ವಿಜಯಪುರ: ಸಿದ್ದೇಶ್ವರ ಶ್ರೀಗಳ ಅನಾರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರ ತಂಡ ಶ್ರೀಗಳ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಮತ್ತೊಂದೆಡೆ ಭಕ್ತರ ದಂಡು ಆಶ್ರಮದತ್ತ ಆಗಮಿಸುತ್ತಿದ್ದು, ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಆಶ್ರಮಕ್ಕೆ ಆಗಮಿಸದೇ ಭಕ್ತರು ಸಹಕರಿಸಬೇಕು ಎಂದು ಆಶ್ರಮದ ಸಾಧಕರು ಮನವಿ ಮಾಡುತ್ತಿದ್ದಾರೆ.
ಸಿದ್ದೇಶ್ವರ ಶ್ರೀಗಳಿಗೆ ಚಿಕಿತ್ಸೆಗಾಗಿ ಬಿಎಲ್ ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ತಂಡ ಟೊಂಕ ಕಟ್ಟಿದೆ. ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ವೈದ್ಯರಾದ ನ್ಯೈರೋಲಾಜಿಸ್ಟ್ ಡಾ.ಎಸ್.ಬಿ.ಪಾಟೀಲ, ಎಂ.ಡಿ. ಡಾ.ಮಲ್ಲಣ್ಣ ಮೂಲಿಮನಿ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ, ಶ್ರೀಗಳ ಆರೋಗ್ಯದ ಹಿತದೃಷ್ಟಿಯಿಂದ ಭಕ್ತರು ಆಶ್ರಮಕ್ಕೆ ಆಗಮಿಸದಂತೆ ಜ್ಞಾನ ಯೋಗಾಶ್ರಮದ ಬಸವಲಿಂಗ ಶ್ರೀಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಆಯೋಗದ ಅಂತಿಮ ವರದಿಯಿಂದ ಮೀಸಲಾತಿ ಕುರಿತು ಸ್ಪಷ್ಟನೆ: ಸಿಎಂ ಬೊಮ್ಮಾಯಿ
ಸಿದ್ದೇಶ್ವರ ಶ್ರೀಗಳು ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಗಣ್ಯರು, ಭಕ್ತರು ಶ್ರೀಗಳ ದರ್ಶನಾಶೀವಾರ್ದ ಪಡೆಯಲು ಆಶ್ರಮದ ಕಡೆಗೆ ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಆಶ್ರಮದ ಮಾರ್ಗದರ್ಶಿ ಜನ ಸಂದಣಿ ನಿಗ್ರಹಿಸಲು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ.
ಮತ್ತೊಂದೆಡೆ ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ, ಎಸ್ಪಿ ಆನಂದ ಕುಮಾರ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಆರೋಗ್ಯ ವಿಚಾರಿಸಿದ ಸುತ್ತೂರುಶ್ರೀ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಭಾನುವಾರ ನಗರಕ್ಕೆ ಆಗಮಿಸಿ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದರು.
ಸುತ್ತೂರು ಶ್ರೀಗಳೊಂದಿ ಬಂದಿದ್ದ ಸಾಧಕರು, ಮಠಾಧೀಶರಲ್ಲಿ ಕೇವಲ 2-3 ಮಠಾಧೀಶರನ್ನು ಮಾತ್ರ ಆಶ್ರಮದ ಶ್ರೀಗಳು ಒಳಗೆ ಬಿಟ್ಟಿದ್ದಾರೆ.