ಸೇರಿದಂತೆ ಇನ್ನಿತರ ಕಾರಣಗಳಿಂದ ಒಂದು ವೇಳೆ ಪಕ್ಷ ಟಿಕೆಟ್‌ ನಿರಾಕರಿಸಿದರೆ ಮಗ ಅನಿತ್‌ಕುಮಾರ್‌ಗೆ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಅವರು ಹೈಕಮಾಂಡ್‌ ಎದುರು ಇಟ್ಟಿದ್ದಾರೆ ಎನ್ನಲಾಗಿದೆ.

ರೇಸ್‌ನಲ್ಲಿ ರೇಣು
ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಈ ಬಾರಿ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಬಿಜೆಪಿಯಲ್ಲಿ ಸಂಸದ ಸಿದ್ದೇಶ್ವರ ಜತೆ ಪುತ್ರ ಅನಿತ್‌ಕುಮಾರ್‌, ರೇಣುಕಾಚಾರ್ಯ, ನಿವೃತ್ತ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ಹಾಗೂ ಮಾಜಿ ಶಾಸಕ ಟಿ. ಗುರುಸಿದ್ದನಗೌಡರ ಪುತ್ರ ವೈದ್ಯ ಡಾ| ರವಿಕುಮಾರ್‌ ಸೇರಿದಂತೆ ನಾಲ್ಕೈದು ಮಂದಿ ಹೊಸಬರು ಟಿಕೆಟ್‌ಗಾಗಿ ತೆರೆಮರೆಯ ಕಸರತ್ತು ನಡೆಸಿದ್ದಾರೆ.

“ಕೈ’ ವಶಕ್ಕೆ ಕಸರತ್ತು
ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್‌ ಅವರು ಸಕ್ರಿಯರಾಗಿದ್ದು, ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು ಎಂಬ ವದಂತಿ ಹಬ್ಬಿದೆ. ಮಲ್ಲಿಕಾರ್ಜುನ್‌ ಅವರೇ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ. ಇನ್ನು ಕಳೆದ ಚುನಾವಣೆಯಲ್ಲಿ ಉತ್ತಮ ಪೈಪೋಟಿ ಕೊಟ್ಟಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಇನ್ನೊಮ್ಮೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಇನ್‌ಸೈಟ್ಸ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ ಸಂಸ್ಥಾಪಕ ವಿನಯ್‌ಕುಮಾರ್‌ ನಿಖಿಲ್ ಕೊಂಡಜ್ಜಿ, ಶಿವಕುಮಾರ್‌ ಒಡೆಯರ್‌ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

Advertisement

ಹಾಲಿ ಸಂಸದರು: ಡಾ| ಜಿ.ಎಂ. ಸಿದ್ದೇಶ್ವರ

ಬಿಜೆಪಿ ಸಂಭಾವ್ಯರು
-ಡಾ| ಜಿ.ಎಂ. ಸಿದ್ದೇಶ್ವರ
-ಜಿ.ಎಸ್‌.ಅನಿತ್‌ಕುಮಾರ್‌
-ಎಂ.ಪಿ.ರೇಣುಕಾಚಾರ್ಯ
-ಕೆ.ಬಿ.ಕೊಟ್ರೇಶ್‌
-ಡಾ| ಟಿ.ಜಿ. ರವಿಕುಮಾರ್‌

ಕಾಂಗ್ರೆಸ್‌ ಸಂಭಾವ್ಯರು
-ಎಚ್‌.ಬಿ. ಮಂಜಪ್ಪ
-ಡಾ| ಪ್ರಭಾ ಮಲ್ಲಿಕಾರ್ಜುನ್‌
-ಜಿ.ಬಿ. ವಿನಯಕುಮಾರ್‌
-ಶಿವಕುಮಾರ್‌ ಒಡೆಯರ್‌
-ನಿಖಿಲ್ ಕೊಂಡಜ್ಜಿ

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next